ಎಲ್ಲ ಸ್ನೇಹಿತ, ಸ್ನೇಹಿತೆಯರಲ್ಲೂ ನನ್ನದೊಂದು ವಿನಂತಿ. ಇದೇನಪ್ಪ ಮೊನ್ನೆ ಮೊನ್ನೆ ಬ್ಲಾಗ್ ಬರೆಯೋಕೆ ಬಂದವಳು ಆಗಲೇ ಒಂದು ಬೇಡಿಕೆ ತಗೊಂಡು ಬಂದುಬಿಟ್ಟಿದ್ದಾಳೆ ಅಂದುಕೊಳ್ಳಬೇಡಿ. ನನ್ನ ಮನಸ್ಸಿಗೆ ತೋಚಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.
ಬಸ್ ಸ್ಟಾಂಡಿನಲ್ಲಿ, ರೈಲ್ವೇ ಸ್ಟೇಷನ್ನಿನಲ್ಲಿ, ಇಂತಹ ಇನ್ನೂ ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರಿಗೆ, ಹೃದಯ ರೋಗಿಗಳಿಗೆ, ಕ್ಯಾನ್ಸರ್ ಪೀಡಿತರಿಗೆ, ಅನಾಥ ಮಕ್ಕಳಿಗೆ, ವೃಧ್ಧರಿಗೆ, ಇತ್ಯಾದಿ ಇತ್ಯಾದಿ ಸಮಸ್ಯೆಯಲ್ಲಿರುವವರಿಗೆ ಸಹಾಯ ಮಾಡಿ ಅಂತ ಕೆಲವರು ಹಣ ಕೇಳುತ್ತಿರುವುದನ್ನು ನೋಡಿರುತ್ತೀರಿ. ಕೆಲವೊಂದು ಸಂಸ್ಥೆಯವರು ಕೂಡ ಇಂತವರ ಸಹಾಯಕ್ಕಾಗಿ ದೇಣಿಗೆ ನೀಡಿ ಅಂತ ಕೇಳುತ್ತಿರುವುದನ್ನು ಕೂಡ ನೋಡಿರುತ್ತೀರಿ. ಅಥವಾ ಸ್ವತಹ ಅಂಗವಿಕಲರೆ ತಮ್ಮ ಹೊಟ್ಟೆಪಾಡಿಗಾಗಿ ಜನರ ಮುಂದೆ ಕೈ ಚಾಚುತ್ತಿರುವ ದೃಶ್ಯವೂ ಸಹ ನಿಮಗೆ ಹೊಸದಲ್ಲ. ಹೀಗೆ ಕೇಳುತ್ತಿರುವುದನ್ನು ನೋಡಿ ಬಹಳಷ್ಟು ಸಲ ” ಎಲ್ಲಿ ನೋಡಿದ್ರೂ ಹೀಗೆ ಹಣ ಕೇಳ್ತಾ ಇರ್ತಾರೆ, ಆ ಹಣ ತೊಗೊಂದು ಹೋಗಿ ಏನು ಮಾಡ್ತಾರೋ ಏನೋ, ನಾವೇಕೆ ನಮ್ಮ ಹಣವನ್ನು ಇವರಿಗೆ ಕೊಡಬೇಕು ” ಅಂತ ಅಂದುಕೊಳ್ತಾ ಇರ್ತೀವಿ. ದಯವಿಟ್ಟು ಹಾಗೆ ತಿಳ್ಕೊಬೇಡಿ. ಕಾರಣ ಹೇಳ್ತೀನಿ ಕೇಳಿ.
ಎಲ್ಲರೂ ಸುಳ್ಳು ಹೇಳಿಕೊಂಡು ಹಣ ಕೇಳುತ್ತಿರುವುದಿಲ್ಲ, ಆದರೆ ಅವರ ಮಧ್ಯೆ ಕುರಿಯ ಮಂದೆಯ ನಡುವೆ ತೊಳಗಳಂತೆ ಮೋಸಗಾರರು, ಸುಳ್ಳು ಹೇಳಿ ಹಣ ಕೇಳುವವರೂ ಕೂಡ ಖಂಡಿತ ಇದ್ದಾರೆ. ಆದ್ದರಿಂದ ಕೇಳುತ್ತಿರುವವರನ್ನು ಸರಿಯಾಗಿ ಗಮನಿಸಿ. ಅವರು ನಿಜವಾಗಿಯೂ ಕಷ್ಟದಲ್ಲಿರುವವರು ಅಥವಾ ನಿಜವಾಗಿಯೂ ಕಷ್ಟದಲ್ಲಿರುವವರಿಗಾಗೆ ಹಣ ಕೇಳುತ್ತಿರುವವರು ಅಂತ ನಿಮ್ಮ ಮನಸ್ಸು ಹೇಳುತ್ತಿದ್ದರೆ ಅಂತವರಿಗೆ ಸಹಾಯ ಮಾಡಿ. ಏಕೆಂದರೆ ಮೋಸಗಾರರಿಂದಾಗಿ ನಿಜವಾಗಲೂ ಕಷ್ಟದಲ್ಲಿರುವವರಿಗೆ ನೀಡುವ ಸಹಾಯ ನಿಂತುಹೋಗಬಾರದಲ್ಲ. ಹಣ ಕೇಳುತ್ತಿರುವವರನ್ನು ನೋಡಿ, ಅವರು ನಿಜ ಹೇಳುತ್ತಿದ್ದಾರೆ ಅನ್ನಿಸಿದರೆ ನಿಮ್ಮಲ್ಲಿರುವ ನೂರೋ ಇನೂರೋ ರೂಪಾಯಿಗಳಲ್ಲಿ ಒಂದು ರೂಪಾಯಿ ಕೊಡಿ ಸಾಕು. ಐಸ್ ಕ್ರೀಂ ತಿನ್ನುವುದಕ್ಕೋ, ಹೊಟೆಲ್ / ಸಿನಿಮಾ ಹೋಗುವುದಕ್ಕೋ, ದುಬಾರಿ ಬಟ್ಟೆ ಕೊಳ್ಳುವುದಕ್ಕೋ ಅಂತ ನೀವು ಖರ್ಚು ಮಾಡುವ ಹಣದಲ್ಲಿ ಒಂದೊಂದು ರೂಪಾಯಿ ಮಿಗಿಸಿ ಕೊಡಿ. ಅದರಲ್ಲಿ ಇನ್ಯಾರದೋ ಕಷ್ಟ ನೀಗುವುದಕ್ಕೆ ಸಹಾಯ ಮಾಡಿದಂತಾಗುತ್ತದೆ. ಹಸಿವಿನಲ್ಲಿರುವವರಿಗೆ ಆಹಾರ ನೀಡಿದಂತಾಗುತ್ತದೆ.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂಸ್ಥೆಗಳಿಗೆ ಹೋಗಿ ದೇಣಿಗೆ ನೀಡುವುದು ಅಥವಾ ಕಷ್ಟದಲ್ಲಿರುವ ಒಬ್ಬೊಬ್ಬ ವ್ಯಕ್ತಿಗೆ ಸಂಪೂರ್ಣ ಸಹಾಯ ನೀಡಲು ಸಾಧ್ಯವಾಗದಿದ್ದರು, ಇದೊಂದು ಸಹಾಯ ಹಸ್ತ ನೀಡಲು ನಮ್ಮಿಂದ ಖಂಡಿತ ಸಾಧ್ಯ ಎನ್ನುವುದು ನನ್ನ ಭಾವನೆ. ಬಾಡುತ್ತಿರುವ ಗಿಡಕ್ಕೆ ನೀರೆರೆಯುವ, ಚಿಗುರಲು ಚಿಕ್ಕ ಸಹಾಯ ಮಾಡುವ ಈ ಕೆಲಸದಲ್ಲಿ ನೀವೆಲ್ಲರೂ ನನ್ನ ಜೊತೆಗಿದ್ದೀರಿ ಎಂದುಕೊಂಡಿದ್ದೇನೆ. ಏನಂತೀರಾ? ತಮ್ಮ ಅಭಿಪ್ರಾಯ ತಿಳಿಸಿ. ಸರಿ ಎಂದಾದರೆ ಇಂದಿನಿಂದಲೇ ಹೆಜ್ಜೆ ಇಡೋಣ ತಡ ಏಕೆ?