ಓ ನನ್ನ ಪ್ರೇಮವೇ…

ನೀ ಮರವಾಗಿ ಆಸರೆ ನೀಡೆ
ನಾ ಲತೆಯಾಗಿ ಬಳಸಿ ನಿಲ್ಲುವೆ ನಿನ್ನ

ನೀ ಸಾಗರವಾಗಿ ನನ್ನ ನಿನ್ನೊಳು ಹುದುಗಿಸಿಕೊಳ್ಳೆ
ನಾ ನದಿಯಾಗಿ ಓಡೋಡಿ ಬರುವೆ ನಿನ್ನ ಸೇರಲು

ನೀ ಮುನ್ನಡೆಯೆ ದಾರಿ ದೀಪವಾಗಿ
ನಾ ಬರುವೆ ನಿನ್ನ ಹೆಜ್ಜೆ ಗುರುತಾಗಿ

ನೀ ದುಂಬಿಯಾಗಿ ಅಲೆಯುತಿರೆ
ನಾ ಕಾಯುತಿಹೆ ಹೂವಾಗಿ ಮಕರಂದ ನೀಡಲು

ನೀ ಹನಿಯಾಗಿ ವರ್ಷಧಾರೆಯಾಗಿ ಸುರಿಯುತಿರೆ
ನಾ ಕಾಯುತಿಹೆ ಭುವಿಯಾಗಿ ನಿನ್ನ ಹೀರಲು

ನೀ ನನ್ನ ಹಿತವಾಗಿ ನೋವು ನಲಿವೇ ಆಗಿ ಜೊತೆಯಿರಲು
ನಾ ಬರುವೆ ಕೈ ಹಿಡಿದು ಬಾಳಾಗಿ ಬಂಧುವಾಗಿ

Published in: on ಜೂನ್ 9, 2010 at 2:53 AM  Comments (8)  

ಪ್ರೀತಿ ಇಲ್ಲದ ಮೇಲೆ……

ಒಬ್ಬೊಬ್ಬರೂ ಒಂದೊಂದು ರೀತಿಯಾಗಿ ಪ್ರೀತಿಯ ಬಗ್ಗೆ ವ್ಯಾಖ್ಯಾನ ನೀಡುತ್ತಾರೆ. ಆದರೆ ವಾಸ್ತವದಲ್ಲಿ ನಿಜವಾದ ಪ್ರೀತಿ ಎಂದರೇನು? ಅದು ಹೇಗಿರುತ್ತದೆ? ಎಲ್ಲಿ ಹುಟ್ಟುತ್ತದೆ? ಮನಸಲ್ಲಾ? ಹೃದಯದಲ್ಲಾ?, ಬುದ್ಧಿಯಲ್ಲಾ? ತಿಳಿದಿಲ್ಲ. ಯಾವಾಗ ಬರುತ್ತದೆ, ಯಾರ ಮೇಲೆ ಬರುತ್ತದೆ ಅರಿತಿಲ್ಲ. ಆದರೆ ಇಷ್ಟು ಮಾತ್ರ ಅರಿತಿದ್ದೇನೆ..ಪ್ರೀತಿ ಇಲ್ಲದೆ ಬದುಕಿಲ್ಲ….

ಅಮ್ಮನ ಮಮತೆ, ಮಡಿಲು, ಕೈತುತ್ತು
ಅಪ್ಪನ ವಾತ್ಸಲ್ಯ, ಬೆರಳಿನ ಆಧಾರ, ಹೊತ್ತ ಹೆಗಲು
ಸಹೋದರ ಸಹೋದರಿಯರು ತೋರಿದ ಕಾಳಜಿ, ಆಟವಾಡಿದ, ಕಿತ್ತಾಡಿದ ಕ್ಷಣಗಳು
ಸ್ನೇಹಿತ ಸ್ನೇಹಿತೆಯರ ಸ್ನೇಹ, ಕಷ್ಟಕಾಲದ ಜೊತೆ
ಪ್ರಿಯತಮ ಪ್ರೇಯಸಿಯರ ನಡುವಿನ ರೋಮಾಂಚನ, ಸಂತೋಷದ ಘಳಿಗೆಗಳು ಇವೆಲ್ಲವೂ ಪ್ರೀತಿಯೇ.

ಒಂದು ವಸ್ತುವಿನ ಬಗ್ಗೆ ಇರುವ ಮಮಕಾರ, ಅದು ದೊರಕಿದಾಗ ಸಿಗುವ ಆನಂದ, ಸಾಕಿದ ಒಂದು ಪ್ರಾಣಿಯ ಜೊತೆಗಿನ ಬಂಧ, ಅದು ತೋರುವ ವಿಶ್ವಾಸವೂ ಕೂಡ ನನ್ನ ದೃಷ್ಟಿಯಲ್ಲಿ ಪ್ರೀತಿಯೇ. ಆದರೆ ಇವೆಲ್ಲ ಪ್ರೀತಿಯ ಬೇರೆ ಬೇರೆ ಮುಖಗಳು, ಎಲ್ಲವೂ ಬೇರೆ ಬೇರೆ, ಅದರ ಅನುಭವವೂ ಬೇರೆ, ಆನಂದವೂ ಬೇರೆ ಅಲ್ಲವೆ?

ಆದರೆ ಪತಿ ಪತ್ನಿಯರ ನಡುವಿನ ಪ್ರೀತಿಯನ್ನು ವಿಶೇಷ ವಾಗಿ ವರ್ಣಿಸುತ್ತಾರೆ… ಎರಡು ಜೀವಗಳು ಬೇರೆ ಬೇರೆ ಪರಿಸರದಲ್ಲಿ ಹುಟ್ಟಿ, ಬೆಳೆದು ತದನಂತರ ಒಂದು ಬಂಧನದಲ್ಲಿ ಬೆಸೆದು ಜೀವನಪೂರ್ತಿ ಒಂದಾಗಿ ಕಳೆಯುತ್ತಾರಲ್ಲಾ ಅದಕ್ಕಾಗಿಯೇ ಇರಬೇಕು ಈ ಸಂಬಂಧಕ್ಕೆ ಪ್ರೀತಿಯಲ್ಲಿ ವಿಶೇಷ ಸ್ಥಾನ.

ಇಬ್ಬರ ಸ್ವಭಾವವೂ ಬೇರೆ, ಅಲೋಚನೆಗಳಲ್ಲೂ ಅಂತರ, ದಿನನಿತ್ಯದ ಅಭ್ಯಾಸಗಳಂತೂ ಸಂಪೂರ್ಣ ವಿರುಧ್ದ. ಆದರೂ ಒಬ್ಬರ ಸ್ವಭಾವ, ಅಭ್ಯಾಸ, ಆಲೋಚನೆಗಳನ್ನು ಸ್ವೀಕರಿಸಿ ಅದರೊಂದಿಗೆ ತಮ್ಮ ಅಸೆ, ಇಂಗಿತ, ಅಭಿಪ್ರಾಯಗಳನ್ನು ಜೋಡಿಸಿ, ಹೊಸದೆ ಆದ ಒಂದು ಲೋಕವನ್ನು ಕಟ್ಟಿಕೊಳ್ಳುವ ಕೆಲಸ ಅಷ್ಟು ಸುಲಭದ ಮಾತಲ್ಲ. ಆದರೆ ಈ ಪ್ರೀತಿ ಎಂಬ ಬೆಸುಗೆ ಇದೆಯಲ್ಲ ಅದು ಎಲ್ಲವನ್ನೂ ಸುಲಭ, ಸರಳ ಸಹಜವಾಗಿ ಪರಿವರ್ತಿಸಿಬಿಡುತ್ತದೆ.

ಎಷ್ಟೋ ಸಾರಿ ಭಿನ್ನ ಅಭಿಪ್ರಾಯಗಳಿಂದಾಗಿರಬಹುದು ಅಥವಾ ಇನ್ಯಾವುದೇ ಕಾರಣದಿಂದ ಜಗಳ, ಮಾತಿನ ಚಕಮಕಿ, ಒಬ್ಬರ ಮೇಲೆ ಇನ್ನೊಬ್ಬರ ಕೋಪ, ಅಸಹನೆ ಇವೆಲ್ಲ ಎಲ್ಲರ ಮನೆಯ ದೋಸೆಯೂ ತೂತು ಎಂಬಷ್ಟೆ ಸತ್ಯವಾದರೂ ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿನಂತೆ ಇವು ಕ್ಷಣಕಾಲ ಮಾತ್ರ. ಮತ್ತೆ ಇಬ್ಬರೂ ಒಂದೆ ಜೀವ. ಹುಟ್ಟಿದಾಗಿನಿಂದಲೂ ಒಟ್ಟಿಗೆ ಇದ್ದವರಂತೆ, ಮುಂದಿನ ಜನುಮಗಳಲ್ಲೂ ಒಟ್ಟಿಗೇ ಇರುವವರಂತೆ ಒಬ್ಬರಿಗೊಬ್ಬರು ಎಲ್ಲವನ್ನೂ ಹಂಚಿಕೊಂಡು, ಪರಸ್ಪರರ ಅವಶ್ಯಕತೆಗಳನ್ನು ಪೂರೈಸುತ್ತ, ವಿಶೇಷ ಮಮಕಾರ ವ್ಯಕ್ತಪಡಿಸುತ್ತ, ಒಂದೇ ಸೂರಿನಡಿ ಬದುಕುವುದಿದೆಯಲ್ಲ ಅದೇ ಏನು ಪ್ರೀತಿ ಅಂದರೆ?

ನಾನು ಎನ್ನುವುದು ಹೋಗಿ ನಾವು ಎಂದಾಗಿ, ನನಗಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ನಮಗಾಗಿ, ನಮ್ಮ ಭವಿಷ್ಯಕ್ಕಾಗಿ ಎಂಬ ಭಾವನೆ ಮೂಡಿ, ಬೇರೆ ಗಂಡಸರು ಸಲ್ಮಾನ್ ಖಾನ್ ನಂತೆ ಇದ್ದರೂ ನನ್ನ ಕಣ್ಣಿಗೆ ನನ್ನ ಗಂಡ ಯಾವ ಸೂಪರ್ ಸ್ಟಾರಿಗಿಂತ ಕಮ್ಮಿ ಇಲ್ಲ ಎಂಬ ಭಾವನೆ ಹೆಣ್ಣಿಗೆ ಬಂದು , ಬೇರೆ ಹೆಣ್ಣುಗಳು ಐಶ್ವರ್ಯ ರೈ ಅಂತೆ ಇದ್ದರೂ ನನ್ನ ಹೆಂಡತಿ ಯಾವ ಮಿಸ್ ಯೂನಿವರ್ಸಿಗಿಂತ ಏನು ಕಮ್ಮಿ ಎಂಬ ಭಾವ ಪತಿಗೆ ಮೂಡಿ, ಪರಸ್ಪರರಲ್ಲಿ ಗೌರವ ಹಾಗೂ ಇವನು ನನ್ನವನು, ಇವಳು ನನ್ನವಳು ಎಂಬ ಹೆಮ್ಮೆ ಇದ್ದೊಡೆ ಇದನ್ನೆ ಪ್ರೀತಿ ಎನ್ನುವರೆ?

ಎರಡು ಯುವ ಜೀವಗಳು ಹೊಳೆಯ ದಡದಲ್ಲಿ ಕೈಗೆ ಕೈ ಬೆಸೆದು ಚಂದಿರನ ನೋಡುತ್ತಾ ಪ್ರಪಂಚವನ್ನೆ ಮರೆತು ನಾಳೆಯ ಹೊಂಗನಸನ್ನು ಕಾಣುವುದಿದೆಯಲ್ಲ ಅದು ಪ್ರೀತಿಯೆ?

ಅರವತ್ತು ದಾಟಿದ ದಂಪತಿಗಳು ಒಂದು ದಿನವೂ ತಪ್ಪದೆ ಜೊತೆಯಾಗಿ ನಸುನಗುತ್ತಾ ಮಾತಾಡಿಕೊಂಡು ಒಬ್ಬರ ಊರುಗೋಲು ಇನ್ನೊಬ್ಬರಾಗಿ ಪಾರ್ಕ್ ಗೆ ವಾಕಿಂಗ್ ಬರುವುದಿದೆಯಲ್ಲ ಅದೂ ಪ್ರೀತಿಯೆ?

ಪರಸ್ಪರರು ಖಾಯಿಲೆ ಬಿದ್ದಾಗ ತನ್ನ ಜೀವವೇ ನೊಂದಿತೇನೊ ಎಂಬಂತೆ ಚಡಪಡಿಸುವುದಿದೆಯಲ್ಲ ಇದಲ್ಲವೆ ಪ್ರೀತಿ?

ಮದುವೆಯ ದಿನದಂದು ಮೇಣದ ಬತ್ತಿಯ ಬೆಳಕಲ್ಲಿ, ಪತಿ ಜತನದಿಂದ, ಆಸೆಯಿಂದ ತನಗಾಗಿ ಆರಿಸಿ ತಂದು ಉಡುಗೊರೆಯಾಗಿ ನೀಡಿದ ಸೀರೆ ಉಟ್ಟು ಪತ್ನಿ ತನ್ನ ಕೈಯಾರೆ, ಮನಸಾರೆ ತಯಾರಿಸಿ ವಾತ್ಸಲ್ಯಪೂರಿತವಾಗಿ ಬಡಿಸಿದ ಖಾದ್ಯವನ್ನು ಪತಿ ಪತ್ನಿ ಇಬ್ಬರೂ ಕುಳಿತು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಸವಿಯುವುದಿದೆಯಲ್ಲ ಪ್ರೀತಿಯ ಯಾವ ಮುಖವಿದು?

ಜೀವನದ ಪ್ರತಿ ನಿಮಿಷದಲಿ, ಪ್ರತಿ ಹೆಜ್ಜೆಗೆ ಪ್ರೀತಿಯ ಅನುಭವ, ಅನುಭೂತಿ ಪಡೆಯುವ ನಮಗೆ ಪ್ರೀತಿಯೆ ಇಲ್ಲದಿದ್ದೊಡೆ ಎಂತು ಎಂಬುದು ಊಹಿಸಿಕೊಳ್ಳಲೂ ಆಗದ ವಿಷ.
ಪ್ರೀತಿಯಿಲ್ಲದ ಬದುಕು, ನೀರಿಲ್ಲದ ನದಿಯಂತೆ, ಚಂದಿರನಿಲ್ಲದ ಬಾನಿನಂತೆ, ಹಸಿರಿಲ್ಲದ ಭೂಮಿಯಂತೆ ಜೀವಂತ ಶವ…….

ಇದರರ್ಥ ನನಗೆ ಬರೀ ಪ್ರೀತಿಯೊಂದೆ ಬದುಕು ಎಂದೇನಲ್ಲ, ಉಳಿದ ಅವಶ್ಯಕ ಸವಲತ್ತು, ಸಂದರ್ಭ, ವಾತಾವರಣದೊಂದಿಗೆ ಪ್ರೀತಿಯಿದ್ದೊಡೆ
ಶರೀರದಲ್ಲಿ ಪ್ರಾಣ ಸಂಚಾರವಾದಂತೆ, ಬಂಜರು ಭೂಮಿಯಲ್ಲಿ ಮಳೆ ಸುರಿದು ಹಸಿರು ಮೊಳೆತಂತೆ……ಇದು ನನ್ನ ಭಾವನೆ. ನಿಮ್ಮದು?

Published in: on ಜೂನ್ 4, 2010 at 3:38 AM  Comments (11)  

ಇಂದು ಅವಳಿಲ್ಲ


ಜೀವನದಲ್ಲಿ ಯಾವುದೂ ಗ್ಯಾರಂಟಿ ಇಲ್ಲ, ಇವತ್ತು ಇರೋರು ನಾಳೆ ಇರ್ತಾರೆ ಅನ್ನೋ ನಂಬಿಕೆ ಇಲ್ಲ, ಏನಪ್ಪಾ ಇದು ? ವಿರಾಗಿ ಥರಾ ಮಾತಾಡ್ತಾ ಇದಾಳೆ ಅಂತ ಅಂದುಕೊಳ್ಳಬೇಡಿ, ನಾನು ಹೀಗೆ ಅನ್ನೋದಕ್ಕೆ ಕಾರಣ ಇದೆ. ಮೊನ್ನೆ ಮೊನ್ನೆ ದೀಪಾವಳಿಯಲ್ಲಿ ಅವಳು ಎಷ್ಟು ಚೈತನ್ಯ ತುಂಬಿಕೊಂಡು ನಗು ನಗ್ತಾ ಇದ್ದಳು ಅನ್ನುತ್ತೀರಾ, ಯಾವುದೇ ರೋಗವಿಲ್ಲದೇ ಆರೋಗ್ಯವಾಗಿ ಇದ್ದಳು. ಸರಿಯಾಗಿ ಆಹಾರ ತೆಗೆದುಕೊಳ್ಳುತ್ತಾ ಇದ್ದಳು. ನೋಡುವುದಕ್ಕೂ ಬಹಳ ಸುಂದರವಾಗಿ ಕಾಣುತ್ತಿದ್ದಳು. ಅವಳ ಸೌಂದರ್ಯ ನೋಡಿ ಪಕ್ಕದಲ್ಲಿ ನಿಂತು ಫೋಟೋ ಬೇರೆ ತೆಗೆದುಕೂಂಡಿದ್ವಿ. ಆದರೆ ಇಷ್ಟು ಬೇಗ ಅವಳು ನಮ್ಮಿಂದ ದೂರ ಹೊರಟು ಹೋಗ್ತಾಳೆ ಅಂದುಕೊಂಡಿರಲಿಲ್ಲ. ಈ ಪ್ರಕೃತಿ ವಿಕೋಪಕ್ಕೆ ಅವಳು ಇಂದು ಬಲಿಯಾಗಿದ್ದಾಳೆ. ಗಿಡ ಮರಗಳು ಕಡಿಮೆಯಾಗಿ, ವಾಹನಗಳು ಹೆಚ್ಚಾಗಿ ವಾತಾವರಣದಲ್ಲಿ ಉಂಟಾದ ಅತಿಯಾದ ಉಷ್ಣತೆ, ಬಿಸಿಲಿಗೆ ಇಂದು ಅವಳು ಬಲಿಯಾಗಿದ್ದಾಳೆ, ತಂಪಾದ ನೀರೆರೆದರು ಕೂಡ ಅವಳನ್ನು ಉಳಿಸಿಕೊಳ್ಳಲಾಗಲಿಲ್ಲ. ಅವಳು ಅಂದ್ರೆ ಯಾರು ಅಂತ ಪರಿಚಯನೇ ಮಾಡಿಕೊಡಲಿಲ್ಲ ನೋಡಿ. ಅವಳು ನಾನು ದಿನಾಲೂ ನೋಡಿ ಸಂತೋಷ ಪಡುವ ನಮ್ಮ ಮನೆಯ ಮುಂದಿನ ಹಸಿರಿನಿಂದ ನಳನಳಿಸುತ್ತಿದ್ದ ಬಳ್ಳಿ. ಇಂದು ಬರೀ ಅವಳ ಅಸ್ತಿಪಂಜರ ಇದೆ. ಸತ್ತಿರುವ ಅವಳನ್ನು ಕಿತ್ತೆಸೆಯುವ ತಯಾರಿ ನಡೆಯುತ್ತಿದೆ. ಇದನ್ನೆಲ್ಲ ನೋಡಿ ನನ್ನ ಮನಸ್ಸಿನಲ್ಲಿ ಏನೋ ಒಂದು ಕಳವಳ. ಮುಂದೊಂದು ದಿನ ಗಿಡಮರಗಳನ್ನಿ ಇಲ್ಲವಾಗಿಸಿದ ತಪ್ಪಿಗೆ ಪ್ರಕೃತಿಯ ಕೋಪಕ್ಕೆ ನಾವೇ ಬಲಿಯಾಗಬೇಕೇನೋ ಎನ್ನುವ ಚಿಂತೆ….

Published in: on ಏಪ್ರಿಲ್ 30, 2010 at 2:23 AM  Comments (4)  

ಒಳ್ಳೆಯತನ

ಒಂದು ಉೂರು, ಅಲ್ಲೊಂದು ಕುಡಿಯುವ ನೀರಿನ ಬಾವಿ, ಬಾವಿಯ ಬಳಿ ಒಂದು ಹುತ್ತ, ಹುತ್ತದಲ್ಲಿ ಒಂದು ಹಾವಿನ ವಾಸ. ಹಾವು ಆ ಉರಿನವರಿಗೆ ಯಾರಿಗೂ ಆ ಕಡೆಗೆ ಸುಳಿಯಾಲು ಬಿಡುತ್ತಿರಲಿಲ್ಲ. ಅಪ್ಪಿ ತಪ್ಪಿ ಬಂದರೆ ಕಚ್ಚುತ್ತಿತ್ತು. ಉೂರಿನವರು ಅದರ ಉಪದ್ರವ ತಡೆಯಲಾರದೇ ಬೇಸತ್ತಿದ್ದರು. ಅಷ್ಟರಲ್ಲಿ ಒಬ್ಬ ಸನ್ಯಾಸಿ ಆ ಉುರಿಗೆ ಆಗಮಿಸಿದ. ಆತನನ್ನು ನೋಡಲು ಹೋದ ಉೂರಿನ ಜನರು ಹಾವು ನೀಡುತ್ತಿರುವ ಕಷ್ಟವನ್ನು ಹೇಳಿಕೊಂಡರು. ಅದನ್ನು ಕೇಳಿದ ಸನ್ಯಾಸಿ, ಉರಿನ ಜನ ನಿಲ್ಲು ಎಂದರು ಕೇಳದೇ, ಬಾವಿಯ ಬಳಿ ಹೋದ. ಆತನನ್ನು ನೋಡಿದ ಹಾವು ಹೆದರಿಸುತ್ತಾ ಕಚ್ಚಲು ಬಂತು. ಸ್ವಲ್ಪವೂ ಧೃತಿಗೆಡದ ಸನ್ಯಾಸಿ ಆ ಹಾವನ್ನು ಎದುರಿಸಿ ನಿಂತು ಅದಕ್ಕೆ ” ಇಷ್ಟು ಜನಕ್ಕೆ ಕಷ್ಟ ನೀಡಿ ನೀನು ಏನು ಪಡೆಯುವೆ, ನೀನು ಕೆಟ್ಟದ್ದು ಮಾಡಿದರೆ ಅದರ ಫಲವು ಕೆಟ್ಟದ್ದೇ ಆಗುವುದು, ನೀನು ಇಲ್ಲಿ ಇರುವೆ ಎಂಬ ಕಾರಣಕ್ಕಾಗಿ ಜನರನ್ನು ಬಾವಿಯ ಕಡೆ ಬರದಂತೆ ತಡೆಯುವುದು ಸರಿಯಲ್ಲ. ಅವರ ಪಾಡಿಗೆ ಅವರು ಬರಲಿ, ನಿನ್ನ ಪಾಡಿಗೆ ನೀನು ಬದುಕು, ಕಚ್ಚಬೇಡ, ಹಿಂಸೆಯನ್ನು ಬಿಟ್ಟುಬಿಡು” ಎಂದು ಹೇಳಿದ. ಸನ್ಯಾಸಿಯ ಮಾತನ್ನು ಕೇಳಿದ ಹಾವು ಮನಃ ಪರಿವರ್ತನೆ ಹೊಂದಿ, ಆತ ನುಡಿದಂತೆ ಇರುವೆನೆಂದು ಮಾತು ಕೊಟ್ಟಿತು. ಸನ್ಯಾಸಿ ಬೇರೊಂದು ಉುರಿಗೆ ಹೊರಟು ಹೋದ.

ಇತ್ತ ಹಾವು ಸನ್ಯಾಸಿಗೆ ಕೊಟ್ಟ ಮಾತಿನಂತೆ ಹಿಂಸೆಯನ್ನು ಬಿಟ್ಟು ಬಿಟ್ಟಿತು. ಆಹಾರಕ್ಕಾಗಿಯೂ ಪ್ರಾಣಿಗಳ ಬೇಟೆಯಾಡುವುದನ್ನು ನಿಲ್ಲಿಸಿತು. ಅಲ್ಲಿ ಇಲ್ಲಿ ಬಿದ್ದಿರುವ, ಸಿಕ್ಕಿದ ಆಹಾರ ತಿನ್ನುತ್ತಿತ್ತು. ಜನರಿಗೆ ಕಚ್ಚುತ್ಟಿರಲಿಲ್ಲ, ಹೆದರಿಸುತ್ತಿರಲಿಲ್ಲ. ಸ್ವಲ್ಪ ದಿನ ಮೊದಲಿನ ಭಯದಲ್ಲೇ ಇದ್ದ ಜನ, ಸ್ವಲ್ಪ ದಿನಗಳ ನಂತರ ಏನೂ ಮಾಡದ ಹಾವಿಗೆ ಹೆದರುವುದನ್ನು ನಿಲ್ಲಿಸಿದರು. ಬಾವಿಗೆ ನೀರು ತರಲು ಹೋಗಲಾರಂಭಿಸಿದರು. ಮಕ್ಕಳು ಹಾವಿನ ಸಮೀಪದಲ್ಲೇ ಆಡಲಾರಂಭಿಸಿದರು. ದಷ್ಟ ಪುಷ್ಟವಾಗಿದ್ದ ಹಾವು, ಬೇಟೆಯಾಡುವುದನ್ನು ಬಿಟ್ಟು ಸರಿಯಾದ ಆಹಾರ ಸಿಗದೆ ಕೃಶವಾಯಿತು. ದಿನ ಕಳೆದಂತೆ ಮಕ್ಕಳು ಹಾವನ್ನು ಉಪಯೋಗಿಸಿಕೊಂಡು ಆಟವಾಡತೊಡಗಿದರು. ಹಾವು ದಾರಿಯಲ್ಲಿ ಮಲಗಿದ್ದರೆ ಎತ್ತಿ ಬದಿಗೆ ಬಿಸಾಡಿ ಮುಂದೆ ಹೋಗುತ್ತಿದ್ದರು ಜನ. ಹೀಗೆ ಒಂದು ದಿನ ಆ ಬಾವಿಯ ಹಗ್ಗ ತುಂಡಾಯಿತು. ನೀರು ಎಳೆಯಲು ಹಗ್ಗ ಗಿಡ್ದವಾದ ಕಾರಣ ಬದಿಯಲ್ಲೇ ಮಲಗಿದ್ದ ಹಾವನ್ನು ಹಗ್ಗದ ಜೊತೆ ಗಂಟು ಹಾಕಿ ನೀರೆಳೆಯಲು ಪ್ರಾರಂಭಿಸಿದರು. ಅದೇ ಸಮಯಕ್ಕೆ ಬೇರೆ ಉುರಿಗೆ ಹೋದ ಸನ್ಯಾಸಿ ಮರಳಿ ಆ ಉುರಿಗೆ ಬಂದು, ಹಾವನ್ನು ನೋಡಲು ಬಾವಿಯ ಸಮೀಪ ಹೋದ. ಹಾವಿನ ಸ್ಥಿತಿ ನೋಡಿ ಆತನಿಗೆ ಪಸ್ಚಾತ್ತಾಪವಾಯಿತು. ಜನರಿಂದ ಹಾವನ್ನು ಬಿಡಿಸಿ, ಇದೇನು ನಿನ್ನ ಪರಿಸ್ಥಿತಿ ಎಂದು ಕೇಳಿದ. ಹಾವು ಹೇಳಿತು ” ತಾವು ನನಗೆ ಹಿಂಸೆ ಮಾಡಬೇಡ ಎಂದಿರಿ, ನಾನು ಬೇಟೆಯಾಡುವುದನ್ನು ನಿಲ್ಲಿಸಿದೆ. ಆಹಾರ ಸರಿಯಾಗಿ ದೊರಕಲಿಲ್ಲ. ನಾನು ಏನೂ ಮಾಡದ ಕಾರಣ ಜನರಲ್ಲಿ ನನ್ನ ಮೇಲಿನ ಭಯ ಹೊರಟು ಹೋಯಿತು. ಅವರು ನನ್ನನ್ನು ಹೀಗೆ ಹಿಂಸಿಸುತ್ತಿದ್ದಾರೆ ಎಂದಿತು. ಅದನ್ನು ಕೇಳಿದ ಸನ್ಯಾಸಿ ” ನಾನು ನಿನಗೆ ಕಚ್ಚಬೇಡ ಎಂದೆನೆ ಹೊರತು ಬುಸ್ ಎನ್ನಬೇಡ ಎಂದೇನಾ? ನಿನ್ನ ರಕ್ಷಣೆಗಾಗಿ ನಿನಗೆ ಅವಶ್ಯಕವಾಗಿ ಬೇಕಾಗುವ ಆಹಾರವನ್ನು ತಿನ್ನ ಬೇಡ ಎಂದೇನಾ? ಕಚ್ಚಬೇಡ ಎಂದೆ ಇದರರ್ಥ ಹೆದರಿಸಬೇಡ ಎಂದಲ್ಲ. ಒಳ್ಳೆಯವನಾಗು ಆದರೆ ಅತಿಯಾಗಿ ಒಳ್ಳೆಯವನಾಗಬೇಡ. ಜಗತ್ತಿನಲ್ಲಿ ಬದುಕುವುದು ಅಸಾಧ್ಯವಾಗುತ್ತದೆ ” ಎಂದ. ಹಾವು ಆತನ ಮಾತಿನ ಅರ್ಥ ತಿಳಿದು ಅದರಂತೆಯೇ ತನ್ನ ಜೀವನ ಸಾಗಿಸಿತು.

ಈ ಕಥೆಯ ಸಾರಾಂಶ ಏನೆಂದರೆ ಒಳ್ಳೆಯತನ ಬೇಕು ಆದರೆ ಅತಿಯಾದ ಒಳ್ಳೆಯತನ ಬೇಡ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಈ ಮಾತು ಅಕ್ಷರಶಹ ನಿಜ ಎಂದು ಅನ್ನಿಸುತ್ತದೆ. ಹಿಂದೆ ತ್ರೇತಾಯುಗದ ರಾಮನ ಕಾಲದಲ್ಲಿ ಎಷ್ಟು ಒಳ್ಳೆಯತನ ಇದ್ದರು ನಡೆಯುತ್ತಿತ್ತು. ಆದರೆ ಈಗ ಹಾಗಲ್ಲ. ಎಷ್ಟು ಬೇಕೋ ಅಷ್ಟು ಒಳ್ಳೆಯತನ ಇದ್ದರೆ ಸಾಕು. ನಾವು ಅತಿಯಾಗಿ ಒಳ್ಳೆಯವರಾಗಿದ್ದರೆ ನಮ್ಮ ಸುತ್ತಲಿನವರು ಒಳ್ಳೆಯವರಿರುತ್ತಾರೆ ಎಂದೇನಿಲ್ಲವಲ್ಲ. ನಾವು ಬಹಳ ಒಳ್ಳೆಯವರಾಗಿದ್ದರೆ ಅದರಿಂದ ತಮ್ಮ ಉಪಯೋಗ ಪಡೆದುಕೊಳ್ಳಲು ಪ್ರತಿಯೊಬ್ಬರೂ ಕಾಯುತ್ತಿರುತ್ತಾರೆ. ಇದರಿಂದ ನಮ್ಮ ಜೀವನ ನಡೆಸುವುದು ದುಸ್ತರವಾಗುತ್ತದೆ. ಅತಿಯಾದ ಒಳ್ಳೆಯ ಗುಣ ಹೊಂದಿ ಇತರರಿಗೆ ಒಳ್ಳೆಯದನ್ನು ಮಾಡುತ್ತಲೇ ಜೀವನ ಸಾಗಿಸುತ್ತೇನೆ ಎನ್ನುವವರು ಸನ್ಯಾಸಿಯಾಗಿ ಜೀವನ ಸಾಗಿಸುವುದೇ ಸರಿ ಎನ್ನುವಂತಾಗಿಬಿಡುತ್ತದೆ.

ಇವಳ ಹಿಂದಿನ ಬರಹದಲ್ಲಷ್ಟೇ ಹೇಳಿದ್ದಳು ಇತರರಿಗೆ ಸಹಾಯ ಮಾಡಿ ಎಂದು, ಇಲ್ಲಿ ಹೀಗೆ ಹೇಳುತ್ತಿದ್ದಾಳೆ ಅಂತ ಗೊಂದಲಗೊಳ್ಳಬೇಡಿ. ನಾನಲ್ಲಿ ಹೇಳಿದ್ದು ನಿಮ್ಮ ಕೈಲಿರುವ ಹಣದಲ್ಲಿ ಸ್ವಲ್ಪ ಸಹಾಯ ಮಾಡಿ ಎಂದು. ಕೈಲಿರುವ ಎಲ್ಲ ಹಣವನ್ನು ನೀಡಿ ಎಂದು ಅಲ್ಲ. ಅದರರ್ಥ ಒಳ್ಳೆಯತನ ಬೇಕು (ಅತಿಯಾದ ಒಳ್ಳೆಯತನ ಬೇಡ) ಎಂದು. ಕಚ್ಚುವ ಹಾವಾಗಬೇಡಿ, ಅದರಂತೆಯೇ ಅತ್ಯಂತ ಸಾತ್ವಿಕವಾಗಿ ಕಷ್ಟ ಪಡುವ ಹಾವು ಆಗಬೇಡಿ. ಬುಸ್ ಎನ್ನುವ ಹಾವಾಗಿ. ಇಂದಿನ ಜಗತ್ತಿನಲ್ಲಿ ಹಾಗೆ ಬದುಕುವುದೇ ಸರಿ. ನಮ್ಮ ಅತಿಯಾದ ಒಳ್ಳೆಯತನ ಉಪಯೋಗಿಸಿಕೊಂಡು, ಜೊತೆಗೆ ಮೇಲಿಂದ ಒಂದು ಕಲ್ಲು ಎಂಬಂತೆ ನಮ್ಮನ್ನು ಕೆಳಗೆ ದೂಡುವ ಜನರಿಗೇನು ಕೊರತೆಯಿಲ್ಲ. ನಮ್ಮ ಒಳ್ಳೆಯತನದ ಭುಜವನ್ನೇ ಮೆಟ್ಟಿಲಾಗಿಸಿಕೊಂಡು ಮೇಲೆ ಹತ್ತಿದಮೇಲೆ ನಮ್ಮನ್ನು ಒದ್ದು ಹೋಗುವವರು ಇದ್ದಾರೆ. ನಾವು ಮಾತ್ರ ಇದ್ದಲ್ಲೇ ಇರುತ್ತೇವೆ. ಕಾರಣ ನಮ್ಮ ಅತಿಯಾದ ಒಳ್ಳೆಯತನ. ಆದ್ದರಿಂದ ಬದುಕಲು “ಕೆಟ್ತತನ ಬೇಡವೇ ಬೇಡ, ಒಳ್ಳೆಯತನ ಬೇಕು, ಅತಿಯಾದ ಒಳ್ಳೆಯತನ ಬೇಡ”
“Don’t ever be bad, be good, don’t be too good”

Published in: on ಜೂನ್ 1, 2009 at 2:49 ಅಪರಾಹ್ನ  Comments (2)  

ಸಹಾಯ ಮಾಡಿ

ಎಲ್ಲ ಸ್ನೇಹಿತ, ಸ್ನೇಹಿತೆಯರಲ್ಲೂ ನನ್ನದೊಂದು ವಿನಂತಿ. ಇದೇನಪ್ಪ ಮೊನ್ನೆ ಮೊನ್ನೆ ಬ್ಲಾಗ್ ಬರೆಯೋಕೆ ಬಂದವಳು ಆಗಲೇ ಒಂದು ಬೇಡಿಕೆ ತಗೊಂಡು ಬಂದುಬಿಟ್ಟಿದ್ದಾಳೆ ಅಂದುಕೊಳ್ಳಬೇಡಿ. ನನ್ನ ಮನಸ್ಸಿಗೆ ತೋಚಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಬಸ್ ಸ್ಟಾಂಡಿನಲ್ಲಿ, ರೈಲ್ವೇ ಸ್ಟೇಷನ್ನಿನಲ್ಲಿ, ಇಂತಹ ಇನ್ನೂ ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರಿಗೆ, ಹೃದಯ ರೋಗಿಗಳಿಗೆ, ಕ್ಯಾನ್ಸರ್ ಪೀಡಿತರಿಗೆ, ಅನಾಥ ಮಕ್ಕಳಿಗೆ, ವೃಧ್ಧರಿಗೆ, ಇತ್ಯಾದಿ ಇತ್ಯಾದಿ ಸಮಸ್ಯೆಯಲ್ಲಿರುವವರಿಗೆ ಸಹಾಯ ಮಾಡಿ ಅಂತ ಕೆಲವರು ಹಣ ಕೇಳುತ್ತಿರುವುದನ್ನು ನೋಡಿರುತ್ತೀರಿ. ಕೆಲವೊಂದು ಸಂಸ್ಥೆಯವರು ಕೂಡ ಇಂತವರ ಸಹಾಯಕ್ಕಾಗಿ ದೇಣಿಗೆ ನೀಡಿ ಅಂತ ಕೇಳುತ್ತಿರುವುದನ್ನು ಕೂಡ ನೋಡಿರುತ್ತೀರಿ. ಅಥವಾ ಸ್ವತಹ ಅಂಗವಿಕಲರೆ ತಮ್ಮ ಹೊಟ್ಟೆಪಾಡಿಗಾಗಿ ಜನರ ಮುಂದೆ ಕೈ ಚಾಚುತ್ತಿರುವ ದೃಶ್ಯವೂ ಸಹ ನಿಮಗೆ ಹೊಸದಲ್ಲ. ಹೀಗೆ ಕೇಳುತ್ತಿರುವುದನ್ನು ನೋಡಿ ಬಹಳಷ್ಟು ಸಲ ” ಎಲ್ಲಿ ನೋಡಿದ್ರೂ ಹೀಗೆ ಹಣ ಕೇಳ್ತಾ ಇರ್ತಾರೆ, ಆ ಹಣ ತೊಗೊಂದು ಹೋಗಿ ಏನು ಮಾಡ್ತಾರೋ ಏನೋ, ನಾವೇಕೆ ನಮ್ಮ ಹಣವನ್ನು ಇವರಿಗೆ ಕೊಡಬೇಕು ” ಅಂತ ಅಂದುಕೊಳ್ತಾ ಇರ್ತೀವಿ. ದಯವಿಟ್ಟು ಹಾಗೆ ತಿಳ್ಕೊಬೇಡಿ. ಕಾರಣ ಹೇಳ್ತೀನಿ ಕೇಳಿ.

ಎಲ್ಲರೂ ಸುಳ್ಳು ಹೇಳಿಕೊಂಡು ಹಣ ಕೇಳುತ್ತಿರುವುದಿಲ್ಲ, ಆದರೆ ಅವರ ಮಧ್ಯೆ ಕುರಿಯ ಮಂದೆಯ ನಡುವೆ ತೊಳಗಳಂತೆ ಮೋಸಗಾರರು, ಸುಳ್ಳು ಹೇಳಿ ಹಣ ಕೇಳುವವರೂ ಕೂಡ ಖಂಡಿತ ಇದ್ದಾರೆ. ಆದ್ದರಿಂದ ಕೇಳುತ್ತಿರುವವರನ್ನು ಸರಿಯಾಗಿ ಗಮನಿಸಿ. ಅವರು ನಿಜವಾಗಿಯೂ ಕಷ್ಟದಲ್ಲಿರುವವರು ಅಥವಾ ನಿಜವಾಗಿಯೂ ಕಷ್ಟದಲ್ಲಿರುವವರಿಗಾಗೆ ಹಣ ಕೇಳುತ್ತಿರುವವರು ಅಂತ ನಿಮ್ಮ ಮನಸ್ಸು ಹೇಳುತ್ತಿದ್ದರೆ ಅಂತವರಿಗೆ ಸಹಾಯ ಮಾಡಿ. ಏಕೆಂದರೆ ಮೋಸಗಾರರಿಂದಾಗಿ ನಿಜವಾಗಲೂ ಕಷ್ಟದಲ್ಲಿರುವವರಿಗೆ ನೀಡುವ ಸಹಾಯ ನಿಂತುಹೋಗಬಾರದಲ್ಲ. ಹಣ ಕೇಳುತ್ತಿರುವವರನ್ನು ನೋಡಿ, ಅವರು ನಿಜ ಹೇಳುತ್ತಿದ್ದಾರೆ ಅನ್ನಿಸಿದರೆ ನಿಮ್ಮಲ್ಲಿರುವ ನೂರೋ ಇನೂರೋ ರೂಪಾಯಿಗಳಲ್ಲಿ ಒಂದು ರೂಪಾಯಿ ಕೊಡಿ ಸಾಕು. ಐಸ್ ಕ್ರೀಂ ತಿನ್ನುವುದಕ್ಕೋ, ಹೊಟೆಲ್ / ಸಿನಿಮಾ ಹೋಗುವುದಕ್ಕೋ, ದುಬಾರಿ ಬಟ್ಟೆ ಕೊಳ್ಳುವುದಕ್ಕೋ ಅಂತ ನೀವು ಖರ್ಚು ಮಾಡುವ ಹಣದಲ್ಲಿ ಒಂದೊಂದು ರೂಪಾಯಿ ಮಿಗಿಸಿ ಕೊಡಿ. ಅದರಲ್ಲಿ ಇನ್ಯಾರದೋ ಕಷ್ಟ ನೀಗುವುದಕ್ಕೆ ಸಹಾಯ ಮಾಡಿದಂತಾಗುತ್ತದೆ. ಹಸಿವಿನಲ್ಲಿರುವವರಿಗೆ ಆಹಾರ ನೀಡಿದಂತಾಗುತ್ತದೆ.

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂಸ್ಥೆಗಳಿಗೆ ಹೋಗಿ ದೇಣಿಗೆ ನೀಡುವುದು ಅಥವಾ ಕಷ್ಟದಲ್ಲಿರುವ ಒಬ್ಬೊಬ್ಬ ವ್ಯಕ್ತಿಗೆ ಸಂಪೂರ್ಣ ಸಹಾಯ ನೀಡಲು ಸಾಧ್ಯವಾಗದಿದ್ದರು, ಇದೊಂದು ಸಹಾಯ ಹಸ್ತ ನೀಡಲು ನಮ್ಮಿಂದ ಖಂಡಿತ ಸಾಧ್ಯ ಎನ್ನುವುದು ನನ್ನ ಭಾವನೆ. ಬಾಡುತ್ತಿರುವ ಗಿಡಕ್ಕೆ ನೀರೆರೆಯುವ, ಚಿಗುರಲು ಚಿಕ್ಕ ಸಹಾಯ ಮಾಡುವ ಈ ಕೆಲಸದಲ್ಲಿ ನೀವೆಲ್ಲರೂ ನನ್ನ ಜೊತೆಗಿದ್ದೀರಿ ಎಂದುಕೊಂಡಿದ್ದೇನೆ. ಏನಂತೀರಾ? ತಮ್ಮ ಅಭಿಪ್ರಾಯ ತಿಳಿಸಿ. ಸರಿ ಎಂದಾದರೆ ಇಂದಿನಿಂದಲೇ ಹೆಜ್ಜೆ ಇಡೋಣ ತಡ ಏಕೆ?

Published in: on ಜೂನ್ 1, 2009 at 1:14 ಅಪರಾಹ್ನ  Comments (5)  

ನನ್ನ ಮನದ ಮತ್ತಷ್ಟು ಮಾತುಗಳು

ಹರುಕು ಬಟ್ಟೆ ಧರಿಸಿದವರೆಲ್ಲ ಬಿಕ್ಷುಕರಲ್ಲ, ಬಡವರೂ ಅಲ್ಲ
ಹಣವಂತರೂ ಧರಿಸುವರು ಹರುಕು ಬಟ್ಟೆ
ಹಣವಿಲ್ಲದೇ ಅಲ್ಲ ಫ್ಯಾಶನ್ಗಾಗಿ

ನಾನು ಹೃದಯದಿಂದ ಪ್ರೀತಿಸುತ್ತೇನೆ ಎಂದರೆ ನಂಬಿಬಿಡಬೇಡಿ
ಒಡೆದು, ಒಳಹೊಕ್ಕಿ ನೋಡಿದವರ್‍ಯಾರು ಅವರ ಹೃದಯದಲ್ಲಿ
ತೋರಿಸಲು ಅವರೇನು ಹಾರ್ಟ್ ಪೆಶೆಂಟ್ ಅಲ್ಲ
ನೋಡಲು ನೀವೇನೂ ಹಾರ್ಟ್ ಸ್ಪೆಶಲಿಸ್ಟ್ ಅಲ್ಲವಲ್ಲ

ಜೋರಾಗಿ ಹರಿಯುತ್ತಿರುವ ನೀರಿನಲ್ಲಿ ಬಿಟ್ಟ ಕಾಗದದ ದೋಣಿಯಂತೆ ನಮ್ಮ ಮನಸು
ಅತ್ತಿತ್ತ ಹೊಯ್ದಾಡುತ್ತಿರುವುದು, ಯಾವ ಭಾವನೆಗಳ ಅಳೆಯಲ್ಲಿ ಕೊಚ್ಚಿಕೊಂಡು ಹೋಗುವುದೋ
ಯಾವ ದುಃಖಕ್ಕೆ ಮುಳುಗುವುದೋ, ಯಾವ ಸಂತಸಕ್ಕೆ ತೇಲುವುದೋ ಬಲ್ಲವರಾರು

ಮನೆಯ ಕಸವನ್ನು ಗುಡಿಸಿ ಎಷ್ಟು ಚೊಕ್ಕವಾಗಿಟ್ಟುಕೊಂಡರೇನು ಪ್ರಯೋಜನ
ಮನದಲ್ಲಿ ಕಸದ ರಾಷಿಯೇ ತುಂಬಿರಲು

ದುಃಖ ಎಂಬುದು ಸಂತೋಷವನ್ನು ನುಂಗಿಹಾಕುತ್ತದೆ
ನಮ್ಮ ಮನಸ್ಸಿಗೆ ಶಾಂತತೆಯ ನೀರೆರೆದು, ತಾಳ್ಮೆಯ ಉುಟ ಉಣಿಸಿ
ಬಲಪಡಿಸಿ, ಭದ್ರಪಡಿಸಿ ದುಃಖವನ್ನು ಮೆಟ್ಟಿನಿಲ್ಲುವ ಶಕ್ತಿನೀಡಿ ಸಂತಸಕ್ಕೆ

Published in: on ಮೇ 26, 2009 at 3:03 AM  Comments (4)  

ಮತ್ತಷ್ಟು ಚುಟುಕಗಳು

ಬಣ್ಣದ ಬಟ್ಟೆ

ಏಯ್ ಬಣ್ಣ ಬಣ್ಣದ ಚಿಟ್ಟೆ
ನಿನ್ನಂತೆಬಟ್ಟೆ ಧರಿಸಲು ಆಸೆ ಪಟ್ಟೇ
ಖರೀದಿಸಿ ಕಿಸೆ ಖಾಲಿಯಾದಾಗ ಕಣ್ಣು ಕಣ್ಣು ಬಿಟ್ಟೆ

ಫ್ಲರ್ಟ್

ಹೂವಿಂದ ಹುವಿಗೆ ಹಾರುವ ದುಂಬಿ
ಇಂದು ಒಂದೇ ಹೂವಿನ ಮೇಲೆ ಸುಮ್ಮನೇ ಕುಳಿತಿದೆ ಏಕೋ
ಫ್ಲರ್ಟ್ ಮಾಡಿ ಸಾಕಾಯಿತೇನೋ.

ಕಲೆ

ಕಲೆಗಳಿಲ್ಲದ ಚಂದ್ರಮನೆಂದರೆ
ಮೋಡವೆಯಿಲ್ಲದ ಹರೆಯದ ಹೆಣ್ಣಿನ ಮೊಗದಂತೆ

ಸಂಬಳ

ನೀ ಬರುವ ದಾರಿ ಕಾಯುತ್ತಾ ಬಾಗಿಲಲ್ಲೇ ನಿಂತಿದ್ದೇನೆ
ಶಾಪಿಂಗ್, ಸುತ್ತಾಟ ಯಾವುದು ಇಲ್ಲದೇ
ನಿನ್ನ ಬಗೆಗಿನ ಕಾಳಜಿಗಲ್ಲದೇ ಹೋದರು
ನಿನ್ನ ಸಂಬಳದ ಮೇಲಿನ ಪ್ರೀತಿಗಾಗಿ

ಜುಟ್ಟು

ನಿನ್ನ ಜುಟ್ಟು ನನ್ನ ಕಯ್ಯಲ್ಲಿ ಎಂದು ಯಾರಾದರೂ ಹೇಳಿದರೆ ಕೋಪಿಸಿಕೊಳ್ಳಬೇಡ
ತಿಂಗಳಿಗೊಮ್ಮೆ ನಿನ್ನ ಜುಟ್ಟು ಹಜಾಮನ ಕಯ್ಯಲ್ಲೇ ತಾನೇ

Published in: on ಮೇ 8, 2009 at 11:03 AM  Comments (11)  

ಪ್ರೀತಿಯ ಆಳ

me6
ನಾನು ನಿನ್ನನ್ನು ಪ್ರೀತಿಸುತ್ತೇನೆ ರಬ್ಬರ್ ಬ್ಯಾಂಡಿನಷ್ಟು
ಆ ನೆಪದಲ್ಲಾದರೂ ದಿನವೂ ನೀನು ನನ್ನ ತಲೆಯೇರಿ ಕುಳಿತುಕೊಳ್ಳಬಹುದೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕಣ್ಣ ಕಾಡಿಗೆಯಷ್ಟು
ಸದಾ ನೀ ನನ್ನ ನೋಟದಲ್ಲಿ, ಕಣ್ರೆಪ್ಪೆಯಲ್ಲಿ ಹುಡುಗಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಮೂಗುತಿಯಷ್ಟು
ನನ್ನ ಉಸಿರಿಗೂ ನಿನ್ನ ಸ್ಪರ್ಶದ ಅನುಭವವಾಗಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕಿವಿ ಓಲೆಯಷ್ಟು
ನಿನ್ನ ಪಿಸು ದನಿ ನನ್ನ ಕಿವಿಯಲ್ಲಿ ಕೇಳುತ್ತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಲಿಪಸ್ಟಿಕ್ ನಷ್ಟು
ನನ್ನ ಅಧರದ ಮೇಲೆ ಕುಳಿತು ಮಧುವನ್ನು ಹೀರುತ್ತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕರಿಮಣಿಯಷ್ಟು
ಎಂದೆಂದೂ ನೀನು ನನ್ನ ಹೃದಯದ ಮೇಲೆ ಕುಳಿತು ಅದರ ಬಡಿತವಾಗಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನಾನು ಧರಿಸುವ ಬಟ್ಟೆಯಷ್ಟು
ಸದಾ ನಿನ್ನ ಸುಮಧುರ ಸ್ಪರ್ಶದ ಅನುಭವ ನನಗಾಗುತ್ತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕೈ ಬಳೆಯಷ್ಟು
ಸಂಗತಿಯಾಗಿ ನೀ ನನ್ನ ಕೈ ಹಿಡಿದು ಸಾಗು ಎಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕಾಲ್ಗೆಜ್ಜೆಯಷ್ಟು
ನಿನ್ನ ಹೆಜ್ಜೆಯೊಂದಿಗೆ ನನ್ನ ಹೆಜ್ಜೆ ಬೆರೆಸಿ ಮುನ್ನಡೆಸು ಎಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನೀ ಕೊಟ್ಟ ಕೈ, ಕಾಲು ಉಂಗುರಗಳಷ್ಟು
ಒಂದೊಂದು ಬೆರಳುಗಳಲ್ಲೂ ನಿನ್ನ ಚೈತನ್ಯ ಬೆರೆತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಹಣೆಯ ಬೊಟ್ಟಿನಷ್ಟು
ನೀ ಹಚ್ಚಿದ ಕುಂಕುಮ ಎಂದೆಂದೂ ನಾ ನಿನ್ನವಳೆಂದು ಸಾರಿ ಹೇಳಲೆಂದು

ಅರ್ಥವಾಯಿತೇ ಗೆಳೆಯ
ನನ್ನ ಪ್ರೀತಿಯ ಆಳ

(Dedicated to my sweet husband)

Published in: on ಮೇ 8, 2009 at 10:23 AM  Comments (8)