ಒಬ್ಬೊಬ್ಬರೂ ಒಂದೊಂದು ರೀತಿಯಾಗಿ ಪ್ರೀತಿಯ ಬಗ್ಗೆ ವ್ಯಾಖ್ಯಾನ ನೀಡುತ್ತಾರೆ. ಆದರೆ ವಾಸ್ತವದಲ್ಲಿ ನಿಜವಾದ ಪ್ರೀತಿ ಎಂದರೇನು? ಅದು ಹೇಗಿರುತ್ತದೆ? ಎಲ್ಲಿ ಹುಟ್ಟುತ್ತದೆ? ಮನಸಲ್ಲಾ? ಹೃದಯದಲ್ಲಾ?, ಬುದ್ಧಿಯಲ್ಲಾ? ತಿಳಿದಿಲ್ಲ. ಯಾವಾಗ ಬರುತ್ತದೆ, ಯಾರ ಮೇಲೆ ಬರುತ್ತದೆ ಅರಿತಿಲ್ಲ. ಆದರೆ ಇಷ್ಟು ಮಾತ್ರ ಅರಿತಿದ್ದೇನೆ..ಪ್ರೀತಿ ಇಲ್ಲದೆ ಬದುಕಿಲ್ಲ….
ಅಮ್ಮನ ಮಮತೆ, ಮಡಿಲು, ಕೈತುತ್ತು
ಅಪ್ಪನ ವಾತ್ಸಲ್ಯ, ಬೆರಳಿನ ಆಧಾರ, ಹೊತ್ತ ಹೆಗಲು
ಸಹೋದರ ಸಹೋದರಿಯರು ತೋರಿದ ಕಾಳಜಿ, ಆಟವಾಡಿದ, ಕಿತ್ತಾಡಿದ ಕ್ಷಣಗಳು
ಸ್ನೇಹಿತ ಸ್ನೇಹಿತೆಯರ ಸ್ನೇಹ, ಕಷ್ಟಕಾಲದ ಜೊತೆ
ಪ್ರಿಯತಮ ಪ್ರೇಯಸಿಯರ ನಡುವಿನ ರೋಮಾಂಚನ, ಸಂತೋಷದ ಘಳಿಗೆಗಳು ಇವೆಲ್ಲವೂ ಪ್ರೀತಿಯೇ.
ಒಂದು ವಸ್ತುವಿನ ಬಗ್ಗೆ ಇರುವ ಮಮಕಾರ, ಅದು ದೊರಕಿದಾಗ ಸಿಗುವ ಆನಂದ, ಸಾಕಿದ ಒಂದು ಪ್ರಾಣಿಯ ಜೊತೆಗಿನ ಬಂಧ, ಅದು ತೋರುವ ವಿಶ್ವಾಸವೂ ಕೂಡ ನನ್ನ ದೃಷ್ಟಿಯಲ್ಲಿ ಪ್ರೀತಿಯೇ. ಆದರೆ ಇವೆಲ್ಲ ಪ್ರೀತಿಯ ಬೇರೆ ಬೇರೆ ಮುಖಗಳು, ಎಲ್ಲವೂ ಬೇರೆ ಬೇರೆ, ಅದರ ಅನುಭವವೂ ಬೇರೆ, ಆನಂದವೂ ಬೇರೆ ಅಲ್ಲವೆ?
ಆದರೆ ಪತಿ ಪತ್ನಿಯರ ನಡುವಿನ ಪ್ರೀತಿಯನ್ನು ವಿಶೇಷ ವಾಗಿ ವರ್ಣಿಸುತ್ತಾರೆ… ಎರಡು ಜೀವಗಳು ಬೇರೆ ಬೇರೆ ಪರಿಸರದಲ್ಲಿ ಹುಟ್ಟಿ, ಬೆಳೆದು ತದನಂತರ ಒಂದು ಬಂಧನದಲ್ಲಿ ಬೆಸೆದು ಜೀವನಪೂರ್ತಿ ಒಂದಾಗಿ ಕಳೆಯುತ್ತಾರಲ್ಲಾ ಅದಕ್ಕಾಗಿಯೇ ಇರಬೇಕು ಈ ಸಂಬಂಧಕ್ಕೆ ಪ್ರೀತಿಯಲ್ಲಿ ವಿಶೇಷ ಸ್ಥಾನ.
ಇಬ್ಬರ ಸ್ವಭಾವವೂ ಬೇರೆ, ಅಲೋಚನೆಗಳಲ್ಲೂ ಅಂತರ, ದಿನನಿತ್ಯದ ಅಭ್ಯಾಸಗಳಂತೂ ಸಂಪೂರ್ಣ ವಿರುಧ್ದ. ಆದರೂ ಒಬ್ಬರ ಸ್ವಭಾವ, ಅಭ್ಯಾಸ, ಆಲೋಚನೆಗಳನ್ನು ಸ್ವೀಕರಿಸಿ ಅದರೊಂದಿಗೆ ತಮ್ಮ ಅಸೆ, ಇಂಗಿತ, ಅಭಿಪ್ರಾಯಗಳನ್ನು ಜೋಡಿಸಿ, ಹೊಸದೆ ಆದ ಒಂದು ಲೋಕವನ್ನು ಕಟ್ಟಿಕೊಳ್ಳುವ ಕೆಲಸ ಅಷ್ಟು ಸುಲಭದ ಮಾತಲ್ಲ. ಆದರೆ ಈ ಪ್ರೀತಿ ಎಂಬ ಬೆಸುಗೆ ಇದೆಯಲ್ಲ ಅದು ಎಲ್ಲವನ್ನೂ ಸುಲಭ, ಸರಳ ಸಹಜವಾಗಿ ಪರಿವರ್ತಿಸಿಬಿಡುತ್ತದೆ.
ಎಷ್ಟೋ ಸಾರಿ ಭಿನ್ನ ಅಭಿಪ್ರಾಯಗಳಿಂದಾಗಿರಬಹುದು ಅಥವಾ ಇನ್ಯಾವುದೇ ಕಾರಣದಿಂದ ಜಗಳ, ಮಾತಿನ ಚಕಮಕಿ, ಒಬ್ಬರ ಮೇಲೆ ಇನ್ನೊಬ್ಬರ ಕೋಪ, ಅಸಹನೆ ಇವೆಲ್ಲ ಎಲ್ಲರ ಮನೆಯ ದೋಸೆಯೂ ತೂತು ಎಂಬಷ್ಟೆ ಸತ್ಯವಾದರೂ ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿನಂತೆ ಇವು ಕ್ಷಣಕಾಲ ಮಾತ್ರ. ಮತ್ತೆ ಇಬ್ಬರೂ ಒಂದೆ ಜೀವ. ಹುಟ್ಟಿದಾಗಿನಿಂದಲೂ ಒಟ್ಟಿಗೆ ಇದ್ದವರಂತೆ, ಮುಂದಿನ ಜನುಮಗಳಲ್ಲೂ ಒಟ್ಟಿಗೇ ಇರುವವರಂತೆ ಒಬ್ಬರಿಗೊಬ್ಬರು ಎಲ್ಲವನ್ನೂ ಹಂಚಿಕೊಂಡು, ಪರಸ್ಪರರ ಅವಶ್ಯಕತೆಗಳನ್ನು ಪೂರೈಸುತ್ತ, ವಿಶೇಷ ಮಮಕಾರ ವ್ಯಕ್ತಪಡಿಸುತ್ತ, ಒಂದೇ ಸೂರಿನಡಿ ಬದುಕುವುದಿದೆಯಲ್ಲ ಅದೇ ಏನು ಪ್ರೀತಿ ಅಂದರೆ?
ನಾನು ಎನ್ನುವುದು ಹೋಗಿ ನಾವು ಎಂದಾಗಿ, ನನಗಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ನಮಗಾಗಿ, ನಮ್ಮ ಭವಿಷ್ಯಕ್ಕಾಗಿ ಎಂಬ ಭಾವನೆ ಮೂಡಿ, ಬೇರೆ ಗಂಡಸರು ಸಲ್ಮಾನ್ ಖಾನ್ ನಂತೆ ಇದ್ದರೂ ನನ್ನ ಕಣ್ಣಿಗೆ ನನ್ನ ಗಂಡ ಯಾವ ಸೂಪರ್ ಸ್ಟಾರಿಗಿಂತ ಕಮ್ಮಿ ಇಲ್ಲ ಎಂಬ ಭಾವನೆ ಹೆಣ್ಣಿಗೆ ಬಂದು , ಬೇರೆ ಹೆಣ್ಣುಗಳು ಐಶ್ವರ್ಯ ರೈ ಅಂತೆ ಇದ್ದರೂ ನನ್ನ ಹೆಂಡತಿ ಯಾವ ಮಿಸ್ ಯೂನಿವರ್ಸಿಗಿಂತ ಏನು ಕಮ್ಮಿ ಎಂಬ ಭಾವ ಪತಿಗೆ ಮೂಡಿ, ಪರಸ್ಪರರಲ್ಲಿ ಗೌರವ ಹಾಗೂ ಇವನು ನನ್ನವನು, ಇವಳು ನನ್ನವಳು ಎಂಬ ಹೆಮ್ಮೆ ಇದ್ದೊಡೆ ಇದನ್ನೆ ಪ್ರೀತಿ ಎನ್ನುವರೆ?
ಎರಡು ಯುವ ಜೀವಗಳು ಹೊಳೆಯ ದಡದಲ್ಲಿ ಕೈಗೆ ಕೈ ಬೆಸೆದು ಚಂದಿರನ ನೋಡುತ್ತಾ ಪ್ರಪಂಚವನ್ನೆ ಮರೆತು ನಾಳೆಯ ಹೊಂಗನಸನ್ನು ಕಾಣುವುದಿದೆಯಲ್ಲ ಅದು ಪ್ರೀತಿಯೆ?
ಅರವತ್ತು ದಾಟಿದ ದಂಪತಿಗಳು ಒಂದು ದಿನವೂ ತಪ್ಪದೆ ಜೊತೆಯಾಗಿ ನಸುನಗುತ್ತಾ ಮಾತಾಡಿಕೊಂಡು ಒಬ್ಬರ ಊರುಗೋಲು ಇನ್ನೊಬ್ಬರಾಗಿ ಪಾರ್ಕ್ ಗೆ ವಾಕಿಂಗ್ ಬರುವುದಿದೆಯಲ್ಲ ಅದೂ ಪ್ರೀತಿಯೆ?
ಪರಸ್ಪರರು ಖಾಯಿಲೆ ಬಿದ್ದಾಗ ತನ್ನ ಜೀವವೇ ನೊಂದಿತೇನೊ ಎಂಬಂತೆ ಚಡಪಡಿಸುವುದಿದೆಯಲ್ಲ ಇದಲ್ಲವೆ ಪ್ರೀತಿ?
ಮದುವೆಯ ದಿನದಂದು ಮೇಣದ ಬತ್ತಿಯ ಬೆಳಕಲ್ಲಿ, ಪತಿ ಜತನದಿಂದ, ಆಸೆಯಿಂದ ತನಗಾಗಿ ಆರಿಸಿ ತಂದು ಉಡುಗೊರೆಯಾಗಿ ನೀಡಿದ ಸೀರೆ ಉಟ್ಟು ಪತ್ನಿ ತನ್ನ ಕೈಯಾರೆ, ಮನಸಾರೆ ತಯಾರಿಸಿ ವಾತ್ಸಲ್ಯಪೂರಿತವಾಗಿ ಬಡಿಸಿದ ಖಾದ್ಯವನ್ನು ಪತಿ ಪತ್ನಿ ಇಬ್ಬರೂ ಕುಳಿತು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಸವಿಯುವುದಿದೆಯಲ್ಲ ಪ್ರೀತಿಯ ಯಾವ ಮುಖವಿದು?
ಜೀವನದ ಪ್ರತಿ ನಿಮಿಷದಲಿ, ಪ್ರತಿ ಹೆಜ್ಜೆಗೆ ಪ್ರೀತಿಯ ಅನುಭವ, ಅನುಭೂತಿ ಪಡೆಯುವ ನಮಗೆ ಪ್ರೀತಿಯೆ ಇಲ್ಲದಿದ್ದೊಡೆ ಎಂತು ಎಂಬುದು ಊಹಿಸಿಕೊಳ್ಳಲೂ ಆಗದ ವಿಷ.
ಪ್ರೀತಿಯಿಲ್ಲದ ಬದುಕು, ನೀರಿಲ್ಲದ ನದಿಯಂತೆ, ಚಂದಿರನಿಲ್ಲದ ಬಾನಿನಂತೆ, ಹಸಿರಿಲ್ಲದ ಭೂಮಿಯಂತೆ ಜೀವಂತ ಶವ…….
ಇದರರ್ಥ ನನಗೆ ಬರೀ ಪ್ರೀತಿಯೊಂದೆ ಬದುಕು ಎಂದೇನಲ್ಲ, ಉಳಿದ ಅವಶ್ಯಕ ಸವಲತ್ತು, ಸಂದರ್ಭ, ವಾತಾವರಣದೊಂದಿಗೆ ಪ್ರೀತಿಯಿದ್ದೊಡೆ
ಶರೀರದಲ್ಲಿ ಪ್ರಾಣ ಸಂಚಾರವಾದಂತೆ, ಬಂಜರು ಭೂಮಿಯಲ್ಲಿ ಮಳೆ ಸುರಿದು ಹಸಿರು ಮೊಳೆತಂತೆ……ಇದು ನನ್ನ ಭಾವನೆ. ನಿಮ್ಮದು?
ಪ್ರೀತಿಯಿಂದಾಗಿ.. ಈ ಜಗತ್ತು ಸುಂದರವಾಗಿದೆ…
ಸುಂದರವಾಗಿರುತ್ತದೆ..
ನಮ್ಮ ಪ್ರಪಂಚ ಕೂಡ..
ನಮ್ಮ ಪ್ರಪಂಚ ಪುಟ್ಟದಾಗಿದ್ದರೂ…
ಜೀವನ ಪೂರ್ತಿ…
ಒಂದು ಹಿಡಿ ಪ್ರೀತಿಗಾಗಿ ನಾವು ಹಂಬಲಿಸುತ್ತೇವೆ…
ಬಯಸುತ್ತೇವೆ..
ಕಾತರಿಸುತ್ತೇವೆ…
ಆದರೆ ….
ಪ್ರೀತಿಯನ್ನು ಕೊಡುವ ವಿಚಾರದಲ್ಲಿ…
ಅಲ್ಲಿ …
ವಿಚಾರ ಮಾಡುತ್ತೇವೆ..
ಹಿಂದೆ ಮುಂದೆ ನೋಡುತ್ತೇವೆ…
ಪ್ರೀತಿಯನ್ನು ….
ಬಯಸುವಾಗ ಹೃದಯ…
ಕೊಡುವಾಗ ವಿಚಾರ…
ಇದು ವಿಪರ್ಯಾಸ .. ಅಲ್ಲವೆ ?
ಒಂದು ಚಂದದ ಲೇಖನ ..
ಬಹಳ ಇಷ್ಟವಾಯಿತು…
ನಿಮ್ಮ ನಿಲುವೇ ನಮ್ಮದೂ ಚೆನ್ನಾಗಿದೆ…. ಲೇಖನ
ಧನ್ಯವಾದಗಳು ಮನಸೇ,
ರನ್-ವಿನ್ …..ಬಹಳ ಅರ್ಥವತ್ತಾದ ಮತ್ತು ಸಹಜ ವಿವರಣೆಗಳ ಹಂದರ ಹೆಣೆದು ಲೇಖನದ ರೂಪ ಕೊಟ್ಟಿರುವಿರಿ…ಅಭಿನಂದನೆಗಳು…
ಎಲ್ಲೋ ಬೆಳೆದ ಜೀವಗಳು ಒಂದೆಡೆ ಒಟ್ಟಿಗೆ ಜೀವ-ಜೀವ ಬೆರೆತು ಹೋಗುವುದಲ್ಲದೇ ಇನ್ನೊಮ್ದು ಜೀವದ ಹುಟ್ಟಿಗೂ ಕಾರಣವಾಗುವ ನಡುವಿನ ಆ ಕಾಲ—ಸಂಬಂಧಗಳಿಗೆ ಒಮ್ದು ಆಯಾಮವನ್ನು ನೀಡುವಕಾಲ….ಹಳ್ಲ ದಿನ್ನೆ..ಕಲ್ಲು ಮಣ್ಣುಗಳ ಬಯಲು ಕಂದರಗಳಲ್ಲಿ…ಅಡಿಪಾಯವನ್ನು ಹಾಕಿ ಮನೆಕಟ್ಟಿದಮೇಲೆ ಆ ಮನೆಯ ಮೇಲೆ ವ್ಯಾಮೋಹ ಎಷ್ಟು ಬಮ್ದುಬಿಡುತ್ತೆ…? ಅಲ್ಲವೇ..? ಇನ್ನು ಜೀವಗಳ ಮಿಲನ ಜೀವಕ್ಕೆ ಜನನ….ಈ ಬಂಧಗಳು ಹೇಗಿರಬೇಡ…?
ಈ ಜೀವನವೆಂದರೇ ಹೀಗಲ್ಲವೆ?ನಾವೇ ಕಟ್ಟಿಕೊಂದ ಜೀವನದ ಮೇಲೆ, ನಮ್ಮವರ ಮೇಲೆ ವ್ಯಾಮೋಹ, ಪ್ರೀತಿ, ವಾತ್ಸಲ್ಯ ಉಕ್ಕುವುದು…ಇದಿಲ್ಲದ ಜೀವನವುಂಟಾ..ಧನ್ಯವಾದಗಳು ಜಲನಯನಾ
nice narration!
THANK YOU…:)
ತುಂಬಾ ಅರ್ಥ ಪೂರ್ಣವಾಗಿದೆ ನಿಮ್ಮ ಬರಹ… ಅಭಿನಂದನೆಗಳು 🙂
ಧನ್ಯವಾದಗಳು ಮಾನಸ..
chennagiddu..
Thank u pavana..