ತುಮುಲ

ಅದ್ಯಾವ ವಸ್ತುವಿನಿಂದ ಮಾದಿದ್ದಾನೊ ದೇವ್ರು ಈ ಮನಸ್ಸನ್ನ, ಎಷ್ಟು ಮೄದು, ಎಷ್ಟು ಸೂಕ್ಶ್ಮ ಅಂತೀರ, ಒಂದು ವಿಷಯ ಇದರ ಒಳಗೆ ಹೊಕ್ಕಿದ್ರೆ ಸಾಕು, ಹುಳದ ಹಾಗೆ ಕೊರೆಯುತ್ತಲೇ ಹೊಗುತ್ತೆ. ಮೈಗೆ ಆದ ಗಾಯ ಮಾಸಿದರೂ ಮನಸ್ಸಿಗಾದ ಗಾಯ ಮಾಸದು. ಸಂತೋಷದ ಕ್ಶಣಗಳು ನೆನಪಿನಲ್ಲಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಸಮಯ ಕಷ್ಟದ, ದುಃಖದ ಕ್ಷಣಗಳು ನೆನಪಿನಲ್ಲಿರುತ್ತವೆ. ಇದು ಎಲ್ಲರಲ್ಲಿರುವ ಸಾಮಾನ್ಯ ಗುಣವಾದರೂ ಕೆಲವರಲ್ಲಿ ಇಂತಹ ಕಹಿ ಘಟನೆಗಳನ್ನು ಮರೆಯುವ ಅಥವಾ ತೊರೆಯುವ ಗುಣ ಹೆಚ್ಚಿದ್ದರೆ ಇನ್ನು ಕೆಲವರಲ್ಲಿ ಅದೇ ಅದೇ ವಿಷಯಗಳು ಮನಸ್ಸಿನಲ್ಲಿ ಮನೆ ಮಾಡಿ ಕುಳಿತುಕೊಂಡುಬಿಡುತ್ತವೆ. ಇಂತಹ ಜನರಲ್ಲಿ ಒಳ್ಳೆಯ ಉದಾಹರಣೆ ಎಂದರೆ ನಾನು. ನಡೆದ ಕಹಿ ಘಟನೆಗಳು, ಕಹಿ ಉಂಟುಮಾಡಿದ ಜನರು, ಅವರ ದುಃಖಕ್ಕೆ, ಕಷ್ಟಕ್ಕೆ, ಸಮಯಕ್ಕೆ ಮಾತ್ರ ನಮ್ಮಿಂದ ಉಪಯೋಗ ಪಡೆದುನಮ್ಮ ಕಷ್ಟಕಾಲದಲ್ಲಿ ಮುಖ ತಿರುಗಿಸುವ ಬಂಧುಗಳಿ, ಮಿತ್ರರು, ಕೆಲವು ಕಟು ಮಾತುಗಳು, ಅನುಭವಿಸಿದ ಕೆಲವು ಕಷ್ಟದ ದಿನಗಳು ಇವುಗಳನ್ನು ಎಷ್ಟು ಮರೆಯಬೇಕೆಂದು ಅಂದುಕೊಂಡರೂ ಮರಳಿ ಮರಳಿ ಬಂದು ಕಾಡುತ್ತವೆ. ಮುಂದೆಯೂ ಇಂತಹ ಘಟನೆಗಳು ನಡೆಯಬಹುದು ಎಂದು ಮನಸ್ಸು ಹೆದರುತ್ತದೆ, ಕಳವಳಗೊಳ್ಳುತ್ತದೆ. ರಾತ್ರಿ ಮಲಗಿದಾಗ, ಉುಟ ಮಾಡುತ್ತಿರುವಾಗ, ಪ್ರಯಾಣಿಸುತ್ತಿರುವಾಗ,ಕುಳಿತಾಗ, ನಿಂತಾಗ ಯಾವಾಗ ಬೇಕಾದರೂ ಕರೆಯದೇ ಬರುವ ಅತಿಥಿಯಂತೆ ಒಕ್ಕರಿಸಿಬಿಡುತ್ತದೆ.

ಅದೇ ನನ್ನ ಪತಿ ಇದಕ್ಕೆ ವ್ಯತಿರಿಕ್ತ. ಆದದ್ದಾಯಿತು ಮರೆತುಬಿಡಬೇಕು ಎನ್ನುವ ವ್ಯಕ್ತಿ. ನಮ್ಮ ಕಷ್ಟದ ಸಮಯಕ್ಕಾಗದೆ ಮುಖ ತಿರುಗಿಸಿದವರಿಗೂ ಸಹ ಅವರ ಕಷ್ಟಕಾಗುವ ಗುಣ. ಕಹಿ ಮಾತುಗಳು, ಘಟನೆಗಳನ್ನು ಹಿಂದೆ ಬಿಟ್ಟು ಮುಂದೆ ನಡೆಯಬೇಕು ಎನ್ನುವ ಸ್ವಭಾವ. ಇದೆ ವಿಷಯಕ್ಕೆ ನಮ್ಮಿಬ್ಬರಲ್ಲಿ ಎಷ್ಟೋ ಬಾರಿ ವಾದ ವಿವಾದ, ವಿಚಾರ ವಿಮರ್ಶೆಗಳಾಗಿವೆ. ಆದರೂ ಇಂದಿನವರೆಗೂ ಅದಕ್ಕೊಂದು ಪೂರ್ಣವಿರಾಮ ನೀಡಲಾಗಲಿಲ್ಲ. ಎಲ್ಲ ಕಹಿಯನ್ನು ಮರೆತು ನೆಮ್ಮದಿಯಿಂದ ಇರಬೇಕು, ಹಿಂದೆ ನಡೆದದ್ದನ್ನು ನೆನಪಿಸಿಕೊಂಡು ವ್ಯಥೆ ಪಡಬಾರದು, ನಮಗೆ ನೋವು ನೀಡಿದವರಿಗೂ ಪ್ರೀತಿ ತೋರಿಸು, ಅವರ ಕಷ್ಟಕಾಗು ಎನ್ನುವುದು ನನ್ನವರ ತತ್ವವಾದರೆ, ನನ್ನ ತತ್ವ ಇದಕ್ಕೆ ಸ್ವಲ್ಪ ವಿರುಧ್ಧ. ಎಲ್ಲ ಕಹಿಯನ್ನು ಮರೆತು ನೆಮ್ಮದಿಯಿಂದ ಇರಬೇಕು, ಹಿಂದೆ ನಡೆದದ್ದನ್ನು ನೆನಪಿಸಿಕೊಂಡು ವ್ಯಥೆ ಪಡಬಾರದು ಎಂಬ ಮಾತುಗಳನ್ನು ಒಪ್ಪುತ್ತೇನೆ ಮತ್ತು ನಾನು ಕೂಡ ಪಾಲಿಸಲು ಯತ್ನಿಸುತ್ತೇನಾದರೂ, ನೀ ನನಗಿದ್ದಾರೆ ನಾ ನಿನಗೆ, ನಿನ್ನಿಂದ ನನಗೆ ನೋವುಂಟಾಗುವುದಿದ್ದರೆ ನಾನು ನಿನ್ನಿಂದ ದೂರವೇ ಉಳಿಯುತ್ತೇನೆ, ಪ್ರೀತಿ ಇರಲಿ, ಕಾಳಜಿ ಇರಲಿ, ಸಂಬಂಧವಿರಲಿ, ಸ್ನೇಹವಿರಲಿ ಎಲ್ಲವೂ ಎರಡು ಕಡೆಯಿಂದಲೂ ಇರಬೇಕು. ಒಂದೇ ಕಡೆಯಿಂದ ಕೊಡುವ ಒಂದು ಕೈ ಚಪ್ಪಾಳೆ ಆಗಬಾರದು ಎನ್ನುವುದು ನನ್ನ ಪಾಲಿಸಿ. ಸ್ನೇಹ, ಪ್ರೀತಿ, ಕರ್ತವ್ಯ ಎಲ್ಲವನ್ನು ನನ್ನ ಕಡೆಯಿಂದ ಸಾಧ್ಯವಾದಷ್ಟು ನೀಡುತ್ತೇನಾದರೂ ಎದುರಿನವರಿಂದಲೂ ಅದನ್ನೇ ಬಯಸುತ್ತೇನೆ. ಇದೆ ವಿಷಯಕ್ಕೆ ಎಷ್ಟೋ ಬಾರಿ ಮನ ನೊಂದಿದ್ದು ಇದೆ. ಈ ರೀತಿ ಬಯಸದೇ ತನ್ನ ಕೈಲಾದದ್ದನ್ನು ನೀಡುವ ನನ್ನವರು ಕೆಲವೊಮ್ಮೆ ನನ್ನ ಕಣ್ಣಿಗೆ ತ್ಯಾಗಿಯಂತೆ, ವಿರಾಗಿಯಂತೆ ಕಂಡಿದ್ದು ಇದೆ…ಇವೆಲ್ಲ ತುಮುಲ, ತಳಮಳಗಳ ಜೊತೆಗೆ ಆಗಾಗ ಸಂತೋಷದ ಕ್ಷಣಗಳು ಮಿಂಚಿನಂತೆ ಬಂದು, ನಕ್ಷತ್ರದಂತೆ ಮಿನುಗಿ ಹೋಗುತ್ತಿರುತ್ತವೆ. ಕೆಲವು ಸಂತೋಷದ ಕ್ಷಣಗಳಲ್ಲಿ ಈ ಸಮಯ ಹೀಗೆ ಇರಬಾರದೇ ಎನ್ನಿಸಿದರೆ, ದುಃಖದ ಸಂದರ್ಭದಲ್ಲಿ ಈ ಸಮಯ ಯಾವಾಗ ಕಳೆಯುವುದೋ ಎನ್ನಿಸಿಬಿಡುತ್ತದೆ, ಸುಖದಲ್ಲಿ ನನ್ನಷ್ಟು ಸುಖಿ ಬೆರಳೆಣಿಕೆಯಷ್ಟು ಎನ್ನಿಸಿದರೆ ಕಷ್ಟದಲ್ಲಿ ನನ್ನಷ್ಟು ಅಸುಖಿ ಪ್ರಪಂಚದಲ್ಲಿ ಯಾರೂ ಇಲ್ಲ ಎಂಬ ಭಾವನೆ. ಜೀವನವೆಂದರೆ ಇದೇ ಏನು? ಮನಸ್ಸೆಂದರೆ ಹೀಗೇ ಏನು? ಎಲ್ಲರಿಗೂ ಹೀಗೆ ಆಗುತ್ತಾ? ಆಗಬೇಕಾ? ಅನ್ನಿಸುತ್ತಾ? ಅನ್ನಿಸಬೇಕಾ? ಎಷ್ಟೊಂದು ಪ್ರಶ್ನೆಗಳು ಮನದಲ್ಲಿ….ಉತ್ತರ?

Published in: on ಏಪ್ರಿಲ್ 29, 2010 at 4:54 AM  Comments (5)  

The URI to TrackBack this entry is: https://ranjanahegde.wordpress.com/2010/04/29/%e0%b2%a4%e0%b3%81%e0%b2%ae%e0%b3%81%e0%b2%b2/trackback/

RSS feed for comments on this post.

5 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

  1. ನಿಜ ನೀವು ಹೇಳೋ ಮಾತು ಮನಸ್ಸಿನಲ್ಲಿ ಹಲವು ತುಮುಲಗಳು ಬಾದಿಸುತ್ತವೆ. ಎಲ್ಲರಲ್ಲೂ ಇದೇ ರೀತಿ ದ್ವಂದ್ವ ವಿಚಾರಗಳು ನೆಡೆಯುತ್ತಲೇ ಇರುತ್ತವೆ. ಜೀವನ ಹೇಗೆ ಬರುತ್ತೋ ಹಾಗೆ ಸ್ವೀಕರಿಸಿಕೊಳ್ಳಬೇಕಾದವರು ನಾವುಗಳು ಅಲ್ಲವೆ…….ಒಳ್ಳೆಯ ಲೇಖನ ಯೋಚಿಸುವಂತದ್ದೂ ಕೂಡ.

    • ತಮ್ಮ ಪ್ರೊತ್ಸಾಹಕ್ಕೆ ತುಂಬಾ ಧನ್ಯವಾದಗಳು ಸುಗುಣಾ

  2. ರಂಜನಾ…

    ನಮಗೆ ಪ್ರೀತಿ ಇರುವವರು ಏನು ಹೇಳಿದರೂ ನಮಗೆ ಅದು “ಅಪಥ್ಯವಾಗುವದಿಲ್ಲ” ಅಲ್ಲವಾ ?
    ಅದೇ… ಮಾತನ್ನು…
    ನಮಗೆ ನಮಗೆ ಸ್ವಲ್ಪ ಆಗದವರು ಹೇಳಿದರೆ ಬಹಳ ನೋವು, ಕೆಂಡಾ ಮಂಡಲ ಕೋಪ ಬರುತ್ತದೆ…

    ನಿಮ್ಮ ಯಜಮಾನರು ಹೇಳಿದ್ದು ಸರಿ…

    ಆದದ್ದನ್ನು ಮರೆತು ಬಿಡ ಬೇಕು…
    ಮರೆವು..
    ಒಂದು ವರ…

    ಮನಸ್ಸಿನ ತುಮುಲಗಳನ್ನು ತುಂಬಾ ಚೆನ್ನಾಗಿ ಬಿಂಬಿಸಿದ್ದೀರಿ…

    ಅಭಿನಂದನೆಗಳು…

    • ಪ್ರಕಾಶಣ್ಣಾ,
      ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ನಮಗೆ ಇಷ್ಟವಾಗುವವರು ಏನಾದರೂ ಅಂದರೆ ತೊಂದರೆ ಇಲ್ಲ, ಆಗದಿದ್ದವರು ಅಂದರೆ ಮನಸ್ಸಿಗೆ ನೋವು, ಕೋಪ. ಇದು ನಿಜ. ಆದರೆ ನಮಗೆ ಇಷ್ಟವಾಗುವವರೂ, ಹಿತೈಶಿಗಳು ಎಂದುಕೊಂಡವರಿಂದಲು ಸಹ ಕೆಲವೊಮ್ಮೆ ನಾನು ಮೇಲೆ ಹೇಳಿದ ಕಾರಣಗಲಿಂದ ಮನ ನೊಯುತ್ತದೆ. ಆಗದಿದ್ದವರು ಮನ ನೊಯಿಸಿದಾಗ ಮರೆತಷ್ಟು ಬೇಗ ಇಷ್ಟವಾಗುವವರು ಅಥವಾ ಹಿತೈಶಿಗಳು ಅನ್ನಿಸಿಕೊಂಡವರು ನೊಯಿಸಿದಾಗ ಮರೆಯಲಾಗುವುದಿಲ್ಲ….ಅದೇ ನನ್ನ ತುಮುಲ..

  3. Dear Ranjana,

    Simply brilliant!! good command in language and also very dynamically told the “Tumula” Common kiddo come out with all these tumulas and god bless u..


ನಿಮ್ಮ ಟಿಪ್ಪಣಿ ಬರೆಯಿರಿ