ಹೌಸ್ ವೈಫ್

ಚಿತ್ರಕಲೆ, ಸಂಗೀತ ಮುಂತಾದ ವಿಧ ವಿಧವಾದ ಕಲೆಗಳಂತೆಯೇ ಚೆನ್ನಾಗಿ, ರುಚಿಕಟ್ಟಾದ ಅಡುಗೆ ಮಾಡುವುದೂ ಒಂದು ಕಲೆ. ಜಗತ್ತಿನಲ್ಲಿ ಬಹಳಷ್ಟು ಜನ ಅಡುಗೆ ಮಾಡುತ್ತಾರೆ. ಆದರೆ ಎಲ್ಲರೂ ರುಚಿ ರುಚಿಯಾಗೇ ಮಾಡುತ್ತಾರೆ ಅಂತ ಏನಿಲ್ಲವಲ್ಲ. ರುಚಿಯಾಗಿ ಅಡುಗೆ ಮಾಡುವುದಕ್ಕೂ ತಾಳ್ಮೆ, ಪರಿಶ್ರಮ, ಶ್ರದ್ಧೆ, ಅನುಭವ ಎಲ್ಲ ಬೇಕು. ಅಡುಗೆ ಮಾಡುವುದು ಎಲ್ಲರೂ ಸ್ವಲ್ಪ ಮಟ್ಟಿಗಾದರೂ ಕಲಿಯುವಂತಹ ಒಂದು ಕಲೆ.

ಹೌಸ್ ವೈಫ್ ಅಂದ ತಕ್ಷಣ “ಓ ನೀನು ಕೆಲಸಕ್ಕೆ ಹೋಗ್ತಾ ಇಲ್ವಾ?” ಅಂತ ಮುಗೆಳೆಯುವವರೂ ಇದ್ದಾರೆ. ಹೌಸ್ ವೈಫ್ ಅಂದರೆ ಬರೇ ಮನೆಯಲ್ಲಿ ಅಡುಗೆ ಮಾಡಿಕೊಂಡು ಕುಳಿತಿರುವವರು ಅನ್ನುವ ಭಾವನೆ. ಕೆಲವರು ತಾವು ಮನೆಯಲ್ಲಿರುವವರು, ಹೊರಗೆ ಹೋಗಿ ಕೆಲಸ ಮಾಡೋರಲ್ಲ ಅಂತ ಹೇಳೋಕೆ ಹಿಂಜರಿತಾರೆ. ಅವರ ಬಗ್ಗೆನೆ ಅವರಿಗೆ ಕೀಳರಿಮೆ. ನಾನೇನು ಮಾಡುತ್ತಿಲ್ಲ, ಗಂಡನ ಹತ್ತಿರ ಹಣ ತೆಗೆದುಕೊಳ್ಳಬೇಕಲ್ಲ ಎಂಬ ಭಾವನೆ.

ಇಡೀ ದಿನ ಮನೆಯಲ್ಲಿದ್ದು, 3 ಹೊತ್ತು ರುಚಿಯಾದ ಅಡುಗೆ ಮಾಡಿ, ಗಂಡನ (ಮಕ್ಕಳಿದ್ದರೆ ಮಕ್ಕಳ) ಅವಶ್ಯಕತೆಗಳನ್ನು ನೋಡಿಕೊಂಡು, ಮನೆಯ ಸ್ವಚ್ಛತೆ ಮತ್ತು ಇತರ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುವುದು ಯಾವುದಕ್ಕೆ ಕಮ್ಮಿ ಹೇಳಿ? ನಾನು ಸಹ ಕೆಲವೊಮ್ಮೆ ಹೀಗೆ ಯೋಚಿಸುತ್ತಿದ್ದೆ. ನಾನು ಹೊರಗೆ ಹೋಗಿ ಹಣ ಸಂಪಾದಿಸಿಕೊಂಡು ಬಂದರೆ ಮಾತ್ರ ಗೌರವ,ಇಲ್ಲವಾದರೆ ನಾನು ಏನು ಮಾಡುತ್ತಿಲ್ಲ, ನನ್ನವರ ಮೇಲೆ ಹೊರೆಯಾಗಿದ್ದೇನೆ ಅಂತೆಲ್ಲಾ ಯೋಚಿಸುತ್ತಿದ್ದೆ. ಆದರೆ ನನ್ನ ಈ ಯೋಚನೆಯನ್ನು ತಿಳಿದ ನನ್ನವರು ಹೇಳಿದ ಮಾತು ಇದು. ” ಮನೆಯಲ್ಲಿದ್ದು ನನ್ನ ಅವಶ್ಯಕತೆಗಳನ್ನೆಲ್ಲ ನೋಡಿಕೊಂಡು, ಮನೆಯ ಆಗು ಹೋಗುಗಳನ್ನು ನೋಡಿಕೊಂಡು ನನಗೆ ಹೊರಗೆ ದುಡಿಯುವ ಶಕ್ತಿ ಕೊಡುವವಳು ನೀನು. ನೀನು ನನ್ನ ಮೇಲೆ ಹೊರೆಯಾಗಿಲ್ಲ. ನಿನ್ನ ಪ್ರೋತ್ಸಾಹ ಇದ್ದಾರೆ ಮಾತ್ರ ನಾನು ಏನನ್ನಾದರೂ ಮಾಡಲು ಸಾಧ್ಯ. ನೀನು ಮನೆಯಲ್ಲಿ ದುಡಿಯುತ್ತೀಯ, ನಾನು ಹೊರಗೆ ಅಷ್ಟೇ. ನಾನು ದುಡಿಯುವುದರಲ್ಲಿ ನಿನಗೂ ನನ್ನಷ್ಟೇ ಹಕ್ಕಿದೆ” ಅಂತ ತಿಳಿಸಿ ಹೇಳಿದರು. ನನಗೂ ಅದು ನಿಜ ಅನ್ನಿಸಿತು. ಆಗಿನಿಂದ ನಾನು ನನ್ನ ವಿಚಾರಧಾರೆಯನ್ನು ಬದಲಾಯಿಸಿಕೊಂಡಿದ್ದೇನೆ. ನನ್ನ ಹಾಗೆ ಯೋಚಿಸುವವರು ಬಹಳಷ್ಟು ಜನ ಇದ್ದಾರೆ. ನೀವು ಕೂಡ ನಿಮ್ಮ ವಿಚಾರಧಾರೆಯನ್ನು ಬದಲಾಯಿಸಿಕೊಳ್ಳಿ. ಹೊರಗೆ ದುಡಿಯುವ ಮನಸ್ಸಿದ್ದರೆ, ಅನುಕೂಲವಿದ್ದರೆ ಹೊರಗೆ ಹೋಗಿ ಕೆಲಸ ಮಾಡಬಹುದು. ಇಲ್ಲವಾದರೆ ಮನೆಯ ಆಗು ಹೋಗುಗಳನ್ನು ಚೆನ್ನಾಗಿ ನಿಭಾಯಿಸಿ (ಸಂತೋಷದಿಂದ) ನಿಮ್ಮನ್ನು ನೀವು ಕೀಳಾಗಿ ಕಾಣಬೇಡಿ.

ನಾನು ಸಹ ವರ್ಷದ ಹಿಂದಷ್ಟೇ ಹೊಸದಾಗಿ ಗೃಹಿಣಿಯ ಪಟ್ಟವನ್ನು ಹೊಂದಿದವಾಳಾದ್ದರಿಂದ ಅಡಿಗೆಯಲ್ಲಿ ಅಷ್ಟೊಂದು ನುರಿತವಳಲ್ಲ. ಆದರೂ ನಾನು ಕಲಿತಂತಹ ಕೆಲವು ಅಡಿಗೆಗಳನ್ನು ಇಲ್ಲಿ ಹಾಕಿದ್ದ್ಡೇನೆ. ಒಮ್ಮೆ ಭೇಟಿ ಕೊಟ್ಟು ನೋಡಿ ತಮ್ಮ ಅಭಿಪ್ರಾಯ ತಿಳಿಸಿ.

ranjanah.blogspot.com

pic-12
pic-22

Published in: on ಮೇ 5, 2009 at 3:10 ಅಪರಾಹ್ನ  Comments (2)