ಮನೆಯಲ್ಲಿರುವವರು ನಾವಿಬ್ಬರೇ
ಆದರೆ ನಮಗಿಬ್ಬರಿಗೂ ಒಂದೊಂದು ಮಗುವಿದೆ
ನನಗೆ ನನ್ನ ಮಗುವಿನ ಮೇಲೆ ಅತ್ಯಂತ ಪ್ರೀತಿ
ನನ್ನವರಿಗೆ ಅವರ ಮಗುವಿನ ಮೇಲೆ ಅಪಾರ ಮಮತೆ
ತನ್ನ ಮರಿ ಹೊನ್ನ ಮರಿ ಎಂಬಂತೆ
ನನ್ನ ಮಗುವೆ ನನಗೆ ಎಲ್ಲರಿಗಿಂತ ಆಕರ್ಷಕ
ನನ್ನವರಿಗೆ ಅವರ ಮಗುವೆ ಬಲು ಸುಂದರ
ಒಟ್ಟಾರೆ ಎರಡು ಮಕ್ಕಳು ಚೆನ್ನವೇ
ನನ್ನ ಮಗು ತುಸು ದೊಡ್ಡದು
ಶಾಂತ ಸ್ವಭಾವ, ಹಠ, ತೀಟೆ ಬಹಳ ಕಮ್ಮಿ
ಅದು ಬೇಕು ಇದು ಬೇಕು ಎಂಬ ಹಠವಿಲ್ಲ
ಇಸೆಕ್ರೀಂ, ಚಾಕ್ಲೇಟ್ ಬೇಕೆಂದು ಎಂದೂ ಕಾಡಿಲ್ಲ
ನನ್ನವರ ಮಗುವೊ ತುಸು ಚಿಕ್ಕದು
ಶುದ್ದ ತಲೆ ಹರಟೆ, ಆಟ, ತೀಟೆ ಎಲ್ಲ ಜಾಸ್ತಿ
ಬೇರೆ ವಸ್ತುಗಳು ಬೇಕೆಂಬ ರಗಳೆ ಇಲ್ಲದೇ ಇದ್ರು
ಇಸೆಕ್ರೀಂಗಾಗಿ ಯಾವಾಗ್ಲೂ ಕಾಟ
ನನ್ನ ಮಗು ಬಹು ಬೇಗ ದುಃಖ ಪಡುವುದಿಲ್ಲ
ಅತಿಯಾದ ಸಂತೋಷವನ್ನು ವ್ಯಕ್ತಪಡಿಸುವುದಿಲ್ಲ
ಅಸಮಾಧಾನ, ಸಿಟ್ಟು, ಎಲ್ಲ ಬಹಳ ಕಮ್ಮಿ
ಸುಖ ದುಃಖ ಸಮೆಕ್ರತ್ವ ಎಂಬಂತೆ ಎಲ್ಲವೂ ಸಮಾನ ಅದಕ್ಕೆ
ನನ್ನವರ ಮಗುವಿಗೆ ಸ್ವಲ್ಪ ಬೇಜಾರಾದರೂ ದುಃಖ ಉಕ್ಕಿ ಬರುತ್ತದೆ
ಸಂತೋಷವಾದರೆ ಕುಣಿದು ಕುಪ್ಪಳಿಸುತ್ತದೆ
ಸಿಟ್ಟು ಬಂದರೆ ಅಸಮಾಧಾನವಾದರೆ ಗುಮ್ಮನೇ ಕುಳಿತಿರುತ್ತದೆ
ಎಲ್ಲ ಭಾವನೆಗಳನ್ನು ಬೇರೆ ಬೇರೆ ತರದಲ್ಲಿ ಅನುಭವಿಸುವ ಸ್ವಭಾವ ಅದಕ್ಕೆ
ನನ್ನ ಮಗು ಘಟನೆ ಕಹಿ ಇರಲಿ ಸಿಹಿ ಘಟನೆ ಇರಲಿ
ಎಲ್ಲವನ್ನು ಬೇಗ ಮರೆತುಬಿಡುತ್ತದೆ
ಯಾರ ಬಗೆಗೂ ಸಿಟ್ಟು ದ್ವೇಷ ಇಲ್ಲ
ಆದದ್ದು ಆಯಿತು ಎಂದು ಎಲ್ಲವನ್ನು ಮರೆತು ಬಿಡುವುದು ಈ ಮಗುವಿನ ಮನಸ್ಸು
ನನ್ನವರ ಮಗುವಿಗೆ ನೆನಪಿನ ಶಕ್ತಿ ಹೆಚ್ಚು
ಬಹಳ ಕಹಿ ಅಥವಾ ಬಹಳ ಸಿಹಿ ಘಟನೆಗಳನ್ನು ಬೇಗ ಮರೆಯುವುದಿಲ್ಲ
ದ್ವೇಷ ಸಾಧಿಸುವ ಸ್ವಭಾವ ಇಲ್ಲದೇ ಹೋದರು
ನೋವಿನ ಬರೆ, ಸಂತೋಷದ ಗೆರೆಗಳನ್ನು ಬೇಗ ಮರೆಯದು ಈ ಮಗುವಿನ ಹೃದಯ
ನನ್ನ ಮಗು ಮನೆಯಲ್ಲಿದ್ದರು ಅದರ ಪಾಡಿಗೆ ಅದು
ತನ್ನ ಲೋಕದಲ್ಲಿ, ತನ್ನ ಕೆಲಸದಲ್ಲಿ ಮುಳುಗಿರುತ್ತದೆ
ಅದನ್ನು ಸುಧಾರಿಸುವ ಕಷ್ಟ ಇಲ್ಲ, ಬುಧ್ಧಿ ಹೇಳುವ ಗೋಜ಼ಿಲ್ಲಾ
ತೀಟೆ ಮಾಡದೇ ಸುಮ್ಮನೇ ಕೂತಿರು ಎಂದು ಹೆದರಿಸುವ ಕೆಲಸವಿಲ್ಲ
ನಮ್ಮವರ ಮಗು ಅವರು ಮನಯಲ್ಲಿದ್ದರೆ ತೀಟೆ ಮಾಡುತ್ತಲೇ ಇರುತ್ತದೆ
ಅದರ ಕೆಲಸಗಳ ಮಧ್ಯ ನಮ್ಮವರಿಗೊಂದಿಷ್ಟು ಕಾಟ ಕೊಡುತ್ತಾ ಇರುತ್ತದೆ
ತರಲೆ ಮಕ್ಕಳಿಗಿರುವ ಎಲ್ಲ ಗುಣಗಳು, ಅಭ್ಯಾಸಗಳು ಇದಕ್ಕಿವೆ
ಕೆಲವೊಮ್ಮೆ ಸುಮ್ಮನೇ ಕೂರಿಸಲು ಗದರಿಸುವ, ಮುದ್ದಿನಿಂದ ಹೇಳುವ ಅವಶ್ಯಕತೆ ಇದೆ
ಹಬ್ಬ ಹರಿದಿನಗಳು, ಜನುಮದಿನಗಳಂತಹ ಸಂದರ್ಭಗಳಲ್ಲಿ
ತುಂಬಾ ಸಂಭ್ರಮ, ಸಡಗರ ವ್ಯಕ್ತಪಡಿಸುವುದು ನನ್ನವರ ಮಗು
ನನ್ನವರ ಮಗುವಿನ ಸಂತಸವನ್ನು ನೋಡಿ ಖುಷಿ ಪಡುವುದು ನನ್ನ ಮಗು
ನನ್ನ ಮಗು ಸನ್ಯಾಸಿಯಾಗಬೇಕಿತ್ತು ಎಂದು ಒಮ್ಮೊಮ್ಮೆ ನನ್ನ ತಮಾಷೆ
ಮಗು ಮಗು ಎಂದು ಹೇಳಿ ಮಗು ಯಾರೆಂದು ಹೇಳಬೇಕಲ್ಲ
ಮನೆಯಲ್ಲಿರುವ ಇಬ್ಬರಲ್ಲಿ ನನಗೆ ನನ್ನವರು ಮಗು
ನನ್ನವರಿಗೆ ನಾನೇ ಮಗು
ಈಗ ಹೇಳಿ ನಿಮಗ್ಯಾವ ಮಗು ಇಷ್ಟ ಎಂದು.
