ಅಜ್ಜಿಯೊಂದಿಗಿನ ಆ ಮುಸ್ಸಂಜೆ….

ದಿನಾಲೂ ಮುಸ್ಸಂಜೆ ಹೊತ್ತಲ್ಲಿ ಕುಳಿತು ಸತ್ಯವಾನ ಸಾವಿತ್ರಿ ಹಾಡು, ಸುಧಾಮ ಚರಿತ್ರೆ ಹಾಗೂ ಕೆಲವು ಶ್ಲೋಕಗಳನ್ನು ತಪ್ಪದೇ ಹೇಳುತ್ತಿದ್ದ ಅಜ್ಜಿ ಇಂದು ಯಾಕೊ ಬರೇ ಶ್ಲೋಕ, ಸುಧಾಮ ಚರಿತ್ರೆ ಹೇಳಿ ನನಗೆ ಪ್ರಿಯವಾದ ಸತ್ಯವಾನ ಸಾವಿತ್ರಿ ಹಾಡು ಹೇಳದೇ ಸುಮ್ಮನೆ ಕುಳಿತಿದ್ದಳು. ಆದರೆ ದಿನಾ ಆಕೆಯ ಪಕ್ಕ ಕುಳಿತು ಕೇಳುತ್ತಿದ್ದ ನಾನು ಸುಮ್ಮನೆ ಕೂರಲಾರದೆ

“ಅಜ್ಜಿ ಸಾವಿತ್ರಿ ಹಾಡು ಯಾಕೆ ಹೇಳಿಲ್ಲ ಹೇಳಜ್ಜಿ” ………ಅಂತ ರಾಗ ತೆಗೆದೆ.

“ಇಲ್ಲಾ ಮಗಳೆ ಇವತ್ತು ಸಾಕು ನಾಳೆ ಹೇಳ್ತೀನಿ” ಅಂದ ಅಜ್ಜಿಯ ಮುಖ ಯಾಕೋ ಮಂಕಾಗಿರುವಂತೆ ಭಾಸವಾಯಿತು. ಅಜ್ಜಿ ಏನೋ ಚಿಂತೆಯಲ್ಲಿದ್ದು ಅದನ್ನು ನನ್ನಿಂದ ಮರೆಮಾಚುತ್ತಿದ್ದಂತೆ ಮನಸ್ಸಿಗೆ ಅನ್ನಿಸಿತು.

ಅಜ್ಜಿ ಏನಾಯ್ತಜ್ಜಿ? ಹುಶಾರಿಲ್ವಾ? ಯಾರದ್ರು ಏನಾದ್ರೂ ಅಂದ್ರಾ? ಯಾಕಜ್ಜಿ ಒಂಥರಾ ಇದ್ದೀಯಾ? ನನ್ನ ಅನುಮಾನ ಪರಿಹರಿಸಿಕೊಳ್ಳಲು ನಾಲ್ಕಾರು ಪ್ರಶ್ನೆಗಳನ್ನು ಒಟ್ಟಿಗೆ ಅಜ್ಜಿಯತ್ತ ಎಸೆದೆ.

“ಇಲ್ಲ ಪುಟ್ಟಾ ನಾನು ಹುಶಾರಾಗೆ ಇದೀನಿ, ಯಾರೂ ಏನೂ ಅಂದಿಲ್ಲ” …..ಮತ್ತೆ ಅಜ್ಜಿಯಿಂದ ತಪ್ಪಿಸಿಕೊಳ್ಳೊ ಉತ್ತರ.

ಏನೊ ಆಗಿದ್ದಂತೂ ನಿಜ, ಅಜ್ಜಿ ದಿನದ ಹಾಗಿಲ್ಲ ಅಂತ ಯೋಚನೆ ಮಾಡ್ತಾ ಇರುವಾಗ ಇಂದು ಅಜ್ಜನ ತಿಥಿ ಅಂತ ನೆನಪಿಗೆ ಬಂತು.
ಅಜ್ಜನ ಜ್ನಾಪಕ ಬಂತಾ ಅಜ್ಜಿ? ನೀ ಅಜ್ಜನ್ನ ಮಿಸ್ ಮಾಡ್ಕೋತಿದೀಯಾ? ಅದಕ್ಕೆ ಬೇಜಾರಾ? ನನ್ನ ಪ್ರಶ್ನೆ……

ಒಂದು ನಿಮಿಷ ಮೌನದಲ್ಲಿದ್ದ ಅಜ್ಜಿ ನಿಧಾನವಾಗಿ “ಹೂಂ ಜ್ನಾಪಕ ಬಂತು ಪುಟ್ಟಾ” ಅಂತ ಉತ್ತರಿಸಿದಳು

ಅಜ್ಜ ನಿನ್ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ರಾ ಅಜ್ಜಿ?
ಈ ಪ್ರಶ್ನೆ ಅಜ್ಜಿಯನ್ನು ತುಂಬಾ ಇಕ್ಕಟ್ಟಿಗೆ ಸಿಲುಕಿಸಿದಂತೆ ತೋರಿತು, ಅಜ್ಜಿ ಏನು ಉತ್ತರಿಸಲೆಂದು ಗೊಂದಲದಲ್ಲಿದ್ದಂತೆ ಅನ್ನಿಸಿತು….

“ಈ ನಿಜವಾದ ಪ್ರೀತಿ ಪ್ರೇಮ ಯಾವುದೂ ನನಗೆ ತಿಳೀಲೇ ಇಲ್ಲ ಮಗಳೆ.”….

ಯಾಕಜ್ಜಿ? ಅಜ್ಜ ನಿನ್ನನ್ನ ಪ್ರೀತಿಸ್ತಾ ಇರ್ಲಿಲ್ವಾ? ನೀನು ಅಜ್ಜನ್ನ ಪ್ರೀತಿಸ್ತಾ ಇರ್ಲಿಲ್ವಾ?

“ಆ ಕಾಲ ಇಂದಿನಂತಲ್ಲ ಪುಟ್ಟಾ, ಪ್ರೀತಿ ಪ್ರೇಮ ಮಾಡಿ ನಮ್ಮ ಮದುವೆ ಆಗಿರ್ಲಿಲ್ಲ. ಮದುವೆ ಆಗುವಾಗ ನನಗಿನ್ನೂ ಹನ್ನೊಂದು ವರ್ಷ. ನಿಮ್ಮಜ್ಜನಿಗೆ ನಲವತ್ತೆರಡು. ನಮ್ಮ ಮನೆಯಲ್ಲಿ ತುಂಬಾ ಬಡತನ, ಸಾಲದ್ದಕ್ಕ ಮೂರು ಜನ ಹೆಣ್ಣು ಮಕ್ಕಳು ಬೇರೆ. ಹಾಗೂ ಹೀಗೂ ಸಂಸಾರ ಸಾಗಿಸುತ್ತಿದ್ದ ನಮ್ಮಪ್ಪನಿಗೆ ಮದುವೆ ಮಾಡಿ ಮುಗಿಸುವುದೆ ಕಷ್ಟವಾಗಿತ್ತು.
ನಿಮ್ಮಜ್ಜನಿಗೋ ಆಗಲೇ ಎರಡು ಸಾರಿ ಮದುವೆಯಾಗಿತ್ತು. ಹೆರಿಗೆಯ ಸಮಯದಲ್ಲಿ ಮೊದಲನೆಯ ಪತ್ನಿ ತೀರಿಕೊಂಡರೆ, ಯಾವುದೋ ರೋಗದಿಂದ ಮದುವೆಯಾದ ಕೆಲ ವರ್ಷಗಳಲ್ಲಿ ಎರಡನೆಯ ಪತ್ನಿ ತೀರಿಕೊಂಡಿದ್ದಳು. ಮನೆಯನ್ನು ನೋಡಿಕೊಳ್ಳೊದಕ್ಕೆ ಹೆಣ್ಣೊಂದು ಬೇಕಿತ್ತು, ನಿಮ್ಮ ತಾತನ ತಾಯಿ ತನಗೆ ತಿಳಿದ ಕೆಲವು ಕಡೆ ಹುಡುಗಿ ಹುಡುಕಲು ತಿಳಿಸಿದ್ದರು. ನನ್ನ ತಂದೆಯ ಕಷ್ಟ ತಿಳಿದ ಒಬ್ಬರು ಮನೆಯ ಹಿರಿ ಮಗಳಾದ ನನಗೆ ಈ ಸಂಬಂಧದ ಪ್ರಸ್ತಾಪ ನೀಡಿದ್ದರು. ಮದುವೆಯ ಖರ್ಚೆಲ್ಲ ಗಂಡಿನ ಕಡೆಯದು, ಊಟಕ್ಕೇನೂ ಕೊರತೆಯಿಲ್ಲ, ತಕ್ಕ ಮಟ್ಟಿಗೆ ಅನುಕೂಲ ಉಳ್ಳವರು ಎಂಬ ಕಾರಣಕ್ಕೆ ನಮ್ಮ ತಂದೆ ತಾಯಿನೂ ಈ ಮದುವೆಗೆ ಒಪ್ಪಿದ್ದರು”

ನೀನೂ ಒಪ್ಕೊಂಬಿಟ್ಯಾ ಅಜ್ಜಿ? ಬೇಡಾ ಅನ್ನಲಿಲ್ವಾ? ಅಜ್ಜಿ ಮಾತು ಮುಗಿಸುತ್ತಲೇ ನನ್ನ ಪ್ರಶ್ನೆ ಕಾದಿತ್ತು..

“ನನ್ನನ್ನು ಯಾರು ಕೇಳೊರು ಮಗಳೆ, ನಾನು ಅತ್ತೆ, ಕರೆದೆ, ಹಠ ಹಿಡಿದೆ ಯಾವುದಕ್ಕೂ ಯಾರೂ ಜಗ್ಗಲಿಲ್ಲ.ಈ ಮದುವೆಗೆ ಒಪ್ಕೋ ಸುಮ್ನೆ ಮುಂದೆ ಎಲ್ಲಾ ಒಳ್ಳೇದಾಗತ್ತೆ ಅಂತ ಅಮ್ಮನ ತಿಳುವಳಿಕೆಯ ಮಾತು. ಮನೆಯ ಪರಿಸ್ಥಿತಿಯ ಅರಿವಿದ್ದ ನಾನು ಅಳುತ್ತಲೇ ನಿಮ್ಮಜ್ಜನ ಮೂರನೇ ಮಡದಿಯಾಗಿ ಹಸೆಮಣೆ ಏರಬೇಕಾಯ್ತು”
“ಛೆ ಪಾಪ ..ನೀನು ಅಷ್ಟು ವಯಸ್ಸಾದ ಅಜ್ಜನ ಮೂರನೆ ಹೆಂಡತಿ ಆಗೇ ಬಿಟ್ಯಲ್ಲಾ ಅಜ್ಜಿ”…

“ಹೂಂ ಪುಟ್ಟಾ, ಈ ಮನೆಗೆ ಬಂದೆ, ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ಹೋದೆ, ಪ್ರೀತಿ ಪ್ರೇಮ ಅರಿಯುವ ಮುನ್ನವೇ ೬ ಮಕ್ಕಳೂ ಆದವು. ಈ ರೀತಿ ೧೫ ವರ್ಷ ನಿಮ್ಮಜ್ಜನೊಂದಿಗೆ ಕಳೆದಿದ್ದೆ. ಅಷ್ಟರಲ್ಲಿ ಯಾವುದೋ ಖಾಯಿಲೆ ಅವರನ್ನು ತಿನ್ನೋಕೆ ಶುರು ಮಾಡ್ತು. ಯಾವ ಔಷಧ ಮದ್ದಿಗೂ ಗುಣವಾಗದೇ ವರ್ಷದಲ್ಲೇ ನಿಮ್ಮಜ್ಜ ತೀರಿಕೊಂಡರು”

ಅಯ್ಯೊ ಅಷ್ಟು ಬೇಗಾನಾ? ನೀನಿನ್ನೂ ಚಿಕ್ಕೋಳಲ್ವಾ ಅಜ್ಜಿ? ಜೊತೆಗೆ ಅಷ್ಟೊಂದು ಮಕ್ಕಳು ಬೇರೆ…ಏನು ಮಾಡಿದೆ ಅಜ್ಜಿ?

“ಮಾಡೋದೇನು ಪುಟ್ಟಾ, ಕರ್ತವ್ಯ ಇತ್ತಲ್ಲ..ಕಷ್ಟ ಪಟ್ಟು ಮಕ್ಕಳನ್ನು ಬೆಳೆಸಿದೆ, ಗದ್ದೆ ತೋಟದಲ್ಲಿ ದುಡಿದೆ, ಬಂದ ಫಸಲಿನಲ್ಲಿ ಊಟ ಖರ್ಚು ನಿಭಾಯಿಸಿದೆ. ಹೇಗೋ ಆ ದಿನಗಳು ಕಳೆದವು. ಎಲ್ಲಾ ಮಕ್ಕಳು ಬೆಳೆದವು, ವಿದ್ಯೆ ಕಲಿತು, ತಮ್ಮ ಕಾಲಮೇಲೆ ನಿಂತು, ಮದುವೆಯಾಗಿ ಈಗ ನೀವೆಲ್ಲ ಹುಟ್ಟಿದ್ದೀರಾ”….

ಹಾಗಾದ್ರೆ ನಿಂಗೆ ಅಜ್ಜನಿಗೆ ಪ್ರೀತಿ ಮಾಡೋಕೆ ಆಗ್ಲೇ ಇಲ್ವಾ ಅಜ್ಜಿ?

“ಎಲ್ಲಿ ಪ್ರೀತಿ ಮಗಳೆ? ಒಲ್ಲದ ಗಂಡಿನೊಂದಿಗೆ ಮದುವೆ, ಎಲ್ಲ ಅರಿಯುವ ಮುನ್ನವೆ ಮಕ್ಕಳು, ಸಂಸಾರ. ತಿಳುವಳಿಕೆ ಬರುವ ವಯಸ್ಸಿನಲ್ಲಿ ಪ್ರೀತಿಸೊ ಮನುಷ್ಯನೇ ಇಲ್ಲವಲ್ಲ…ಆಗ ಕರ್ತವ್ಯವನ್ನೇ ಪ್ರೀತಿಸಿದೆ ಅಷ್ಟೆ”……

ಆಗ ನಾನು ಯೋಚನೆಗೆ ಬಿದ್ದೆ. ಅಜ್ಜಿಗೆ ಈಗ ಮಕ್ಕಳು, ಮೊಮ್ಮಕ್ಕಳು, ಸೊಸೆಯರು, ಅಳಿಯಂದಿರು ಅಂತಾ ಪ್ರೀತಿಸೊ ದೊಡ್ಡ ಪರಿವಾರವೇ ಇದೆ, ಆದ್ರೆ ಪತಿ, ಪತ್ನಿಯ ನಡುವಿನ ಆ ಪ್ರೀತಿ ಯಾವತ್ತೂ ಸಿಕ್ಕೇ ಇಲ್ವಾ? ಅವಳು ಕೂಡಾ ಅದನ್ನು ಕೊಡೋಕೆ ಅವಕಾಶವೇ ಆಗಿಲ್ವಾ? ಆಗಿನ ಅವಳ ಜೀವನವನ್ನು, ಈಗಿನ ನಮ್ಮ ಜೀವನದ ಜೊತೆ ತುಲನೆ ಮಾಡಿ ಅಜ್ಜಿಯ ಮುಖವನ್ನೇ ಒಮ್ಮೆ ದಿಟ್ಟಿಸಿ ನೋಡಿದೆ.
ಪ್ರೀತಿ – ಪ್ರೇಮ ಹೆಪ್ಪುಗಟ್ಟಿ ನಿಂತಂತೆ ತೋರಿತು ಮುಸ್ಸಂಜೆಯ ಮಬ್ಬು ಬೆಳಕಲ್ಲಿ…………………..

( ನನ್ನಜ್ಜಿಯ ನೈಜ ಕಥೆಯಲ್ಲ )

Published in: on ಜೂನ್ 17, 2010 at 2:31 AM  Comments (7)  

ಓ ನನ್ನ ಪ್ರೇಮವೇ…

ನೀ ಮರವಾಗಿ ಆಸರೆ ನೀಡೆ
ನಾ ಲತೆಯಾಗಿ ಬಳಸಿ ನಿಲ್ಲುವೆ ನಿನ್ನ

ನೀ ಸಾಗರವಾಗಿ ನನ್ನ ನಿನ್ನೊಳು ಹುದುಗಿಸಿಕೊಳ್ಳೆ
ನಾ ನದಿಯಾಗಿ ಓಡೋಡಿ ಬರುವೆ ನಿನ್ನ ಸೇರಲು

ನೀ ಮುನ್ನಡೆಯೆ ದಾರಿ ದೀಪವಾಗಿ
ನಾ ಬರುವೆ ನಿನ್ನ ಹೆಜ್ಜೆ ಗುರುತಾಗಿ

ನೀ ದುಂಬಿಯಾಗಿ ಅಲೆಯುತಿರೆ
ನಾ ಕಾಯುತಿಹೆ ಹೂವಾಗಿ ಮಕರಂದ ನೀಡಲು

ನೀ ಹನಿಯಾಗಿ ವರ್ಷಧಾರೆಯಾಗಿ ಸುರಿಯುತಿರೆ
ನಾ ಕಾಯುತಿಹೆ ಭುವಿಯಾಗಿ ನಿನ್ನ ಹೀರಲು

ನೀ ನನ್ನ ಹಿತವಾಗಿ ನೋವು ನಲಿವೇ ಆಗಿ ಜೊತೆಯಿರಲು
ನಾ ಬರುವೆ ಕೈ ಹಿಡಿದು ಬಾಳಾಗಿ ಬಂಧುವಾಗಿ

Published in: on ಜೂನ್ 9, 2010 at 2:53 AM  Comments (8)  

ಜಾರದಿರು ಹನಿಯಾಗಿ ಮುಗ್ದ ಸವಿ ನಗುವೆ….

ಜಾರದಿರು ಕಂಬನಿಯೆ
ನಕ್ಷತ್ರದಂಚಿಂದ
ತುಳುಕದಿರು ಉಕ್ಕಿದಾ
ಕೊಳವಾಗಿ ನೀ

ಕೋಟಿ ಮೀರಿದ ಬೆಲೆಯ
ಕಿರುನಗೆಯ ಮುಚ್ಚಿಟ್ಟು
ಬಾರದಿರು ಓಡೋಡಿ
ಕಣ್ಣಂಚಲಿ

ತಂಗಾಳಿ ಕಾದಿಹುದು
ಮುಂಗುರುಳ ತೀಡಲು
ಚಂದಿರನು ತಪಿಸಿದನು
ಕೇಕೆಗಾಗಿ

ಹಾಡುತಿಹುದು ಜೋಗುಳ
ಪಶು ಪಕ್ಷಿಸಂಕುಲ
ನಿನ್ನೊಂದು ನಸುನಗೆಯ
ಕುಡಿನೋಟಕೆ

ಜಾರಿ ಬಿದ್ದು ಚಿಪ್ಪಿನೊಳು
ಮುತ್ತಾಗದೀ ಹನಿ
ಮುಚ್ಚಿಟ್ಟೊಡೆ ಅರಳುವುದು ಹೂವಾಗಿ
ತುಟಿಯಂಚಲಿ

ಹೂವಿಂದ ಹೂ ಬಿರಿದು
ನಗೆಯಿಂದ ನಗೆ ಹರಡಿ
ಪಸರಿಸಲಿ ಎಲ್ಲೆಡೆ
ಸಂತೋಷದಾ ಹೊನಲಾಗಿ

Published in: on ಜೂನ್ 9, 2010 at 2:42 AM  Comments (4)  

ಪ್ರೀತಿ ಇಲ್ಲದ ಮೇಲೆ……

ಒಬ್ಬೊಬ್ಬರೂ ಒಂದೊಂದು ರೀತಿಯಾಗಿ ಪ್ರೀತಿಯ ಬಗ್ಗೆ ವ್ಯಾಖ್ಯಾನ ನೀಡುತ್ತಾರೆ. ಆದರೆ ವಾಸ್ತವದಲ್ಲಿ ನಿಜವಾದ ಪ್ರೀತಿ ಎಂದರೇನು? ಅದು ಹೇಗಿರುತ್ತದೆ? ಎಲ್ಲಿ ಹುಟ್ಟುತ್ತದೆ? ಮನಸಲ್ಲಾ? ಹೃದಯದಲ್ಲಾ?, ಬುದ್ಧಿಯಲ್ಲಾ? ತಿಳಿದಿಲ್ಲ. ಯಾವಾಗ ಬರುತ್ತದೆ, ಯಾರ ಮೇಲೆ ಬರುತ್ತದೆ ಅರಿತಿಲ್ಲ. ಆದರೆ ಇಷ್ಟು ಮಾತ್ರ ಅರಿತಿದ್ದೇನೆ..ಪ್ರೀತಿ ಇಲ್ಲದೆ ಬದುಕಿಲ್ಲ….

ಅಮ್ಮನ ಮಮತೆ, ಮಡಿಲು, ಕೈತುತ್ತು
ಅಪ್ಪನ ವಾತ್ಸಲ್ಯ, ಬೆರಳಿನ ಆಧಾರ, ಹೊತ್ತ ಹೆಗಲು
ಸಹೋದರ ಸಹೋದರಿಯರು ತೋರಿದ ಕಾಳಜಿ, ಆಟವಾಡಿದ, ಕಿತ್ತಾಡಿದ ಕ್ಷಣಗಳು
ಸ್ನೇಹಿತ ಸ್ನೇಹಿತೆಯರ ಸ್ನೇಹ, ಕಷ್ಟಕಾಲದ ಜೊತೆ
ಪ್ರಿಯತಮ ಪ್ರೇಯಸಿಯರ ನಡುವಿನ ರೋಮಾಂಚನ, ಸಂತೋಷದ ಘಳಿಗೆಗಳು ಇವೆಲ್ಲವೂ ಪ್ರೀತಿಯೇ.

ಒಂದು ವಸ್ತುವಿನ ಬಗ್ಗೆ ಇರುವ ಮಮಕಾರ, ಅದು ದೊರಕಿದಾಗ ಸಿಗುವ ಆನಂದ, ಸಾಕಿದ ಒಂದು ಪ್ರಾಣಿಯ ಜೊತೆಗಿನ ಬಂಧ, ಅದು ತೋರುವ ವಿಶ್ವಾಸವೂ ಕೂಡ ನನ್ನ ದೃಷ್ಟಿಯಲ್ಲಿ ಪ್ರೀತಿಯೇ. ಆದರೆ ಇವೆಲ್ಲ ಪ್ರೀತಿಯ ಬೇರೆ ಬೇರೆ ಮುಖಗಳು, ಎಲ್ಲವೂ ಬೇರೆ ಬೇರೆ, ಅದರ ಅನುಭವವೂ ಬೇರೆ, ಆನಂದವೂ ಬೇರೆ ಅಲ್ಲವೆ?

ಆದರೆ ಪತಿ ಪತ್ನಿಯರ ನಡುವಿನ ಪ್ರೀತಿಯನ್ನು ವಿಶೇಷ ವಾಗಿ ವರ್ಣಿಸುತ್ತಾರೆ… ಎರಡು ಜೀವಗಳು ಬೇರೆ ಬೇರೆ ಪರಿಸರದಲ್ಲಿ ಹುಟ್ಟಿ, ಬೆಳೆದು ತದನಂತರ ಒಂದು ಬಂಧನದಲ್ಲಿ ಬೆಸೆದು ಜೀವನಪೂರ್ತಿ ಒಂದಾಗಿ ಕಳೆಯುತ್ತಾರಲ್ಲಾ ಅದಕ್ಕಾಗಿಯೇ ಇರಬೇಕು ಈ ಸಂಬಂಧಕ್ಕೆ ಪ್ರೀತಿಯಲ್ಲಿ ವಿಶೇಷ ಸ್ಥಾನ.

ಇಬ್ಬರ ಸ್ವಭಾವವೂ ಬೇರೆ, ಅಲೋಚನೆಗಳಲ್ಲೂ ಅಂತರ, ದಿನನಿತ್ಯದ ಅಭ್ಯಾಸಗಳಂತೂ ಸಂಪೂರ್ಣ ವಿರುಧ್ದ. ಆದರೂ ಒಬ್ಬರ ಸ್ವಭಾವ, ಅಭ್ಯಾಸ, ಆಲೋಚನೆಗಳನ್ನು ಸ್ವೀಕರಿಸಿ ಅದರೊಂದಿಗೆ ತಮ್ಮ ಅಸೆ, ಇಂಗಿತ, ಅಭಿಪ್ರಾಯಗಳನ್ನು ಜೋಡಿಸಿ, ಹೊಸದೆ ಆದ ಒಂದು ಲೋಕವನ್ನು ಕಟ್ಟಿಕೊಳ್ಳುವ ಕೆಲಸ ಅಷ್ಟು ಸುಲಭದ ಮಾತಲ್ಲ. ಆದರೆ ಈ ಪ್ರೀತಿ ಎಂಬ ಬೆಸುಗೆ ಇದೆಯಲ್ಲ ಅದು ಎಲ್ಲವನ್ನೂ ಸುಲಭ, ಸರಳ ಸಹಜವಾಗಿ ಪರಿವರ್ತಿಸಿಬಿಡುತ್ತದೆ.

ಎಷ್ಟೋ ಸಾರಿ ಭಿನ್ನ ಅಭಿಪ್ರಾಯಗಳಿಂದಾಗಿರಬಹುದು ಅಥವಾ ಇನ್ಯಾವುದೇ ಕಾರಣದಿಂದ ಜಗಳ, ಮಾತಿನ ಚಕಮಕಿ, ಒಬ್ಬರ ಮೇಲೆ ಇನ್ನೊಬ್ಬರ ಕೋಪ, ಅಸಹನೆ ಇವೆಲ್ಲ ಎಲ್ಲರ ಮನೆಯ ದೋಸೆಯೂ ತೂತು ಎಂಬಷ್ಟೆ ಸತ್ಯವಾದರೂ ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿನಂತೆ ಇವು ಕ್ಷಣಕಾಲ ಮಾತ್ರ. ಮತ್ತೆ ಇಬ್ಬರೂ ಒಂದೆ ಜೀವ. ಹುಟ್ಟಿದಾಗಿನಿಂದಲೂ ಒಟ್ಟಿಗೆ ಇದ್ದವರಂತೆ, ಮುಂದಿನ ಜನುಮಗಳಲ್ಲೂ ಒಟ್ಟಿಗೇ ಇರುವವರಂತೆ ಒಬ್ಬರಿಗೊಬ್ಬರು ಎಲ್ಲವನ್ನೂ ಹಂಚಿಕೊಂಡು, ಪರಸ್ಪರರ ಅವಶ್ಯಕತೆಗಳನ್ನು ಪೂರೈಸುತ್ತ, ವಿಶೇಷ ಮಮಕಾರ ವ್ಯಕ್ತಪಡಿಸುತ್ತ, ಒಂದೇ ಸೂರಿನಡಿ ಬದುಕುವುದಿದೆಯಲ್ಲ ಅದೇ ಏನು ಪ್ರೀತಿ ಅಂದರೆ?

ನಾನು ಎನ್ನುವುದು ಹೋಗಿ ನಾವು ಎಂದಾಗಿ, ನನಗಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ನಮಗಾಗಿ, ನಮ್ಮ ಭವಿಷ್ಯಕ್ಕಾಗಿ ಎಂಬ ಭಾವನೆ ಮೂಡಿ, ಬೇರೆ ಗಂಡಸರು ಸಲ್ಮಾನ್ ಖಾನ್ ನಂತೆ ಇದ್ದರೂ ನನ್ನ ಕಣ್ಣಿಗೆ ನನ್ನ ಗಂಡ ಯಾವ ಸೂಪರ್ ಸ್ಟಾರಿಗಿಂತ ಕಮ್ಮಿ ಇಲ್ಲ ಎಂಬ ಭಾವನೆ ಹೆಣ್ಣಿಗೆ ಬಂದು , ಬೇರೆ ಹೆಣ್ಣುಗಳು ಐಶ್ವರ್ಯ ರೈ ಅಂತೆ ಇದ್ದರೂ ನನ್ನ ಹೆಂಡತಿ ಯಾವ ಮಿಸ್ ಯೂನಿವರ್ಸಿಗಿಂತ ಏನು ಕಮ್ಮಿ ಎಂಬ ಭಾವ ಪತಿಗೆ ಮೂಡಿ, ಪರಸ್ಪರರಲ್ಲಿ ಗೌರವ ಹಾಗೂ ಇವನು ನನ್ನವನು, ಇವಳು ನನ್ನವಳು ಎಂಬ ಹೆಮ್ಮೆ ಇದ್ದೊಡೆ ಇದನ್ನೆ ಪ್ರೀತಿ ಎನ್ನುವರೆ?

ಎರಡು ಯುವ ಜೀವಗಳು ಹೊಳೆಯ ದಡದಲ್ಲಿ ಕೈಗೆ ಕೈ ಬೆಸೆದು ಚಂದಿರನ ನೋಡುತ್ತಾ ಪ್ರಪಂಚವನ್ನೆ ಮರೆತು ನಾಳೆಯ ಹೊಂಗನಸನ್ನು ಕಾಣುವುದಿದೆಯಲ್ಲ ಅದು ಪ್ರೀತಿಯೆ?

ಅರವತ್ತು ದಾಟಿದ ದಂಪತಿಗಳು ಒಂದು ದಿನವೂ ತಪ್ಪದೆ ಜೊತೆಯಾಗಿ ನಸುನಗುತ್ತಾ ಮಾತಾಡಿಕೊಂಡು ಒಬ್ಬರ ಊರುಗೋಲು ಇನ್ನೊಬ್ಬರಾಗಿ ಪಾರ್ಕ್ ಗೆ ವಾಕಿಂಗ್ ಬರುವುದಿದೆಯಲ್ಲ ಅದೂ ಪ್ರೀತಿಯೆ?

ಪರಸ್ಪರರು ಖಾಯಿಲೆ ಬಿದ್ದಾಗ ತನ್ನ ಜೀವವೇ ನೊಂದಿತೇನೊ ಎಂಬಂತೆ ಚಡಪಡಿಸುವುದಿದೆಯಲ್ಲ ಇದಲ್ಲವೆ ಪ್ರೀತಿ?

ಮದುವೆಯ ದಿನದಂದು ಮೇಣದ ಬತ್ತಿಯ ಬೆಳಕಲ್ಲಿ, ಪತಿ ಜತನದಿಂದ, ಆಸೆಯಿಂದ ತನಗಾಗಿ ಆರಿಸಿ ತಂದು ಉಡುಗೊರೆಯಾಗಿ ನೀಡಿದ ಸೀರೆ ಉಟ್ಟು ಪತ್ನಿ ತನ್ನ ಕೈಯಾರೆ, ಮನಸಾರೆ ತಯಾರಿಸಿ ವಾತ್ಸಲ್ಯಪೂರಿತವಾಗಿ ಬಡಿಸಿದ ಖಾದ್ಯವನ್ನು ಪತಿ ಪತ್ನಿ ಇಬ್ಬರೂ ಕುಳಿತು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಸವಿಯುವುದಿದೆಯಲ್ಲ ಪ್ರೀತಿಯ ಯಾವ ಮುಖವಿದು?

ಜೀವನದ ಪ್ರತಿ ನಿಮಿಷದಲಿ, ಪ್ರತಿ ಹೆಜ್ಜೆಗೆ ಪ್ರೀತಿಯ ಅನುಭವ, ಅನುಭೂತಿ ಪಡೆಯುವ ನಮಗೆ ಪ್ರೀತಿಯೆ ಇಲ್ಲದಿದ್ದೊಡೆ ಎಂತು ಎಂಬುದು ಊಹಿಸಿಕೊಳ್ಳಲೂ ಆಗದ ವಿಷ.
ಪ್ರೀತಿಯಿಲ್ಲದ ಬದುಕು, ನೀರಿಲ್ಲದ ನದಿಯಂತೆ, ಚಂದಿರನಿಲ್ಲದ ಬಾನಿನಂತೆ, ಹಸಿರಿಲ್ಲದ ಭೂಮಿಯಂತೆ ಜೀವಂತ ಶವ…….

ಇದರರ್ಥ ನನಗೆ ಬರೀ ಪ್ರೀತಿಯೊಂದೆ ಬದುಕು ಎಂದೇನಲ್ಲ, ಉಳಿದ ಅವಶ್ಯಕ ಸವಲತ್ತು, ಸಂದರ್ಭ, ವಾತಾವರಣದೊಂದಿಗೆ ಪ್ರೀತಿಯಿದ್ದೊಡೆ
ಶರೀರದಲ್ಲಿ ಪ್ರಾಣ ಸಂಚಾರವಾದಂತೆ, ಬಂಜರು ಭೂಮಿಯಲ್ಲಿ ಮಳೆ ಸುರಿದು ಹಸಿರು ಮೊಳೆತಂತೆ……ಇದು ನನ್ನ ಭಾವನೆ. ನಿಮ್ಮದು?

Published in: on ಜೂನ್ 4, 2010 at 3:38 AM  Comments (11)