ಇಂದು ಅವಳಿಲ್ಲ


ಜೀವನದಲ್ಲಿ ಯಾವುದೂ ಗ್ಯಾರಂಟಿ ಇಲ್ಲ, ಇವತ್ತು ಇರೋರು ನಾಳೆ ಇರ್ತಾರೆ ಅನ್ನೋ ನಂಬಿಕೆ ಇಲ್ಲ, ಏನಪ್ಪಾ ಇದು ? ವಿರಾಗಿ ಥರಾ ಮಾತಾಡ್ತಾ ಇದಾಳೆ ಅಂತ ಅಂದುಕೊಳ್ಳಬೇಡಿ, ನಾನು ಹೀಗೆ ಅನ್ನೋದಕ್ಕೆ ಕಾರಣ ಇದೆ. ಮೊನ್ನೆ ಮೊನ್ನೆ ದೀಪಾವಳಿಯಲ್ಲಿ ಅವಳು ಎಷ್ಟು ಚೈತನ್ಯ ತುಂಬಿಕೊಂಡು ನಗು ನಗ್ತಾ ಇದ್ದಳು ಅನ್ನುತ್ತೀರಾ, ಯಾವುದೇ ರೋಗವಿಲ್ಲದೇ ಆರೋಗ್ಯವಾಗಿ ಇದ್ದಳು. ಸರಿಯಾಗಿ ಆಹಾರ ತೆಗೆದುಕೊಳ್ಳುತ್ತಾ ಇದ್ದಳು. ನೋಡುವುದಕ್ಕೂ ಬಹಳ ಸುಂದರವಾಗಿ ಕಾಣುತ್ತಿದ್ದಳು. ಅವಳ ಸೌಂದರ್ಯ ನೋಡಿ ಪಕ್ಕದಲ್ಲಿ ನಿಂತು ಫೋಟೋ ಬೇರೆ ತೆಗೆದುಕೂಂಡಿದ್ವಿ. ಆದರೆ ಇಷ್ಟು ಬೇಗ ಅವಳು ನಮ್ಮಿಂದ ದೂರ ಹೊರಟು ಹೋಗ್ತಾಳೆ ಅಂದುಕೊಂಡಿರಲಿಲ್ಲ. ಈ ಪ್ರಕೃತಿ ವಿಕೋಪಕ್ಕೆ ಅವಳು ಇಂದು ಬಲಿಯಾಗಿದ್ದಾಳೆ. ಗಿಡ ಮರಗಳು ಕಡಿಮೆಯಾಗಿ, ವಾಹನಗಳು ಹೆಚ್ಚಾಗಿ ವಾತಾವರಣದಲ್ಲಿ ಉಂಟಾದ ಅತಿಯಾದ ಉಷ್ಣತೆ, ಬಿಸಿಲಿಗೆ ಇಂದು ಅವಳು ಬಲಿಯಾಗಿದ್ದಾಳೆ, ತಂಪಾದ ನೀರೆರೆದರು ಕೂಡ ಅವಳನ್ನು ಉಳಿಸಿಕೊಳ್ಳಲಾಗಲಿಲ್ಲ. ಅವಳು ಅಂದ್ರೆ ಯಾರು ಅಂತ ಪರಿಚಯನೇ ಮಾಡಿಕೊಡಲಿಲ್ಲ ನೋಡಿ. ಅವಳು ನಾನು ದಿನಾಲೂ ನೋಡಿ ಸಂತೋಷ ಪಡುವ ನಮ್ಮ ಮನೆಯ ಮುಂದಿನ ಹಸಿರಿನಿಂದ ನಳನಳಿಸುತ್ತಿದ್ದ ಬಳ್ಳಿ. ಇಂದು ಬರೀ ಅವಳ ಅಸ್ತಿಪಂಜರ ಇದೆ. ಸತ್ತಿರುವ ಅವಳನ್ನು ಕಿತ್ತೆಸೆಯುವ ತಯಾರಿ ನಡೆಯುತ್ತಿದೆ. ಇದನ್ನೆಲ್ಲ ನೋಡಿ ನನ್ನ ಮನಸ್ಸಿನಲ್ಲಿ ಏನೋ ಒಂದು ಕಳವಳ. ಮುಂದೊಂದು ದಿನ ಗಿಡಮರಗಳನ್ನಿ ಇಲ್ಲವಾಗಿಸಿದ ತಪ್ಪಿಗೆ ಪ್ರಕೃತಿಯ ಕೋಪಕ್ಕೆ ನಾವೇ ಬಲಿಯಾಗಬೇಕೇನೋ ಎನ್ನುವ ಚಿಂತೆ….

Published in: on ಏಪ್ರಿಲ್ 30, 2010 at 2:23 AM  Comments (4)