ಇಷ್ಟ ಕಷ್ಟಗಳ ನಡುವಿನ ನನ್ನ ಜೀವನ

dscn10951ಅಡಿಗೆ ಮಾಡುವುದು ಇಷ್ಟ
ಪಾತ್ರೆ ತೊಳೆಯುವುದು ಕಷ್ಟ
ದೊಡ್ಡ ಮನೆ ಇಷ್ಟ
ಕ್ಲೀನ್ ಮಾಡುವುದು ಕಷ್ಟ
ಐಸ್ ಕ್ರಿಮ್ ಚಾಕ್ಲೇಟ್ ಇಷ್ಟ
ದಪ್ಪ ಆದರೆ ಕಷ್ಟ
ಶಾಪಿಂಗ್ ರೋಮಿಂಗ್ ಇಷ್ಟ
ಜೇಬು ಖಾಲಿಯಾದರೆ ಕಷ್ಟ
ಇಷ್ಟದಲ್ಲೊಂದು ಕಷ್ಟ
ಕಷ್ಟವಾದರೂ ಇಷ್ಟ
ಇದೇ ಜೀವನ ಅಲ್ಲವೇ

Published in: on ಏಪ್ರಿಲ್ 3, 2009 at 7:28 AM  Comments (8)  

ಮರೆಯಲಾಗದ ಘಟನೆ….

ಕಳ್ಳತನ, ಮೋಸ, ವಂಚನೆ ಇವೆಲ್ಲ ಜಗತ್ತಿನ ಯಾವ ಮೂಲೆಗೆ ಹೋದ್ರೂ ಇದೆ ಕಣ್ರೀ. ಮುಂದುವರಿದ ರಾಷ್ಟ್ರಗಳು, ಹಿಂದುಳಿದ ರಾಷ್ಟ್ರಗಳು ಅನ್ನುವ ಮಾತೇ ಇಲ್ಲ. ಇವುಗಳ ಸಂಖ್ಯೆ ಹೆಚ್ಚು ಕಮ್ಮಿ ಇರಬಹುದು ಅಷ್ಟೇ. ಒಂದೊಂದು ಕಡೆ ಹೆಚ್ಚು, ಒಂದೊಂದು ಕಡೆ ಕಮ್ಮಿ. ಬಡತನ, ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಸಿಗದಿರುವುದು…ಹೀಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ದೊಡ್ಡ ಪಟ್ಟಿಯೆ ಬೆಳೆಯುತ್ತದೆ.

ಈ ವಿಷಯ ಏಕೆ ಬಂತು ಅಂದ್ರೆ, ಸಿಂಗಾಪುರದಲ್ಲಿ ಮೋಸ ವಂಚನೆಗಳು ಬಹಳ ಕಮ್ಮಿ. ಟ್ಯಾಕ್ಸಿಯಲ್ಲಿ ಮೀಟರ್ ಮೋಸ, ಮನೆ ಹುಡುಕುವಾಗ ಮೋಸ, ಕಳ್ಳತನ, ಮನೆ ದರೋಡೆ ಇವೆಲ್ಲ ತುಂಬಾ ಅಂದ್ರೆ ತುಂಬಾನೆ ಕಮ್ಮಿ ಅಂತ ಎಲ್ಲರೂ ಹೇಳ್ತಾರೆ ಮತ್ತು ನನ್ನ ಗಮನಕ್ಕೂ ಬಂದಿದೆ. ಆದರೆ ಅಲ್ಲಿ ಇಲ್ಲಿ ಅಪರೂಪಕ್ಕೆ ನಡೆಯುವ ಒಂದು ಮೋಸಕ್ಕೆ ನಾವು ಬಲಿಯಾಗಿದ್ದೀವಿ ಅನ್ನುವುದು ಸತ್ಯ. ಅದನ್ನೇ ನಾನು ಇಲ್ಲಿ ಹೇಳುವುದಕ್ಕೆ ಹೊರಟಿರುವುದು.

ನಾನು ಇಲ್ಲಿ ಬರುವ ಹೊಸದರಲ್ಲಿ ನನ್ನವರು ಒಂದು ಮನೆಯನ್ನು ನೋಡಿ ಅವನು ತಾನೇ ಓನರ್ ಅನ್ನುವ ಕಾಗದ ಪಾತ್ರಗಳನ್ನು ತೋರಿಸಿದ ನಂತರ (ಆ ಮನೆಯಲ್ಲಿ ಆತನ ಜೊತೆ ಆತನ ಕುಟುಂಬವೂ ಇರುವುದನ್ನು ನೋಡಿಕೊಂಡು) ಡೆಪಾಸಿಟ್ ಹಣ ಅಡ್ವಾನ್ಸ್ ಆಗಿ ಕೊಟ್ಟು, ಅವನು ಕೊಟ್ಟ ಕಾಗದ ಪತ್ರದಲ್ಲಿ ಅಗ್ರೀಮೆಂಟ್ ಮಾಡಿಕೊಂಡು ಬಂದರು. ಅವನು ಕೀ ಕೊಡ್ತೀನಿ ನೀವು ಇಂಥ ದಿನ ಶಿಫ್ಟ್ ಆಗಬಹುದು ಅಂದು ಹೇಳಿದ ದಿನ ಆತನಿಗೆ ಕಾಲ್ ಮಾಡಿದ್ರೆ, ಮೊಬೈಲ್ ಸ್ವಿಚ್ ಆಫ್. ಅವನು ಎಲ್ಲೋ ಹೊರಗೆ ಹೋಗಿರಬಹುದು ನಾಳೆ ಹೋಗೋಣ ಅಂದುಕೊಂಡು ಸುಮ್ಮನಾದರು. ಮರುದಿನವೂ ಇದೆ ಹಾಡು. ಆಗ ಚಿಂತೆ ಪ್ರಾರಂಭವಾಯಿತು. (ಯಾರದಾದರೂ ಮನೆಗೆ ಹೋಗುವಾಗ ಅವರು ಆ ಸಮಯದಲ್ಲಿ ಇರುತ್ತಾರೋ ಇಲ್ಲವೋ ಎಂದು ವಿಚಾರಿಸಿಕೊಂಡು ಹೋಗುವುದಕ್ಕಾಗಿ ಕಾಲ್ ಮಾಡಿಕೊಂಡು ಹೋಗುವುದು) ಅದರ ಮಾರನೆಯ ದಿನ ಶನಿವಾರ ಏನಾದರೂ ಆಗಲಿ ಅಂದುಕೊಂಡು ಅವರ ಮನೆಗೆ ಹೋದರೆ ಅಲ್ಲಿ ಮನೆಗೆ ಬೀಗ ಹಾಕಿತ್ತು ಮತ್ತು ಅಲ್ಲಿ ಒಬ್ಬ ಮನುಷ್ಯ ಯಾರಿಗೋ ಕಾಯುತ್ತಿರುವವನ ಹಾಗೆ ನಿಂತಿದ್ದ. ಇವರು ಹೋಗಿ ಆ ಮನುಷ್ಯನನ್ನು ನೀನು ಈ ಮನೆಯವರ ಪರಿಚಯಸ್ತನೇ ಎಂದು ವಿಚಾರಿಸಿದಾಗ, ಅವನು ಹೇಳಿದ ಮಾತು ಕೇಳಿ ನನ್ನವರಿಗೆ ಶಾಕ್ ಹೊಡೆದಂತಾಗಿತ್ತು.

ವಿಷಯವೇನೆಂದರೆ ಓನರ್ ಅನ್ನಿಸಿದ ಮನುಷ್ಯ, ಆ ಇನ್ನೊಬ್ಬ ಕಾಯುತ್ತಿರುವ ಮನುಷ್ಯನಿಗೂ ಮನೆ ಕೊಡುತ್ತೇನೆ ಅಂತ ಹೇಳಿ ಹಣ ತೆಗೆದುಕೊಂಡಿದ್ದ. ( ಓನರ್ ಎಂದು ಹೇಳಿದ ಮನುಷ್ಯ ಚೀನೀ ಅಥವಾ ಮಲಾಯ್, ಇನ್ನೊಬ್ಬ ಮೋಸಹೋದ ಮನುಷ್ಯ ಶ್ರೀಲಂಕನ್ ) ಇದರಲ್ಲಿ ಮೋಸವಿದೆ ಅಂದುಕೊಂಡು ಇಬ್ಬರು ಸೇರಿಕೊಂಡು ಪೋಲಿಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟು, ಅವನು ಕೊಟ್ಟ ಅಗ್ರೀಮೆಂಟ್ ಡೀಟೇಲ್ಸ್ ಎಲ್ಲ ಕೊಟ್ಟು ಬಂದರು. ಆಗ ತಿಳಿದ ವಿಷಯವೆಂದರೆ ಆ ಮನುಷ್ಯ ಮನೆಯ ಓನರ್ ಅಲ್ಲ. ಆತ ತೋರಿಸಿದ, ಕೊಟ್ಟ, ಕಾಗದ ಪತ್ರಗಳೆಲ್ಲ ನಕಲಿ. ಅವನು ಮೋಸ ಮಾಡಲು ಪ್ಲಾನ್ ಮಾಡಿದ್ದ, ನಾವು ಆತನ ಮೋಸಕ್ಕೆ ಬಲಿಯಾಗಿದ್ದೆವು. ಆ ಸಂದರ್ಭದಲ್ಲಿ ನಾವು ಪಟ್ಟ ಪಾಡು………….ಮುಂಚೆ ಇರುವ ಜಾಗ ಖಾಲಿ ಮಾಡಬೇಕು, ಬೇರೊಂದು ಮನೆ ಬೇಗ ಹುಡುಕಬೇಕು, ಕಷ್ಟ ಪಟ್ಟು ದುಡಿದ ಹಣವನ್ನು ಕಳೆದುಕೊಂಡ ನೋವು, ಬೇರೊಂದು ಮನೆಗೆ ಹಣ ಒದಗಿಸಬೇಕು. ಎಲ್ಲ ಕಷ್ಟಗಳು ಒಂದೇ ಸರಿ ಬಂದು ತಲೆಯ ಮೇಲೆ ಕುಳಿತಿದ್ದವು. ಅಂತೂ ಬೇರೆ ಮನೆ ಸಿಗುವ ವರೆಗೆ ಸ್ವಲ್ಪ ದಿನ ಸ್ನೇಹಿತರೊಬ್ಬರ ಸಹಾಯದಿಂದ ಅವರ ಮನೆಯಲ್ಲಿ ಉಳಿದುಕೊಂಡು, ಅಲ್ಲಿಂದ ಈ ಮನೆಗೆ ಬಂದು ನಿಟ್ಟುಸಿರು ಬಿಟ್ಟೆವು.

8-10 ತಿಂಗಳುಗಳ ವರೆಗೂ ಆ ಮೋಸಗಾರನ ಸುಳಿವೇ ಇಲ್ಲ. ಪೋಲಿಸ್ ಸ್ಟೇಷನ್ ಗೆ ಕಾಲ್ ಮಾಡಿದರೆ, ಸಿಗಲಿಲ್ಲ ಅನ್ನುವ ಉತ್ತರ. 2 ತಿಂಗಳ ಮುಂಚೆ ಧಿಡೀರ್ ನೆ ಒಂದು ದಿನ ಪೋಲಿಸ್ ಸ್ಟೇಷನ್ ನಿಂದ ಕಾಲ್ ಬಂತು. ಆ ಮೋಸಗಾರ ಸಿಕ್ಕಿದ್ದಾನೆ. ಆತನ ಮೇಲೆ ಕೇಸ್ ಹಾಕಿದ್ದೇವೆ. ನಿಮ್ಮ ಹಾಗೆ ಇನ್ನೂ ಕೆಲವು ಜನಕ್ಕೆ ಆತ ಮೋಸ ಮಾಡಿದ್ದಾನೆ ಅಂತ. ಆಗ ಸ್ವಲ್ಪ ಸಮಾಧಾನ, ಕಳೆದುಕೊಂಡ ಹಣ ಸಿಗುವುದೆಂಬ ಆಸೆ ಚಿಗುರಿತು.

ನಂತರ 1-2 ಸರಿ ಕಾಲ್ ಮಾಡಿ ಕೇಳಿದಾಗ ಕೇಸ್ ನಡೆಯುತ್ತಿದೆ ಎಂಬ ಉತ್ತರ. ಈಗ ಒಂದು 8-10 ದಿನಗಳ ಮುಂಚೆ ಆತನ ಮೇಲೆ ಹಾಕಿದ ಕೇಸ್ ಮುಗಿಯಿತು, ಆತನನ್ನು ಜೈಲ್ ಗೆ ಹಾಕಿದ್ದಾರೆ, ಯಾರಿಗೂ ಕೊಡಲು ಆತನ ಬಳಿ ಹಣ ಇಲ್ಲ ಎನ್ನುವ ವಿಷಯ ತಿಳಿಯಿತು. ಇನ್ನೊಬ್ಬ ಮೋಸ ಹೋದ ಮನುಷ್ಯ (ಶ್ರೀಲಂಕನ್) ಸ್ಟೇಷನ್ ಗೆ ಹೋಗಿ ಆತನನ್ನು ಜೈಲ್ ಗೆ ಹಾಕಿರುವುದನ್ನು ಕನ್‌ಫರ್ಮ್ ಮಾಡಿಕೊಂಡು ಬಂದ.

ನಮ್ಮ ಹಣವಂತೂ ನಮಗೆ ತಿರುಗಿ ಬರಲಿಲ್ಲ, ಬರುವುದು ಇಲ್ಲ ಏಕೆಂದರೆ ಮೋಸಗಾರನ ಬಳಿ ಹಣ ಇಲ್ಲ. ಇನ್ನೂ ಎಷ್ಟೋ ಜನರಿಗೆ ಆತನಿಂದ ಆಗಬಹುದಾದ ಮೋಸವನ್ನು ತಪ್ಪಿಸಿದ ಪುಣ್ಯ ಮತ್ತು ಮೋಸಗಾರನಿಗೆ ಶಿಕ್ಷೆ ಕೊಡಿಸಿದ ಸಮಾಧಾನವಷ್ಟೇ ನಮ್ಮ ಪಾಲಿಗೆ.

ಆತನನ್ನು ಹಿಡಿದು ಬರೇ 2 ತಿಂಗಳಲ್ಲಿ ಕೋರ್ಟ್ ಕೇಸ್ ಮುಗಿಸಿ ಆತನನ್ನು ಜೈಲ್ ಗೆ ಕಳಿಸಿದ್ದು. ಒಮ್ಮೆಯೂ ಈ ನಡುವೆ ನಮ್ಮನ್ನು ಪೋಲೀಸ್ ಸ್ಟೇಷನ್ ಗೆ ಬಾ, ಅಥವಾ ಕೋರ್ಟ್ ಗೆ ಬಾ ಅಂತ ಕರೆಯದೇ ಇದ್ದಿದ್ದು, ಇವೆಲ್ಲ ನನಗೆ ಇಲ್ಲಿನ ಕಾನೂನಿನ ಪರಿಚಯ ಮಾಡಿ ಕೊಟ್ಟಿತ್ತು. ನಮ್ಮ ಉೂರಿನಲ್ಲಿ ಒಂದು ಸಣ್ಣ ಕಳ್ಳತನದ ಕೇಸ್ ವರ್ಷಗಟ್ಟಲೇ ನಡೆಸುವುದು, 50 ಸರಿ ಕಂಪ್ಲೇಂಟ್ ಕೊಟ್ಟವನನ್ನು ಅಲೆಸುವುದು, ನೋಡಿದ ನನಗೆ ಈ ಸಿಸ್ಟಂ ಇಷ್ಟವಾಗಿತ್ತು. ಇದೇ ಕಾರಣದಿಂದಲೋ ಏನೋ ಇಲ್ಲಿ ಕಳ್ಳತನ, ಮೋಸ ವಂಚನೆಗಳು ಕಡಿಮೆ. ತಪ್ಪಿತಸ್ತರಿಗೆ ಶಿಕ್ಷೆ ಅಗಲೆ ಬೇಕಲ್ಲವೇ? ಏನೇ ಅಂದುಕೊಂಡರೂ ನಮ್ಮ ಹಣಕ್ಕಂತು ಎಳ್ಳು ನೀರು ಬಿಟ್ಟಿದ್ದು ನಿಜ. ಇದು ಒಂದು ಮರೆಯಲಾಗದ ಘಟನೆ…….

ಪವರ್ ಕಟ್

ಪವರ್ ಕಟ್

ಮೊನ್ನೆ ನಮ್ಮ ಲೆಟರ್ ಬಾಕ್ಸ್ ಚೆಕ್ ಮಾಡಿದಾಗ ಎಲೆಕ್ಟ್ರಿಸಿಟೀ ಬೋರ್ಡ್ ನಿಂದ ಒಂದು ಲೆಟರ್ ಇತ್ತು. ಸಧ್ಯ ಅಸ್ಟೆ ಎಲೆಕ್ಟ್ರಿಕ್ ಬಿಲ್ ತುಂಬಿ ಆಗಿದೆ ಮತ್ತೇನು ಲೆಟರ್ ಅಂದುಕೊಂಡು ಓಪನ್ ಮಾಡಿ ನೋಡಿದೆ. ಅದರಲೊಳಗಿದ್ದ ವಿಷಯದ ಸಾರಾಂಶ ಇದು.

“ಬರುವ ಗುರುವಾರ ತರೀಕು 3 ರಂದು ಎಲೆಕ್ಟ್ರಿಕ್ ಮೆಂಟನೆನ್ಸೆ ಮತ್ತು ರೆಪೀರಿ ಕೆಲಸ ನಡೆಯುವುದರ ನಿಮಿತ್ತ ಮಧ್ಯಾಹ್ನ 2 ಗಂಟೆ ಇಂದ 4.30 ರ ವರೆಗೆ ಪವರ್ ಕಟ್ ಇರುತ್ತದೆ. ದಯವಿಟ್ಟು ಸಹಕರಿಸಬೇಕು”

ಕರೆಂಟ್ ತೆಗೆಯುವ 3-4 ದಿನಗಳ ಮುಂಚೆಯೇ ತಿಳಿಸುವ ವ್ಯಸ್ತೆಯನ್ನು ನಾನು ಮೊದಲ ಬಾರಿಗೆ ನೋಡಿದ್ದೆ. ನಾನು ಇಲ್ಲಿ ಬಂದಮೇಲೆ ಮೊದಲನೆಯ ಸರಿ ಹೀಗೆ ಕರೆಂಟ್ ತೆಗೆಯುತ್ತಿರುವುದು.

ಮನೆಗೆ ಬಂದು ಕುಳಿತೊಡನೆಯೇ ನನ್ನ ಯೋಚನೆ ನಮ್ಮ ಉೂರಿನ ಕಡೆಗೆ ಓಡತೊಡಗಿತು. ನಮ್ಮ ಉೂರು ಕರ್ನಾಟಕದ (ಉತ್ತರಕನ್ನಡ ಜಿಲ್ಲೆಯ) ಒಂದು ಹಳ್ಳಿ. ಅಲ್ಲಿ ದಿನದಲ್ಲಿ 6 ರಿಂದ 8 ತಾಸು ಪವರ್ ಕಟ್. ಒಮ್ಮೊಮ್ಮೆ ಇದು 10 ರಿಂದ 12 ಗಂಟೆಗಳ ಕಾಲವು ಮುಂದುವರೆಯುತ್ತದೆ. ಮಳೆಗಾಲದಲ್ಲಂತೂ ಕೇಳುವುದೇ ಬೇಡ 24-48 ಗಂಟೆಗಳ ಕಾಲ ಪವರ್ ಖೋತಾ. ಯಾವಾಗ ಬರುತ್ತೋ, ಯಾವಾಗ ಹೋಗುತ್ತೋ ದೇವರೇ ಬಲ್ಲ. ಮಧ್ಯದಲ್ಲಿ ಒಮ್ಮೊಮ್ಮೆ ಕರೆಂಟ್ ಇದ್ದರೂ ಇಲ್ಲದ ಹಾಗೆ ಲೋ ವೋಲ್ಟೇಜ್. ಮಿಕ್ಸರ್ ಓಡೋದಿಲ್ಲ, ಲೈಟ್ ಕಾಣೋದಿಲ್ಲ. ಬಹಳ ಜನಲೈಟ್ ಸೋಲಾರ್ ವ್ಯವಸ್ತೆ ಮಾಡಿಕೊಂಡಿದ್ದಾರೆ. ಮಿಕ್ಸರ್, ಪಂಪ್ ಸೆಟ್ಎಲ್ಲ ಓಡುವುದಕ್ಕೆ ಇನ್ನೂ ಹೆಚ್ಚಿನ ಪವರ್ ಅವಶ್ಯ. ಅದರ ಹಣವೂ ಅಸ್ಟೆ ಹೆಚ್ಚು. ಆದರೆ ಎಲ್ಲರಿಂದಲೂ ಇದು ಸಾಧ್ಯವೇ?

ಕರೆಂಟ್ ಇರುವುದಿಲ್ಲ, ಮಿಕ್ಸರ್ ಹೇಗೆ ಹಾಕುವುದು, ಅಡಿಗೆಗೆ ಹೇಗೆ ಬೀಸುವುದು,ನೀರಿಗೆ ಪಂಪ್ ಸೆಟ್ ಹೇಗೆ ಹಾಕುವುದು? ದಿನಾಲೂ ಇದೆ ಹಾಡು ಅನ್ನುವುದು ಅಮ್ಮನ ಗೋಳು. ಜೋರಾಗಿ ಗುಡುಗಿದರೆ ಸಾಕು ಫೋನ್ ಕಟ್. ಇವೆಲ್ಲ ಎಂದು ಸರಿಹೋಗುತ್ತದೆಯೋ? ಇಲ್ಲಿಯ ಹಾಗೆ ಕರೆಂಟ್ ತೆಗೆಯುವ 3-4 ದಿನಗಳ ಮುಂಚೆಯೇ ತಿಳಿಸಿ ತೆಗೆಯುವ, ಯಾವಾಗಲು ಫೋನ್ ಸರಿಯಾಗಿರುವ ಕಾಲ ಯಾವಾಗ ಬರುವುದೋ ಅಂತ ಒಂದು ಕ್ಷಣ ಯೋಚಿಸಿದೆ.

ಹಾಗೆಯೇ ಮನಸ್ಸು ಮತ್ತು ಕಣ್ಣು ರಸ್ತೆಯ ಮೇಲೆ ಹರಿಯಿತು. ಇಲ್ಲಿ ರಸ್ತೆ ಮಾಡಿ ಬಹಳ ವರ್ಷಗಳ ವರೆಗೆ ಅದು ಕಿತ್ತು ಹೋಗುವುದಿಲ್ಲ. ಕಿತ್ತು ಹೋದಲ್ಲಿ ಅಥವಾ ಹಾಳಾದಲ್ಲಿ ಬಹಳ ಬೇಗನೆ ಅದನ್ನು ರಿಪೇರಿ ಮಾಡಿ ಸುಸ್ಥಿತಿಯಲ್ಲಿಡುತ್ತಾರೆ. ಅದೇ ನಮ್ಮ ಉೂರಿನ ರಸ್ತೆ………ಟಾರ್ ಹಾಕ್ತೀವಿ ಅಂತ ಜಲ್ಲಿ ಕಲ್ಲುಗಳನ್ನು ಹಾಕಿ 5-6 ವರ್ಷಗಳಾಯಿತು, ಇನ್ನೂ ಆ ರಸ್ತೆ ಟಾರ್ ಕಂಡಿಲ್ಲಾ. ಮೊದಲಿನ ಮಣ್ಣು ರಸ್ತೆಯಾದರೂ ಎಸ್ಟೋ ಚೆನ್ನಾಗಿತ್ತು ಆದರೆ ಈ ರಸ್ತೆಯ ಮೇಲೆ ನಡೆಯುವವರ ಅದಕ್ಕೂ ಹೆಚ್ಚಾಗಿ ವೇಹಿಕಲ್ ಓಡಿಸುವವರ ಪರಿಸ್ಥಿತಿ ಯಾರಿಗೂ ಬೇಡ. ಯಾರು ಯಾವಾಗ ಬಿದ್ದು ಬಿಡ್ತಾರೋ ಅನ್ನೋ ಭಯ. ಮೊದಲಿನ ಮಣ್ಣು ರಸ್ತೆ ಮಳೆಗಾಲದಲ್ಲಿ ಹಾಳಾದರೆ ಉೂರಿನವರೆಲ್ಲ ಸೇರಿ ಅದನ್ನು ರಿಪೇರಿ ಮಾಡಿ ಒಳ್ಳೆಯ ಸ್ಥಿತಿಯಲ್ಲಿಡುತ್ತಿದ್ದರು, ಈರೀತಿ ಜಲ್ಲಿ ಕಲ್ಲುಗಳು ರಸ್ತೆಯ ಮೇಲೆ ಎದ್ದು ನಿಲ್ಲುತ್ತಿರಲಿಲ್ಲ ಈ ಜಲ್ಲಿ ಕಲ್ಲುಗಳ ರಸ್ತೆ ರಿಪೇರಿ ಮಾಡುವುದು ಹೇಗೆ? ಪ್ರತಿ ವರ್ಷವೂ ಈವರ್ಷ ಟಾರ್ ಹ್ಾಕುತ್ತಾರೇನೋ ಅಂತ ಕಾಯೋದು. ಅದು ಯಾವಾಗ ಹಾಕುತ್ತಾರೋ, ಯಾವಾಗ ಈ ರಸ್ತೆಯಿಂದ ಮುಕ್ತಿಯೋ ಯಾರು ಬಲ್ಲರು!

ಎಸ್ಟು ಬೇಡ ಬೇಡ ಎಂದರು ಮನಸ್ಸ್ಸು ತುಲನೆಯನ್ನು ಆರಂಭಿಸಿ ಬಿಡುತ್ತದೆ. ಇಸ್ತೆಲ್ಲ ನಿಸರ್ಗಿಕ ಸಂಪನ್ಮೂಲಗಳು ಇರುವ ನಮ್ಮ ಹಳ್ಳಿಯಲ್ಲಿ, ನಾಡಿನಲ್ಲಿ, ದೇಶದಲ್ಲಿ ಇದೆ ರೀತಿಯ ವ್ಯವಸ್ತೆಗಳು ಇರಲಿ ಅಂತ ಅಶಿಸುತ್ತದೆ. ಅದರ ಕನಸ್ಸು ಕಾಣುತ್ತದೆ. ಆದರೆ ಅದೆಲ್ಲ ಸಾಧ್ಯವೇ? ಹೌದಾದರೆ ಹೇಗೆ? ಎಂದು? ಯಾವಾಗ?

ಯುಗಾದಿ

ಯುಗಾದಿ

ಸರ್ವರಿಗೂ ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಯುಗ ಯುಗಾದಿ ಕಳೆದರು
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ತಮಗೆಲ್ಲರಿಗೂ ಯುಗಾದಿಯ ಶುಭಾಶಯಗಳೊಂದಿಗೆ ನಮ್ಮ ಮನೆಯ ಯುಗಾದಿ ಹಬ್ಬದ ಒಂದು ಇಣುಕು ನೋಟ.

dscn12902

dscn12941

Published in: on ಏಪ್ರಿಲ್ 2, 2009 at 9:08 AM  Comments (2)  

ಹಬ್ಬ

ಹಬ್ಬ

ಹುಟ್ಟಿ ಇಷ್ಟು ವರ್ಷಗಳ ವರೆಗೂ ಪ್ರತಿ ವರ್ಷ ಎಲ್ಲ ಹಬ್ಬಗಳನ್ನೂ ನಮ್ಮ ದೇಶದಲ್ಲೇ, ಅದರಲ್ಲೂ ಹಳ್ಳಿಯ ಸಂಪ್ರದಾಯದಲ್ಲಿ ಆಚರಿಸೋದನ್ನ ನೋಡಿದ್ದೇನೆ ಮತ್ತು ಆಚರಿಸಿದ್ದೇನೆ. ಅದನ್ನು ಬಿಟ್ಟು ಕೆಲವೊಮ್ಮೆ ಬೆಂಗಳೂರಿನಲ್ಲಿ ಆಚಿರಿಸಿದ್ದುಂಟು. ಆದ್ರೆ ಈ ವರ್ಷದ ದೀಪಾವಳಿ, ಗಣೇಶ ಚತುರ್ಥಿ ಇಂತಹ ಮುಖ್ಯ ಹಬ್ಬಗಳನ್ನ ನಮ್ಮ ಹಬ್ಬಗಳ ವಾತಾವರಣ ಇಲ್ಲದಂತಹ ವಿದೇಶದಲ್ಲಿ ಆಚರಿಸಿದ್ದೇನೆ.

ಮೊದಲಿಂದಲೂ ನನಗೆ ನಮ್ಮ ಹಬ್ಬಗಳ ಆಚರಣೆ, ಪೂಜೆ, ಆ ಸಡಗರದ ವಾತಾವರಣ ಇವೆಲ್ಲ ತುಂಬಾ ಇಷ್ಟ. ಶಹರಗಳಲ್ಲಿ ಕೆಲವರು ( ಸಮಯದ ಅಭಾವ ಇರೋರು ) ಹಬ್ಬದ್ ದಿನ ಮನೆಯಲ್ಲಿ ಏನೂ ಮಾಡದೇ ಸುಮ್ನೇ ದೇವಸ್ಥಾನಕ್ಕೆ ಹೋದಹಾಗೆ ಮಾಡಿ, ಹೊಟೆಲ್ ಗೆ ಹೋಗಿ ಬೇಕಾಗಿದ್ದು ತಿಂದು ಮನೆಗೆ ಹೋದ್ರೆ ಅಲ್ಲಿಗೆ ಹಬ್ಬ ಮುಗೀತು ಅಂತ ಯಾರೋ ಹೇಳೋದು ಕೇಳಿದ್ದೆ. ಈ ತರದ ಹಬ್ಬದ್ ಆಚರಣೆಯ ಬಗ್ಗೆ ನನಗೆ ಒಂಥರ ವಿರೋಧ ಭಾವನೆ. ಒಂದು ಹಬ್ಬ ಕೂಡ ಚೆನ್ನಾಗಿ ಮನೇಲಿ ಆಚರಿಸೋಕಾಗಲ್ವೇ ಅನ್ನೋ ಫೀಲಿಂಗ್.

ಈ ವರ್ಷ ಹಬ್ಬಗಳ ಸಾಲು ಬಂದಾಗ ಹಬ್ಬಕ್ಕೆ ಉುರಿಗೆ ಬರುವುದು ಸಾಧ್ಯವಿಲ್ಲದ ಮಾತು ಅನ್ನುವುದು ಗೊತ್ತಿರುವ ಸತ್ಯವಾಗಿತ್ತು. ನೆಂಟರು, ಬಂಧುಗಳು ಯಾರೂ ಇರದ, ನಮ್ಮ ಉುರಿನ ತರಹ ಹಬ್ಬದ್ ವಾತಾವರಣ ಇಲ್ಲದ ಜಾಗಡಲ್ಲ್ಲಿ ಹೇಗೆ ಹಬ್ಬದ್ ಆಚರಣೆ ಮಾಡೋದು ಅಂತ ಯೋಚನೆ ಶುರು ಆಯ್ತು. ಹೊರಗೆ ಎಲ್ಲೂ ಹಬ್ಬದ್ ವಾತಾವರಣ ಇಲ್ಲ, ಮನೇಲಿ ನಾವಿಬ್ರೇ ಏನು ಮಾಡೋದು, ನಮ್ಮನೆಗೆ ಹಬ್ಬಕ್ಕೆ ಬನ್ನಿ ಅಂತ ಕರೆಯೋರು ಯಾರು ಇಲ್ಲ್ಲ ಕನ್ನಡ ಸಂಘದವರು, ಆವ್ರು ಇವ್ರು ಎಲ್ಲ ಸಂಘಗಳಲ್ಲಿ ಸಾರ್ವತ್ರಿಕ ಹಬ್ಬಗಳ ಆಚರಣೆ ಅಂತ ಒಂದು ದಿನ ಮಾಡ್ತಾರೆ, ಆದ್ರೆ ಅದಕ್ಕೆ ಸನ್‌ಡೇ ಬರ್ಬೇಕು. ಹಾಗಾಗಿ ಹಬ್ಬದ್ ದಿನ ಏನು ಮಾಡೋದು ಅಂತ ಮನೆಯಲ್ಲಿ ವಿಚಾರ ವಿನಿಮಯ ಮಾಡಿಕೊಂಡು ಅಂತೂ ಒಂದು ನಿರ್ಧಾರಕ್ಕೆ ಬಂದಾಯ್ತು.

ಚೌತಿ ಹಬ್ಬದ್ ದಿನ ಕೆಲವು ಆಫೀಸಿಗೆ ರಜೆ ಇಲ್ಲದ ಕಾರಣ ಮಧ್ಯಾಹ್ನ ನಾವೇ ಮನೇಲಿ ಹಬ್ಬ ಮಾಡಿದ್ವಿ. ಹೂವು, ಗರಿಕೆ ಎಲ್ಲ ತಂದು ದೇವರ ಪೂಜೆ ಆಯ್ತು, ಬೆಳಿಗ್ಗೇನೇ ಸ್ನಾನ ಮಾಡಿ ಮೋದಕ, ಕಾರ್ಜಿಕಾಯಿ, ಉಂಡೆ, ಚಕ್ಕುಲಿ, ಎಲ್ಲ ಮಾಡಿ ಅಡುಗೆ ಆಯ್ತು. ರಾತ್ರಿ ಉಟಕ್ಕೆ ಇಬ್ಬರು ಸ್ನೇಹಿತರನ್ನು ಕರೆದು, ಎಲ್ಲ ಸೇರಿ ಉಟ ಮಾಡಿದಾಗ ಒಂಥರ ಹಬ್ಬ ಆಚರಿಸಿದ ತೃಪ್ತಿ.
ದೀಪಾವಳಿ ಬಂದಾಗ ಆಪೀಸಿಗಳಿಗೆ ರಜೆ ಇದ್ದ ಕಾರಣ ಯೋಜನೆಯನ್ನು ಸ್ವಲ್ಪ ಬದಲಾಯಿಸಿ ೮-೧೦ ಜನ ಸ್ನೇಹಿತರನ್ನು ಮಧ್ಯಾಹ್ನ ಮನೆಗೆ ಕರೆದು, ಮನೆಯಲ್ಲಿ ಪೂಜೆ, ಕೆಲವು ಅಡಿಗೆ ಎಲ್ಲ ಮಾಡಿ ( ಉುರಿನ್ ಹಾಗೆ ಎಲ್ಲ ಅಡಿಗೆಯನ್ನು ಅಷ್ಟು ಜನರಿಗೆ ಮನೆಯಲ್ಲಿ ಮಾಡುವುದು ಸಾಧ್ಯವಾಗಲಿಲ್ಲ ಹಾಗಾಗಿ ಕೆಲವು ಮನೆಯಲ್ಲಿ ಮಾಡಿ ಕೆಲವು ಹೊಟೆಲ್ ಖಾದ್ಯಗಳನ್ನು ತಂದು) ಉಟ ಮಾಡಿ ಮುಗಿಸಿದ್ವಿ. ಸಯಾಂಕಾಲ ಒಂದಿಬ್ಬರು ಸ್ನೇಹಿತರ ಜೊತೆ ದೇವಾಸ್ತನಕ್ಕೆ ಹೋಗಿ ಬಂದು, ರಾತ್ರಿ ಪಟಾಕಿ ( ಸುರುಸುರುಬತ್ಟಿ ಮಾತ್ರ)ಸಿಡಿಸಿ,ಮನೆಯಲ್ಲಿ ದೀಪ ಹಚ್ಚಿ, ಉಟ ಮಾಡಿ ಮುಗಿಸಿದಾಗ ಆದ ಆನಂದ, ಸಮಾಧಾನ, ಹೊಟೆಲ್ ಗೆ ಹೋಗಿ ತಿಂದು ಬಂದರೆ ಸಿಗಲಾರದು ಅಂತ ಅನ್ನಿಸಿತು.ಮನೆಗೆ ಬಂದವರೆಲ್ಲ ಹಬ್ಬದ್ ಆಚರಣೆ ತುಂಬಾ ಚೆನ್ನಾಗಿ ಆಯ್ತು, ಎಂಜಾಯ್ ಮಾಡಿದ್ವಿ, ನಮಗೂ ಹಬ್ಬ ಆಚರಿಸಿದ ಹಾಗೆ ಆಯ್ತು ಅಂದಾಗ ಇನ್ನಷ್ಟು ಖುಷಿ.

ನಾವೆಲ್ಲೇ ಇದ್ದರೂ, ಹಬ್ಬದ್ ವಾತಾವರಣ ಇಲ್ಲದೇ ಹೋದರೂ ಆ ಸಡಗರವನ್ನು ನಾವೇ ಸೃಷ್ಟಿಸಬಹುದು, ಹಬ್ಬದ ಆಕರಣೆಯ ಆನಂದವನ್ನು ಪಡೆಯಬಹುದು ಅನ್ನೋ ಸತ್ಯವನ್ನು ನಾವು ಕಂಡುಕೊಂದ್ವಿ. ಜೊತೆಗೆ ಇನ್ನೂ ಮುಂದೆ ಕೆಲವೊಂದು ಹಬ್ಬವನ್ನಾದ್ರೂ ಹೀಗೆ ಆಚರಿಸೋಣ ಅಂತ ಪ್ಲಾನ್ ಕೂಡ ಹಾಕಿಕೊಂಡ್ವಿ. ನಾವೆಲ್ಲೇ ಇದ್ರು ನಮ್ಮ ದೇಶ, ಸಂಸ್ಕೃತಿಯ ಪ್ರತೀಕವಾದಂತಹ ನಮ್ಮ ಹಬ್ಬಗಳನ್ನು ಮರೆಯಲಿಕ್ಕ್ಕಾದೀತೆ? ಅವುಗಳ ಆಚರಣೆಯನ್ನು ಬಿಡಲಿಕ್ಕದೀತೇ? ಆ ಸಾಂಪ್ರದಾಯಿಕ ಹಬ್ಬಗಳ ಆಚರಣೆಯೇ ಒಂದು ಚಂದ ಅಲ್ಲವೇ?

Published in: on ಡಿಸೆಂಬರ್ 6, 2008 at 4:43 ಅಪರಾಹ್ನ  Comments (9)  

ಕಿರು ಪರಿಚಯ

ಕಿರು ಪರಿಚಯ

ಮುಖಾಮುಖಿ ಪರಿಚಯ ಇಲ್ದೇ ಇದ್ರು ಈ ಒಂದು ಬ್ಲಾಗ್ ನ ಪರಿಚಯದ ಸಲುವಾಗಿಯಾದ್ರೂ ನನ್ನ ಬಗ್ಗೆ ಹೇಳಿಕೊಳ್ಳೋದು ಅವಶ್ಯ ಅಂತ ಅನ್ಸುತ್ತೆ.

ನಾನು ಹುಟ್ಟಿ ಬೆಳೆದಿದ್ದು ಶಿರಸಿಯ ಹತ್ತಿರದ ಒಂದು ಹಳ್ಳಿಯಲ್ಲಿ. ಮದುವೆಆಗಿ ಹೋಗಿದ್ದು ಕಾರವಾರಕ್ಕೆ, ಈಗ ಇರುವುದು ಸಿಂಗಾಪುರದಲ್ಲಿ. ಅಡುಗೆ, ಮನೆ ಕೆಲಸ ಇವುಗಳ ಜೊತೆ ಟೈಮ್ ಪಾಸ್ ಮಾಡೋ ಒಬ್ಬ ಹೌಸ್ ವೈಫ್. (ಹೊರಗೆ ಕೆಲ್ಸಾ ಮಾಡಿದ್ದು ಎಲ್ಲ ಮದುವೆಗೆ ಮುಂಚೆ ಈಗ ಏನಿದ್ರೂ ಮನೆ ಕೆಲ್ಸಾನೆ) ದೇಶ ಬಿಟ್ಟು ವಿದೇಶದಲ್ಲಿ ಇರುವ ನನ್ನ ಅನುಭವ, ಅನಿಸಿಕೆ, ಯೋಚನೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕೆಂದುಕೂಂಡಿದ್ದೇನೆ.

Published in: on ಡಿಸೆಂಬರ್ 4, 2008 at 7:57 AM  Comments (15)