ಇಂದು ಅವಳಿಲ್ಲ


ಜೀವನದಲ್ಲಿ ಯಾವುದೂ ಗ್ಯಾರಂಟಿ ಇಲ್ಲ, ಇವತ್ತು ಇರೋರು ನಾಳೆ ಇರ್ತಾರೆ ಅನ್ನೋ ನಂಬಿಕೆ ಇಲ್ಲ, ಏನಪ್ಪಾ ಇದು ? ವಿರಾಗಿ ಥರಾ ಮಾತಾಡ್ತಾ ಇದಾಳೆ ಅಂತ ಅಂದುಕೊಳ್ಳಬೇಡಿ, ನಾನು ಹೀಗೆ ಅನ್ನೋದಕ್ಕೆ ಕಾರಣ ಇದೆ. ಮೊನ್ನೆ ಮೊನ್ನೆ ದೀಪಾವಳಿಯಲ್ಲಿ ಅವಳು ಎಷ್ಟು ಚೈತನ್ಯ ತುಂಬಿಕೊಂಡು ನಗು ನಗ್ತಾ ಇದ್ದಳು ಅನ್ನುತ್ತೀರಾ, ಯಾವುದೇ ರೋಗವಿಲ್ಲದೇ ಆರೋಗ್ಯವಾಗಿ ಇದ್ದಳು. ಸರಿಯಾಗಿ ಆಹಾರ ತೆಗೆದುಕೊಳ್ಳುತ್ತಾ ಇದ್ದಳು. ನೋಡುವುದಕ್ಕೂ ಬಹಳ ಸುಂದರವಾಗಿ ಕಾಣುತ್ತಿದ್ದಳು. ಅವಳ ಸೌಂದರ್ಯ ನೋಡಿ ಪಕ್ಕದಲ್ಲಿ ನಿಂತು ಫೋಟೋ ಬೇರೆ ತೆಗೆದುಕೂಂಡಿದ್ವಿ. ಆದರೆ ಇಷ್ಟು ಬೇಗ ಅವಳು ನಮ್ಮಿಂದ ದೂರ ಹೊರಟು ಹೋಗ್ತಾಳೆ ಅಂದುಕೊಂಡಿರಲಿಲ್ಲ. ಈ ಪ್ರಕೃತಿ ವಿಕೋಪಕ್ಕೆ ಅವಳು ಇಂದು ಬಲಿಯಾಗಿದ್ದಾಳೆ. ಗಿಡ ಮರಗಳು ಕಡಿಮೆಯಾಗಿ, ವಾಹನಗಳು ಹೆಚ್ಚಾಗಿ ವಾತಾವರಣದಲ್ಲಿ ಉಂಟಾದ ಅತಿಯಾದ ಉಷ್ಣತೆ, ಬಿಸಿಲಿಗೆ ಇಂದು ಅವಳು ಬಲಿಯಾಗಿದ್ದಾಳೆ, ತಂಪಾದ ನೀರೆರೆದರು ಕೂಡ ಅವಳನ್ನು ಉಳಿಸಿಕೊಳ್ಳಲಾಗಲಿಲ್ಲ. ಅವಳು ಅಂದ್ರೆ ಯಾರು ಅಂತ ಪರಿಚಯನೇ ಮಾಡಿಕೊಡಲಿಲ್ಲ ನೋಡಿ. ಅವಳು ನಾನು ದಿನಾಲೂ ನೋಡಿ ಸಂತೋಷ ಪಡುವ ನಮ್ಮ ಮನೆಯ ಮುಂದಿನ ಹಸಿರಿನಿಂದ ನಳನಳಿಸುತ್ತಿದ್ದ ಬಳ್ಳಿ. ಇಂದು ಬರೀ ಅವಳ ಅಸ್ತಿಪಂಜರ ಇದೆ. ಸತ್ತಿರುವ ಅವಳನ್ನು ಕಿತ್ತೆಸೆಯುವ ತಯಾರಿ ನಡೆಯುತ್ತಿದೆ. ಇದನ್ನೆಲ್ಲ ನೋಡಿ ನನ್ನ ಮನಸ್ಸಿನಲ್ಲಿ ಏನೋ ಒಂದು ಕಳವಳ. ಮುಂದೊಂದು ದಿನ ಗಿಡಮರಗಳನ್ನಿ ಇಲ್ಲವಾಗಿಸಿದ ತಪ್ಪಿಗೆ ಪ್ರಕೃತಿಯ ಕೋಪಕ್ಕೆ ನಾವೇ ಬಲಿಯಾಗಬೇಕೇನೋ ಎನ್ನುವ ಚಿಂತೆ….

Published in: on ಏಪ್ರಿಲ್ 30, 2010 at 2:23 AM  Comments (4)  

ತುಮುಲ

ಅದ್ಯಾವ ವಸ್ತುವಿನಿಂದ ಮಾದಿದ್ದಾನೊ ದೇವ್ರು ಈ ಮನಸ್ಸನ್ನ, ಎಷ್ಟು ಮೄದು, ಎಷ್ಟು ಸೂಕ್ಶ್ಮ ಅಂತೀರ, ಒಂದು ವಿಷಯ ಇದರ ಒಳಗೆ ಹೊಕ್ಕಿದ್ರೆ ಸಾಕು, ಹುಳದ ಹಾಗೆ ಕೊರೆಯುತ್ತಲೇ ಹೊಗುತ್ತೆ. ಮೈಗೆ ಆದ ಗಾಯ ಮಾಸಿದರೂ ಮನಸ್ಸಿಗಾದ ಗಾಯ ಮಾಸದು. ಸಂತೋಷದ ಕ್ಶಣಗಳು ನೆನಪಿನಲ್ಲಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಸಮಯ ಕಷ್ಟದ, ದುಃಖದ ಕ್ಷಣಗಳು ನೆನಪಿನಲ್ಲಿರುತ್ತವೆ. ಇದು ಎಲ್ಲರಲ್ಲಿರುವ ಸಾಮಾನ್ಯ ಗುಣವಾದರೂ ಕೆಲವರಲ್ಲಿ ಇಂತಹ ಕಹಿ ಘಟನೆಗಳನ್ನು ಮರೆಯುವ ಅಥವಾ ತೊರೆಯುವ ಗುಣ ಹೆಚ್ಚಿದ್ದರೆ ಇನ್ನು ಕೆಲವರಲ್ಲಿ ಅದೇ ಅದೇ ವಿಷಯಗಳು ಮನಸ್ಸಿನಲ್ಲಿ ಮನೆ ಮಾಡಿ ಕುಳಿತುಕೊಂಡುಬಿಡುತ್ತವೆ. ಇಂತಹ ಜನರಲ್ಲಿ ಒಳ್ಳೆಯ ಉದಾಹರಣೆ ಎಂದರೆ ನಾನು. ನಡೆದ ಕಹಿ ಘಟನೆಗಳು, ಕಹಿ ಉಂಟುಮಾಡಿದ ಜನರು, ಅವರ ದುಃಖಕ್ಕೆ, ಕಷ್ಟಕ್ಕೆ, ಸಮಯಕ್ಕೆ ಮಾತ್ರ ನಮ್ಮಿಂದ ಉಪಯೋಗ ಪಡೆದುನಮ್ಮ ಕಷ್ಟಕಾಲದಲ್ಲಿ ಮುಖ ತಿರುಗಿಸುವ ಬಂಧುಗಳಿ, ಮಿತ್ರರು, ಕೆಲವು ಕಟು ಮಾತುಗಳು, ಅನುಭವಿಸಿದ ಕೆಲವು ಕಷ್ಟದ ದಿನಗಳು ಇವುಗಳನ್ನು ಎಷ್ಟು ಮರೆಯಬೇಕೆಂದು ಅಂದುಕೊಂಡರೂ ಮರಳಿ ಮರಳಿ ಬಂದು ಕಾಡುತ್ತವೆ. ಮುಂದೆಯೂ ಇಂತಹ ಘಟನೆಗಳು ನಡೆಯಬಹುದು ಎಂದು ಮನಸ್ಸು ಹೆದರುತ್ತದೆ, ಕಳವಳಗೊಳ್ಳುತ್ತದೆ. ರಾತ್ರಿ ಮಲಗಿದಾಗ, ಉುಟ ಮಾಡುತ್ತಿರುವಾಗ, ಪ್ರಯಾಣಿಸುತ್ತಿರುವಾಗ,ಕುಳಿತಾಗ, ನಿಂತಾಗ ಯಾವಾಗ ಬೇಕಾದರೂ ಕರೆಯದೇ ಬರುವ ಅತಿಥಿಯಂತೆ ಒಕ್ಕರಿಸಿಬಿಡುತ್ತದೆ.

ಅದೇ ನನ್ನ ಪತಿ ಇದಕ್ಕೆ ವ್ಯತಿರಿಕ್ತ. ಆದದ್ದಾಯಿತು ಮರೆತುಬಿಡಬೇಕು ಎನ್ನುವ ವ್ಯಕ್ತಿ. ನಮ್ಮ ಕಷ್ಟದ ಸಮಯಕ್ಕಾಗದೆ ಮುಖ ತಿರುಗಿಸಿದವರಿಗೂ ಸಹ ಅವರ ಕಷ್ಟಕಾಗುವ ಗುಣ. ಕಹಿ ಮಾತುಗಳು, ಘಟನೆಗಳನ್ನು ಹಿಂದೆ ಬಿಟ್ಟು ಮುಂದೆ ನಡೆಯಬೇಕು ಎನ್ನುವ ಸ್ವಭಾವ. ಇದೆ ವಿಷಯಕ್ಕೆ ನಮ್ಮಿಬ್ಬರಲ್ಲಿ ಎಷ್ಟೋ ಬಾರಿ ವಾದ ವಿವಾದ, ವಿಚಾರ ವಿಮರ್ಶೆಗಳಾಗಿವೆ. ಆದರೂ ಇಂದಿನವರೆಗೂ ಅದಕ್ಕೊಂದು ಪೂರ್ಣವಿರಾಮ ನೀಡಲಾಗಲಿಲ್ಲ. ಎಲ್ಲ ಕಹಿಯನ್ನು ಮರೆತು ನೆಮ್ಮದಿಯಿಂದ ಇರಬೇಕು, ಹಿಂದೆ ನಡೆದದ್ದನ್ನು ನೆನಪಿಸಿಕೊಂಡು ವ್ಯಥೆ ಪಡಬಾರದು, ನಮಗೆ ನೋವು ನೀಡಿದವರಿಗೂ ಪ್ರೀತಿ ತೋರಿಸು, ಅವರ ಕಷ್ಟಕಾಗು ಎನ್ನುವುದು ನನ್ನವರ ತತ್ವವಾದರೆ, ನನ್ನ ತತ್ವ ಇದಕ್ಕೆ ಸ್ವಲ್ಪ ವಿರುಧ್ಧ. ಎಲ್ಲ ಕಹಿಯನ್ನು ಮರೆತು ನೆಮ್ಮದಿಯಿಂದ ಇರಬೇಕು, ಹಿಂದೆ ನಡೆದದ್ದನ್ನು ನೆನಪಿಸಿಕೊಂಡು ವ್ಯಥೆ ಪಡಬಾರದು ಎಂಬ ಮಾತುಗಳನ್ನು ಒಪ್ಪುತ್ತೇನೆ ಮತ್ತು ನಾನು ಕೂಡ ಪಾಲಿಸಲು ಯತ್ನಿಸುತ್ತೇನಾದರೂ, ನೀ ನನಗಿದ್ದಾರೆ ನಾ ನಿನಗೆ, ನಿನ್ನಿಂದ ನನಗೆ ನೋವುಂಟಾಗುವುದಿದ್ದರೆ ನಾನು ನಿನ್ನಿಂದ ದೂರವೇ ಉಳಿಯುತ್ತೇನೆ, ಪ್ರೀತಿ ಇರಲಿ, ಕಾಳಜಿ ಇರಲಿ, ಸಂಬಂಧವಿರಲಿ, ಸ್ನೇಹವಿರಲಿ ಎಲ್ಲವೂ ಎರಡು ಕಡೆಯಿಂದಲೂ ಇರಬೇಕು. ಒಂದೇ ಕಡೆಯಿಂದ ಕೊಡುವ ಒಂದು ಕೈ ಚಪ್ಪಾಳೆ ಆಗಬಾರದು ಎನ್ನುವುದು ನನ್ನ ಪಾಲಿಸಿ. ಸ್ನೇಹ, ಪ್ರೀತಿ, ಕರ್ತವ್ಯ ಎಲ್ಲವನ್ನು ನನ್ನ ಕಡೆಯಿಂದ ಸಾಧ್ಯವಾದಷ್ಟು ನೀಡುತ್ತೇನಾದರೂ ಎದುರಿನವರಿಂದಲೂ ಅದನ್ನೇ ಬಯಸುತ್ತೇನೆ. ಇದೆ ವಿಷಯಕ್ಕೆ ಎಷ್ಟೋ ಬಾರಿ ಮನ ನೊಂದಿದ್ದು ಇದೆ. ಈ ರೀತಿ ಬಯಸದೇ ತನ್ನ ಕೈಲಾದದ್ದನ್ನು ನೀಡುವ ನನ್ನವರು ಕೆಲವೊಮ್ಮೆ ನನ್ನ ಕಣ್ಣಿಗೆ ತ್ಯಾಗಿಯಂತೆ, ವಿರಾಗಿಯಂತೆ ಕಂಡಿದ್ದು ಇದೆ…ಇವೆಲ್ಲ ತುಮುಲ, ತಳಮಳಗಳ ಜೊತೆಗೆ ಆಗಾಗ ಸಂತೋಷದ ಕ್ಷಣಗಳು ಮಿಂಚಿನಂತೆ ಬಂದು, ನಕ್ಷತ್ರದಂತೆ ಮಿನುಗಿ ಹೋಗುತ್ತಿರುತ್ತವೆ. ಕೆಲವು ಸಂತೋಷದ ಕ್ಷಣಗಳಲ್ಲಿ ಈ ಸಮಯ ಹೀಗೆ ಇರಬಾರದೇ ಎನ್ನಿಸಿದರೆ, ದುಃಖದ ಸಂದರ್ಭದಲ್ಲಿ ಈ ಸಮಯ ಯಾವಾಗ ಕಳೆಯುವುದೋ ಎನ್ನಿಸಿಬಿಡುತ್ತದೆ, ಸುಖದಲ್ಲಿ ನನ್ನಷ್ಟು ಸುಖಿ ಬೆರಳೆಣಿಕೆಯಷ್ಟು ಎನ್ನಿಸಿದರೆ ಕಷ್ಟದಲ್ಲಿ ನನ್ನಷ್ಟು ಅಸುಖಿ ಪ್ರಪಂಚದಲ್ಲಿ ಯಾರೂ ಇಲ್ಲ ಎಂಬ ಭಾವನೆ. ಜೀವನವೆಂದರೆ ಇದೇ ಏನು? ಮನಸ್ಸೆಂದರೆ ಹೀಗೇ ಏನು? ಎಲ್ಲರಿಗೂ ಹೀಗೆ ಆಗುತ್ತಾ? ಆಗಬೇಕಾ? ಅನ್ನಿಸುತ್ತಾ? ಅನ್ನಿಸಬೇಕಾ? ಎಷ್ಟೊಂದು ಪ್ರಶ್ನೆಗಳು ಮನದಲ್ಲಿ….ಉತ್ತರ?

Published in: on ಏಪ್ರಿಲ್ 29, 2010 at 4:54 AM  Comments (5)  

ಮರು ಹುಟ್ಟು

ಬ್ಲಾಗ್ ಬರೀದೆ ಹತ್ರ ಹತ್ರ ಒಂದು ವರ್ಷ ಅಯ್ತು. ಮಧ್ಯದಲ್ಲಿ ಕೆಲವು ಖಾಸಗಿ ತಾಪತ್ರಯಗಳು ಮನಸ್ಸನ್ನು ಶಾಂತವಾಗಿರುವುದಕ್ಕೆ ಬಿಡ್ತಾ ಇರಲಿಲ್ಲ. ಈ ಮನಸ್ಸೆ ಹೀಗೆ ಕಣ್ರಿ, ಒಂದು ಸಾರಿ ಚಂಚಲತೆಯನ್ನು ಕಲಿತುಕೊಂಡು ಬಿಟ್ರೆ ಹುಚ್ಚು ಕುದುರೆಯ ಹಾಗೆ ಅಲೆಯುತ್ತಲೇ ಇರುತ್ತೆ. ನಾನು ಬರೀಬೇಕು ಅನ್ನೊ ಅಸೆ ಏನೊ ಇತ್ತು, ಜೊತೆಗೆ ನಿಮ್ಮ ಹತ್ರ ಹಂಚಿಕೊಳ್ಳೊ ವಿಷಯಾನೂ ಇತ್ತು, ಆದ್ರೆ ಮನಸ್ಸನ್ನು ಮಾತ್ರ ಒಂದು ಕಡೆ ನಿಲ್ಲಿಸಿ ಬರಹದತ್ತ ಗಮನ ಹರಿಸೋಕೆ ಆಗ್ತಾನೆ ಇರ್ಲಿಲ್ಲ. ಸ್ನೇಹಿತ, ಸ್ನೇಹಿತೆಯರೆಲ್ಲ ಯಾಕೆ ಬರೀತಾ ಇಲ್ಲ ಅಂತ ಕೇಳೋಕೆ ಶುರು ಮಾಡಿದ್ರು, ನನ್ನ ಪತಿ ಕೂಡ ಯಾಕೆ ನಿನ್ನ ಬರವಣಿಗೆ ನಿಲ್ಲಿಸಿಬಿಟ್ಟಿದ್ದೀಯ? ಬರಿ ಬರಿ ಅಂತ ಹೇಳ್ತಾನೆ ಇದ್ರು. ಅಂತೂ ಇವತ್ತು ಬರೀಲೇ ಬೇಕು ಅಂತ ಗಟ್ಟಿ ಮನಸ್ಸು ಮಾಡಿ ಕೂತುಬಿಟ್ಟಿದ್ದೀನಿ. ಮನಸ್ಸಿನಾಳದಲ್ಲಿ ಅವಿತಿಟ್ಟುಕೊಂಡಿದ್ದ ಎಷ್ಟೋ ವಿಷಯಗಳು ನನ್ನ ಬಗ್ಗೆ ಬರಿ, ನನ್ನ ಬಗ್ಗೆ ಬರಿ ಅಂತ ಪೈಪೋಟಿ ಮಾಡ್ತಾ ಇವೆ. ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವ ಹೊಸ ಉತ್ಸಾಹದೊಂದಿಗೆ ಬ್ಲಾಗನ್ನು ಮರು ಪ್ರಾರಂಭ ಮಾಡ್ತಾ ಇದೀನಿ. ಮೊದಲಿನ ಹಾಗೆ ಬನ್ನಿ, ಓದಿ, ಅಭಿಪ್ರಾಯ ತಿಳಿಸಿ ಪ್ರೋತ್ಸಾಹಿಸಿ.

Published in: on ಏಪ್ರಿಲ್ 29, 2010 at 3:27 AM  Comments (1)