ಅಜ್ಜಿಯೊಂದಿಗಿನ ಆ ಮುಸ್ಸಂಜೆ….

ದಿನಾಲೂ ಮುಸ್ಸಂಜೆ ಹೊತ್ತಲ್ಲಿ ಕುಳಿತು ಸತ್ಯವಾನ ಸಾವಿತ್ರಿ ಹಾಡು, ಸುಧಾಮ ಚರಿತ್ರೆ ಹಾಗೂ ಕೆಲವು ಶ್ಲೋಕಗಳನ್ನು ತಪ್ಪದೇ ಹೇಳುತ್ತಿದ್ದ ಅಜ್ಜಿ ಇಂದು ಯಾಕೊ ಬರೇ ಶ್ಲೋಕ, ಸುಧಾಮ ಚರಿತ್ರೆ ಹೇಳಿ ನನಗೆ ಪ್ರಿಯವಾದ ಸತ್ಯವಾನ ಸಾವಿತ್ರಿ ಹಾಡು ಹೇಳದೇ ಸುಮ್ಮನೆ ಕುಳಿತಿದ್ದಳು. ಆದರೆ ದಿನಾ ಆಕೆಯ ಪಕ್ಕ ಕುಳಿತು ಕೇಳುತ್ತಿದ್ದ ನಾನು ಸುಮ್ಮನೆ ಕೂರಲಾರದೆ

“ಅಜ್ಜಿ ಸಾವಿತ್ರಿ ಹಾಡು ಯಾಕೆ ಹೇಳಿಲ್ಲ ಹೇಳಜ್ಜಿ” ………ಅಂತ ರಾಗ ತೆಗೆದೆ.

“ಇಲ್ಲಾ ಮಗಳೆ ಇವತ್ತು ಸಾಕು ನಾಳೆ ಹೇಳ್ತೀನಿ” ಅಂದ ಅಜ್ಜಿಯ ಮುಖ ಯಾಕೋ ಮಂಕಾಗಿರುವಂತೆ ಭಾಸವಾಯಿತು. ಅಜ್ಜಿ ಏನೋ ಚಿಂತೆಯಲ್ಲಿದ್ದು ಅದನ್ನು ನನ್ನಿಂದ ಮರೆಮಾಚುತ್ತಿದ್ದಂತೆ ಮನಸ್ಸಿಗೆ ಅನ್ನಿಸಿತು.

ಅಜ್ಜಿ ಏನಾಯ್ತಜ್ಜಿ? ಹುಶಾರಿಲ್ವಾ? ಯಾರದ್ರು ಏನಾದ್ರೂ ಅಂದ್ರಾ? ಯಾಕಜ್ಜಿ ಒಂಥರಾ ಇದ್ದೀಯಾ? ನನ್ನ ಅನುಮಾನ ಪರಿಹರಿಸಿಕೊಳ್ಳಲು ನಾಲ್ಕಾರು ಪ್ರಶ್ನೆಗಳನ್ನು ಒಟ್ಟಿಗೆ ಅಜ್ಜಿಯತ್ತ ಎಸೆದೆ.

“ಇಲ್ಲ ಪುಟ್ಟಾ ನಾನು ಹುಶಾರಾಗೆ ಇದೀನಿ, ಯಾರೂ ಏನೂ ಅಂದಿಲ್ಲ” …..ಮತ್ತೆ ಅಜ್ಜಿಯಿಂದ ತಪ್ಪಿಸಿಕೊಳ್ಳೊ ಉತ್ತರ.

ಏನೊ ಆಗಿದ್ದಂತೂ ನಿಜ, ಅಜ್ಜಿ ದಿನದ ಹಾಗಿಲ್ಲ ಅಂತ ಯೋಚನೆ ಮಾಡ್ತಾ ಇರುವಾಗ ಇಂದು ಅಜ್ಜನ ತಿಥಿ ಅಂತ ನೆನಪಿಗೆ ಬಂತು.
ಅಜ್ಜನ ಜ್ನಾಪಕ ಬಂತಾ ಅಜ್ಜಿ? ನೀ ಅಜ್ಜನ್ನ ಮಿಸ್ ಮಾಡ್ಕೋತಿದೀಯಾ? ಅದಕ್ಕೆ ಬೇಜಾರಾ? ನನ್ನ ಪ್ರಶ್ನೆ……

ಒಂದು ನಿಮಿಷ ಮೌನದಲ್ಲಿದ್ದ ಅಜ್ಜಿ ನಿಧಾನವಾಗಿ “ಹೂಂ ಜ್ನಾಪಕ ಬಂತು ಪುಟ್ಟಾ” ಅಂತ ಉತ್ತರಿಸಿದಳು

ಅಜ್ಜ ನಿನ್ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ರಾ ಅಜ್ಜಿ?
ಈ ಪ್ರಶ್ನೆ ಅಜ್ಜಿಯನ್ನು ತುಂಬಾ ಇಕ್ಕಟ್ಟಿಗೆ ಸಿಲುಕಿಸಿದಂತೆ ತೋರಿತು, ಅಜ್ಜಿ ಏನು ಉತ್ತರಿಸಲೆಂದು ಗೊಂದಲದಲ್ಲಿದ್ದಂತೆ ಅನ್ನಿಸಿತು….

“ಈ ನಿಜವಾದ ಪ್ರೀತಿ ಪ್ರೇಮ ಯಾವುದೂ ನನಗೆ ತಿಳೀಲೇ ಇಲ್ಲ ಮಗಳೆ.”….

ಯಾಕಜ್ಜಿ? ಅಜ್ಜ ನಿನ್ನನ್ನ ಪ್ರೀತಿಸ್ತಾ ಇರ್ಲಿಲ್ವಾ? ನೀನು ಅಜ್ಜನ್ನ ಪ್ರೀತಿಸ್ತಾ ಇರ್ಲಿಲ್ವಾ?

“ಆ ಕಾಲ ಇಂದಿನಂತಲ್ಲ ಪುಟ್ಟಾ, ಪ್ರೀತಿ ಪ್ರೇಮ ಮಾಡಿ ನಮ್ಮ ಮದುವೆ ಆಗಿರ್ಲಿಲ್ಲ. ಮದುವೆ ಆಗುವಾಗ ನನಗಿನ್ನೂ ಹನ್ನೊಂದು ವರ್ಷ. ನಿಮ್ಮಜ್ಜನಿಗೆ ನಲವತ್ತೆರಡು. ನಮ್ಮ ಮನೆಯಲ್ಲಿ ತುಂಬಾ ಬಡತನ, ಸಾಲದ್ದಕ್ಕ ಮೂರು ಜನ ಹೆಣ್ಣು ಮಕ್ಕಳು ಬೇರೆ. ಹಾಗೂ ಹೀಗೂ ಸಂಸಾರ ಸಾಗಿಸುತ್ತಿದ್ದ ನಮ್ಮಪ್ಪನಿಗೆ ಮದುವೆ ಮಾಡಿ ಮುಗಿಸುವುದೆ ಕಷ್ಟವಾಗಿತ್ತು.
ನಿಮ್ಮಜ್ಜನಿಗೋ ಆಗಲೇ ಎರಡು ಸಾರಿ ಮದುವೆಯಾಗಿತ್ತು. ಹೆರಿಗೆಯ ಸಮಯದಲ್ಲಿ ಮೊದಲನೆಯ ಪತ್ನಿ ತೀರಿಕೊಂಡರೆ, ಯಾವುದೋ ರೋಗದಿಂದ ಮದುವೆಯಾದ ಕೆಲ ವರ್ಷಗಳಲ್ಲಿ ಎರಡನೆಯ ಪತ್ನಿ ತೀರಿಕೊಂಡಿದ್ದಳು. ಮನೆಯನ್ನು ನೋಡಿಕೊಳ್ಳೊದಕ್ಕೆ ಹೆಣ್ಣೊಂದು ಬೇಕಿತ್ತು, ನಿಮ್ಮ ತಾತನ ತಾಯಿ ತನಗೆ ತಿಳಿದ ಕೆಲವು ಕಡೆ ಹುಡುಗಿ ಹುಡುಕಲು ತಿಳಿಸಿದ್ದರು. ನನ್ನ ತಂದೆಯ ಕಷ್ಟ ತಿಳಿದ ಒಬ್ಬರು ಮನೆಯ ಹಿರಿ ಮಗಳಾದ ನನಗೆ ಈ ಸಂಬಂಧದ ಪ್ರಸ್ತಾಪ ನೀಡಿದ್ದರು. ಮದುವೆಯ ಖರ್ಚೆಲ್ಲ ಗಂಡಿನ ಕಡೆಯದು, ಊಟಕ್ಕೇನೂ ಕೊರತೆಯಿಲ್ಲ, ತಕ್ಕ ಮಟ್ಟಿಗೆ ಅನುಕೂಲ ಉಳ್ಳವರು ಎಂಬ ಕಾರಣಕ್ಕೆ ನಮ್ಮ ತಂದೆ ತಾಯಿನೂ ಈ ಮದುವೆಗೆ ಒಪ್ಪಿದ್ದರು”

ನೀನೂ ಒಪ್ಕೊಂಬಿಟ್ಯಾ ಅಜ್ಜಿ? ಬೇಡಾ ಅನ್ನಲಿಲ್ವಾ? ಅಜ್ಜಿ ಮಾತು ಮುಗಿಸುತ್ತಲೇ ನನ್ನ ಪ್ರಶ್ನೆ ಕಾದಿತ್ತು..

“ನನ್ನನ್ನು ಯಾರು ಕೇಳೊರು ಮಗಳೆ, ನಾನು ಅತ್ತೆ, ಕರೆದೆ, ಹಠ ಹಿಡಿದೆ ಯಾವುದಕ್ಕೂ ಯಾರೂ ಜಗ್ಗಲಿಲ್ಲ.ಈ ಮದುವೆಗೆ ಒಪ್ಕೋ ಸುಮ್ನೆ ಮುಂದೆ ಎಲ್ಲಾ ಒಳ್ಳೇದಾಗತ್ತೆ ಅಂತ ಅಮ್ಮನ ತಿಳುವಳಿಕೆಯ ಮಾತು. ಮನೆಯ ಪರಿಸ್ಥಿತಿಯ ಅರಿವಿದ್ದ ನಾನು ಅಳುತ್ತಲೇ ನಿಮ್ಮಜ್ಜನ ಮೂರನೇ ಮಡದಿಯಾಗಿ ಹಸೆಮಣೆ ಏರಬೇಕಾಯ್ತು”
“ಛೆ ಪಾಪ ..ನೀನು ಅಷ್ಟು ವಯಸ್ಸಾದ ಅಜ್ಜನ ಮೂರನೆ ಹೆಂಡತಿ ಆಗೇ ಬಿಟ್ಯಲ್ಲಾ ಅಜ್ಜಿ”…

“ಹೂಂ ಪುಟ್ಟಾ, ಈ ಮನೆಗೆ ಬಂದೆ, ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ಹೋದೆ, ಪ್ರೀತಿ ಪ್ರೇಮ ಅರಿಯುವ ಮುನ್ನವೇ ೬ ಮಕ್ಕಳೂ ಆದವು. ಈ ರೀತಿ ೧೫ ವರ್ಷ ನಿಮ್ಮಜ್ಜನೊಂದಿಗೆ ಕಳೆದಿದ್ದೆ. ಅಷ್ಟರಲ್ಲಿ ಯಾವುದೋ ಖಾಯಿಲೆ ಅವರನ್ನು ತಿನ್ನೋಕೆ ಶುರು ಮಾಡ್ತು. ಯಾವ ಔಷಧ ಮದ್ದಿಗೂ ಗುಣವಾಗದೇ ವರ್ಷದಲ್ಲೇ ನಿಮ್ಮಜ್ಜ ತೀರಿಕೊಂಡರು”

ಅಯ್ಯೊ ಅಷ್ಟು ಬೇಗಾನಾ? ನೀನಿನ್ನೂ ಚಿಕ್ಕೋಳಲ್ವಾ ಅಜ್ಜಿ? ಜೊತೆಗೆ ಅಷ್ಟೊಂದು ಮಕ್ಕಳು ಬೇರೆ…ಏನು ಮಾಡಿದೆ ಅಜ್ಜಿ?

“ಮಾಡೋದೇನು ಪುಟ್ಟಾ, ಕರ್ತವ್ಯ ಇತ್ತಲ್ಲ..ಕಷ್ಟ ಪಟ್ಟು ಮಕ್ಕಳನ್ನು ಬೆಳೆಸಿದೆ, ಗದ್ದೆ ತೋಟದಲ್ಲಿ ದುಡಿದೆ, ಬಂದ ಫಸಲಿನಲ್ಲಿ ಊಟ ಖರ್ಚು ನಿಭಾಯಿಸಿದೆ. ಹೇಗೋ ಆ ದಿನಗಳು ಕಳೆದವು. ಎಲ್ಲಾ ಮಕ್ಕಳು ಬೆಳೆದವು, ವಿದ್ಯೆ ಕಲಿತು, ತಮ್ಮ ಕಾಲಮೇಲೆ ನಿಂತು, ಮದುವೆಯಾಗಿ ಈಗ ನೀವೆಲ್ಲ ಹುಟ್ಟಿದ್ದೀರಾ”….

ಹಾಗಾದ್ರೆ ನಿಂಗೆ ಅಜ್ಜನಿಗೆ ಪ್ರೀತಿ ಮಾಡೋಕೆ ಆಗ್ಲೇ ಇಲ್ವಾ ಅಜ್ಜಿ?

“ಎಲ್ಲಿ ಪ್ರೀತಿ ಮಗಳೆ? ಒಲ್ಲದ ಗಂಡಿನೊಂದಿಗೆ ಮದುವೆ, ಎಲ್ಲ ಅರಿಯುವ ಮುನ್ನವೆ ಮಕ್ಕಳು, ಸಂಸಾರ. ತಿಳುವಳಿಕೆ ಬರುವ ವಯಸ್ಸಿನಲ್ಲಿ ಪ್ರೀತಿಸೊ ಮನುಷ್ಯನೇ ಇಲ್ಲವಲ್ಲ…ಆಗ ಕರ್ತವ್ಯವನ್ನೇ ಪ್ರೀತಿಸಿದೆ ಅಷ್ಟೆ”……

ಆಗ ನಾನು ಯೋಚನೆಗೆ ಬಿದ್ದೆ. ಅಜ್ಜಿಗೆ ಈಗ ಮಕ್ಕಳು, ಮೊಮ್ಮಕ್ಕಳು, ಸೊಸೆಯರು, ಅಳಿಯಂದಿರು ಅಂತಾ ಪ್ರೀತಿಸೊ ದೊಡ್ಡ ಪರಿವಾರವೇ ಇದೆ, ಆದ್ರೆ ಪತಿ, ಪತ್ನಿಯ ನಡುವಿನ ಆ ಪ್ರೀತಿ ಯಾವತ್ತೂ ಸಿಕ್ಕೇ ಇಲ್ವಾ? ಅವಳು ಕೂಡಾ ಅದನ್ನು ಕೊಡೋಕೆ ಅವಕಾಶವೇ ಆಗಿಲ್ವಾ? ಆಗಿನ ಅವಳ ಜೀವನವನ್ನು, ಈಗಿನ ನಮ್ಮ ಜೀವನದ ಜೊತೆ ತುಲನೆ ಮಾಡಿ ಅಜ್ಜಿಯ ಮುಖವನ್ನೇ ಒಮ್ಮೆ ದಿಟ್ಟಿಸಿ ನೋಡಿದೆ.
ಪ್ರೀತಿ – ಪ್ರೇಮ ಹೆಪ್ಪುಗಟ್ಟಿ ನಿಂತಂತೆ ತೋರಿತು ಮುಸ್ಸಂಜೆಯ ಮಬ್ಬು ಬೆಳಕಲ್ಲಿ…………………..

( ನನ್ನಜ್ಜಿಯ ನೈಜ ಕಥೆಯಲ್ಲ )

Published in: on ಜೂನ್ 17, 2010 at 2:31 AM  Comments (7)  

The URI to TrackBack this entry is: https://ranjanahegde.wordpress.com/2010/06/17/%e0%b2%85%e0%b2%9c%e0%b3%8d%e0%b2%9c%e0%b2%bf%e0%b2%af%e0%b3%8a%e0%b2%82%e0%b2%a6%e0%b2%bf%e0%b2%97%e0%b2%bf%e0%b2%a8-%e0%b2%86-%e0%b2%ae%e0%b3%81%e0%b2%b8%e0%b3%8d%e0%b2%b8%e0%b2%82%e0%b2%9c%e0%b3%86/trackback/

RSS feed for comments on this post.

7 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. ಸುಂದರ ನಿರೂಪಣೆ..
  ಸತ್ಯ ಘಟನೆಯಂತೆ ಸಾಗುವ ಈ ಕಥೆ ಬಹಳ ಇಷ್ಟವಾಯಿತು..

  ಇಂಥಹ ತಾಯಿಂದಿರು..
  ಅಜ್ಜಿಯಿಂದಿರು…
  ನಮ್ಮ ಸಮಾಜದಲ್ಲಿ ಬಹಳ ಸಿಗುತ್ತಾರೆ..

  ಏನನ್ನೂ ಓದಿರದ ಅವರು..
  ಬದುಕಲ್ಲಿ ಸಂತೋಷ, ಉತ್ಸಾಹ ಕಂಡುಕೊಳ್ಳುವ ಪರಿ ನಮಗೆಲ್ಲ ಆದರ್ಶ..

  ನಮಗೆ ಸಣ್ಣದೊಂದು ಸಮಸ್ಯೆ ಬಂದರೆ …
  ಆಕಾಶವೇ ಕಳಚಿಬಿದ್ದಂತೆ ಇರುತ್ತೇವೆ..
  ನಮ್ಮ ಅಕ್ಕಪಕ್ಕದವರ ಸಂತೋಷವನ್ನೂ ಹಾಳು ಮಾಡುತ್ತೇವೆ..

  ಅಭಿನಂದನೆಗಳು..
  ಚಂದದ ಕಥೆಗೆ…

 2. ನಿಜಕ್ಕೂ ನಮ್ಮ ಪೂರ್ವಜರು ಎದುರಿಸಿದ ಚಿತ್ರವಿಚಿತ್ರ ಸಂದರ್ಭಗಳನ್ನ ಇಂದಿನ ಹಾಗು ಮುಂದಿನ ಪೀಳಿಗೆಯವರು ತಮ್ಮ ತಮ್ಮ ಜೀವನದಲ್ಲಿ ಎಂದೂ ಕಾಣಲಾರರು.. ನಾನೂ ಸಹ ಕೆಲವು “ವಾಸ್ತವಿಕ” ಕಥೆಗಳನ್ನ ನನ್ನ ಅಮ್ಮನಿಂದ ಕೇಳಿದ್ದೇನೆ ಹಾಗು ವಿಷಾದಿಸಿದ್ದೇನೆ.. ಕೆಲ ಸಂದರ್ಭಗಳನ್ನ ಊಹಿಸಿಕೊಂಡರೇ ಮೈಯೆಲ್ಲ ಜುಮ್ ಎನ್ನುತ್ತೆ.. ನಾವೆಲ್ಲ ಈ ಮಟ್ಟಕ್ಕೆ ಬಂದು ಸ್ವತಂತ್ರವಾಗಿ ನಿತ್ತು ನೆಲೆಯನ್ನು ಕಾಣಲು ಕಾರಣವೇ ನಮ್ಮ ಪೂರ್ವಜರ ನಿಸ್ವಾರ್ಥ ಪರಿಶ್ರಮ. ಇದಕ್ಕೆ ನಾವು ತಲೆ ಬಾಗಲೇಬೇಕು.

  ಎಲ್ಲಿ ಹೊಯಿತೋ ಅಜ್ಜಿಯ ಕಥೆಗಳು, ಪದ್ಯಗಳು, ಆಕೆಯ ಪೆಟ್ಟಿಗೆಯಿಂದ ಸಿಗುವ ಪುರಾತನ ಕಾಣಿಕೆಗಳು, ಮತ್ತೆ ಮಜ್ಜಿಗೆಗೂಡಿನಿಂದ ಹೊರಬರುವ ತಿಂಡಿ ತಿನಿಸುಗಳು….!!! ಎಲ್ಲದೂ ನೆನಪಿನ ಪುಟಗಳದಲ್ಲಿ ಐಕ್ಯಗೊಳ್ಳುವ ಕ್ಷಣಗಳೇ ಇನ್ನು ಮುಂದೆಲ್ಲ…

 3. Hey Ranju raashi cholo maadi baradde …nanage kannalli neeru batta iddu …:(

 4. ಹಳೆಯ ಕಾಲದಲ್ಲಿ ಎಷ್ಟೋ ಜನ ಹೆಣ್ಣುಮಕ್ಕಳು ಇಂತಹ ಕಷ್ಟ ಅನುಭವಿಸಿದ್ದಾರೆ.

  ಆ ವಿಚಾರದಲ್ಲಿ ಈಗಿನ ಕಾಲದಲ್ಲಿ ಹುಟ್ಟಿದ ನಾವೆಲ್ಲಾ ಬಹಳ ಅದೃಷ್ಟಶಾಲಿಗಳು.

  ಸುಂದರವಾದ ಬರಹ ರಂಜನಕ್ಕ.

 5. kathe super…kathe anta anste ille….real story iddanag iddu…

 6. hi….enu blog baride sumar dina atu…interesting irtu,,,,please stop madadi..

 7. Hi Ranjana,
  Nice story..
  Simple but very real !!
  Ninna baravanigeya shaili tumba chennagiddu .. Keep going.. 🙂

  Regards


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: