ಮನ ತುಂಬಿ ಬಂದ ಕ್ಷಣಗಳು

ನೋಡೇ ಯಾರು ಬಂದಿದ್ದಾರೆ ಅಂತ, ಮಾತಾಡ್ಸಿದೆಯ? ಏನು ತೊಗೋತಾರೆ ಅಂತ ಕೇಳಿದೆಯ ಅಂತ ಆತ ಆಕೆಯನ್ನು ಕೇಳಿದ. ಇದು ಯಾರು ಅಂತ ಗೊತ್ತಾಯ್ತಾ ಇಲ್ವಾ? ಅಂತ ಮನೆಗೆ ಬಂದವರನ್ನು ತೋರಿಸಿ ಕೇಳಿದಾಗಲು ಆಕೆಯಿಂದ ಯಾವುದೇ ಉತ್ತರವಿಲ್ಲ. ಓ ನಿನ್ನ ಉುಟದ ಟೈಮ್ ಆಯ್ತು ಅಲ್ವಾ, ಹಸಿವೆ ಆಗ್ತಿದೆಯೇನೋ ಅನ್ನುತ್ತಾ ಆತ ಹೋಗಿ ಆಕೆಯ ಆಹಾರವಾದ ತಿಳಿ ಗಂಜಿಯನ್ನು ತಂದು ಆಕೆಗೆ ತಿನ್ನಿಸತೊಡಗಿದ. ನಿಧಾನವಾಗಿ ಒಂದೊಂದೇ ಗುಟುಕು ಒಳಗೆ ಹೋಗುತ್ತಿತ್ತು. ಆಕೆ ಆತನ ಮಗುವಲ್ಲ, ಆದರೂ ಮಗುವಿನಂತೆಯೇ….ಆಕೆ ಆತನ ಪತ್ನಿ. ಈ ಜಗತ್ತಿನ ಪರಿವಿಯೆ ಇಲ್ಲದಂತೆ ಕೋಮಾವಸ್ಥೆಯಲ್ಲಿ ಮಲಗಿರುವ ಹೆಣ್ಣುಮಗಳು. ಹೇಳಿದ ಮಾತು ತಿಳಿಯುವುದೋ ಇಲ್ಲವೋ, ಪ್ರತ್ಯುತ್ತರ ಹೇಳಲಾಗದು, ಹಾಸಿಗೆಯಲ್ಲಿ ಮಲಗಿ ಅಲ್ಲಿ ಅತ್ತಿತ್ತ ತಿರುಗುವುದಕ್ಕೂ, ಅಲ್ಲಿಂದ ಏಳುವುದಕ್ಕೂ ಆಕೆಯಿಂದ ಆಗದು. ತೆಳ್ಳಗಿನ ಆಹಾರ ಬಾಯಿಗೆ ಕೊಟ್ಟರೆ ನಿಧಾನವಾಗಿ ಒಳಗೆ ಇಳಿಯುತ್ತದೆ ಅಷ್ಟೇ. ಯಾವುದೋ ಖಾಯಿಲೆಯಿಂದಾಗಿ ಆಕೆ ತನ್ನ 45-50 ವಯಸ್ಸಿನಲ್ಲಿ ಕೋಮಾವಸ್ತೆಯನ್ನು ತಲುಪಿದ್ದಳು. ವರ್ಷಗಟ್ಟಲೇ ಇದೆ ಸ್ಥಿತಿ. ಮಕ್ಕಳು ಮದುವೆಯಾಗಿ ಅವರವರ ಮನೆಯಲ್ಲಿದ್ದರು, ಮನೆಯಲ್ಲಿ ಕುಟುಂಬದ ಇತರ ಸದಸ್ಯರು ಇದ್ದರೂ ಎಷ್ಟು ದಿನ ಯಾರು ಸೇವೆ ಮಾಡಬಲ್ಲರು? ವರ್ಷಗಟ್ಟಲೇ ಆದರೂ ಸ್ಥಿತಿಯಲ್ಲಿ ಏನೂ ಬದಲಾವಣೆ ಇಲ್ಲ. ನಿನಗೂ ನೋಡಿಕೊಳ್ಳುವುದು ಕಷ್ಟ, ಆಕೆಗೂ ಅನುಭವಿಸುವುದು ಕಷ್ಟ, ಸುಮ್ಮನೇ ಏನಾದರೂ ವಿಷದ ವಸ್ತು ಕೊಡಿಸಿಬಿಡು ಅಥವಾ ಡಾಕ್ಟರ್ ಹತ್ತಿರ ಏನಾದರೂ ಇಂಜೆಕ್ಶನ್ ಕೊಡಿಸಿ ಸಾಯಿಸಿಬಿಡು ಅಂತ ನೆಂಟರು, ಸ್ನೇಹಿತರು ಕೆಲವರು ಆತನಿಗೆ ಹೇಳಿದರು. ಆದರೂ ಆತನಿಗೆ ಇಷ್ಟುವರ್ಷ ಜೊತೆಗೆ ಸಂಸಾರ ಮಾಡಿದ ಪತ್ನಿಯನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಧರ್ಮೇಚ, ಅರ್ಥೆಚ, ಕಾಮೆಚ, ನಾತಿಚರಾಮಿ ಎಂದು ನೀಡಿದ ವಚನವನ್ನು ಮರೆಯಲು ಸಾಧ್ಯವಿಲ್ಲ. ಇಷ್ಟುವರ್ಷ ಎಲ್ಲವನ್ನು ಹಂಚಿಕೊಂಡು ಬದುಕಿದ ಆಕೆಯ ಜೊತೆ ಬಿಡಲು ಆತನ ಮನಸ್ಸು ಒಪ್ಪದು. ಆಕೆ ಇರುವಷ್ಟು ದಿನ ಆಕೆಯ ಸೇವೆಯನ್ನು ನಾನು ಮಾಡುತ್ತೇನೆ, ಆಕೆಯನ್ನು ನೋಡಿದರೆ ಸಂಕಟವಾಗುತ್ತದೆ ಎನ್ನುತ್ತಾ ಆಕೆಯ ಪ್ರತಿಯೊಂದು ಕೆಲಸಗಳನ್ನುಮನಸ್ಸಿಟ್ಟು ಮಾಡುತ್ತಿದ್ದ. ಆಕೆ ಆತನ ಮಾತಿಗೆ ಸ್ಪಂದಿಸುತ್ತಾಳೇನೋ ಅನ್ನುವಂತೆ ಆಕೆಯೊಂದಿಗೆ ಮಾತನಾಡುತ್ತಿದ್ದ. ಮನೆಗೆ ಯಾರಾದರೂ ಹೋದರೆ ತೋರಿಸಿ ಗುರುತು ಸಿಕ್ಕಿತೆ ಎಂದು ಕೇಳುತ್ತಿದ್ದ. ಆ ದಿನ ಆತ ” ಇದು ಯಾರು ಎಂತ ಗೊತ್ತಾಯ್ತಾ “ಅಂತ ತೋರಿಸಿದ್ದು ನನ್ನನ್ನು. ವರದಕ್ಷಿಣೆಗಾಗಿ, ಸಣ್ಣಪುಟ್ಟ ಜಗಳಗಳಿಗಾಗಿ ಸಾಯಿಸುವ, ಹೊಡೆದು ಬಡಿದು ಕಷ್ಟ ನೀಡುವ, ಡೈವರ್ಸ್ ಕೊಡುವ ವಿಷಯಗಳನ್ನು ಕೇಳಿದ್ದೆ. ಆದರೆ ಮಗುವಿನಂತೆ ಪತ್ನಿಯ ಸೇವೆ ಮಾಡುವ, ಪ್ರೀತಿಸುವ, ಕಾಳಜಿ ತೋರಿಸುವ ಉದಾತ್ತ ಮನಸ್ಸಿನ ಮನುಷ್ಯನನ್ನು ಕಂಡು ಮನಸ್ಸು ಮತ್ತು ಕಣ್ಣು ಎರಡೂ ತುಂಬಿಬಂದವು. ಆ ಹೆಣ್ಣುಮಗಳು ಅಂತಹ ಸ್ಥಿತಿಯಲ್ಲಿ ಮಲಗಿದ್ದರು ಆಕೆ ಪುಣ್ಯವಂತೆ ಅನ್ನಿಸಿತು.

ಆ ಮನೆಯ ಗೃಹಿಣಿ, ಆಕೆಯ ಪತಿ, ಒಬ್ಬ ಕೆಲಸದವಳು, ಒಬ್ಬ ನರ್ಸ್, ಒಬ್ಬ ಅತಿಥಿ. ಆ ಸಮಯದಲ್ಲಿ ಮನೆಯಲ್ಲಿದ್ದವರು ಈ 5 ಜನ. ಆ ದಂಪತಿಗಳ ಮಗ ಮತ್ತು ಸೊಸೆ ಎಲ್ಲೋ ಹೊರಗೆ ಹೋಗಿದ್ದರೆಂದು ತೋರುತ್ತದೆ. ಆ ಮನೆಯ ಗೃಹಿಣಿಯ ವಯಸ್ಸು ಒಂದು 60-65 ರ ಮಧ್ಯದಲ್ಲಿ ಇರಬಹುದು.ಗಂಟಲಲ್ಲೊಂದು ತೂತು, ಅಲ್ಲೊಂದು ಚಿಕ್ಕ ಕೊಳವೆಯಂತದ್ದು, ತಲೆಯಲ್ಲಿ ಕೂದಲಿಲ್ಲ, ತಲೆಗೊಂದು ಕರ್ಚಿಪ್ ಕಟ್ಟಿದ್ದಳು. ದೇಹ ಮೊದಲಿನಂತೆ ದಷ್ಟ ಪುಷ್ಟವಾಗಿರಲಿಲ್ಲ, ಕೃಶವಾಗಿತ್ತು, ಮುಖದ ಕಾಂತಿ ಕಳೆಗುಂದಿತ್ತು. ಮಾತನಾಡಲು ಧ್ವನಿ ಹೊರಡುತ್ತಿರಲಿಲ್ಲ. ಆಕೆ ಒಬ್ಬ ಕ್ಯಾನ್ಸರ್ ಪೆಶೆಂಟ್. ಆಕೆಗೆ ಆಗಿದ್ದು ಗಂಟಲಿನ ಕ್ಯಾನ್ಸರ್. ಆದರೂ ಸನ್ನೆಗಳ ಮೂಲಕ ಎಲ್ಲ ಕುಶಲವೇ ಎಂಬಂತೆ ಬಂದ ಅತಿಥಿಯನ್ನು ವಿಚಾರಿಸಿಕೊಂಡು, ಮನೆಯಲ್ಲೆಲ್ಲ ಹೇಗಿದ್ದಾರೆ, ಚಹಾ ತೆಗೆದುಕೊಳ್ಳುತ್ತೀಯಾ ಎಂದು ಒಂದು ಪೇಪರಿನಲ್ಲಿ ಬರೆದು ವಿಚಾರಿಸಿದಾಗ ಈಗ ಏನು ಬೇಡ ಎಂದು ಅತಿಥಿಯ ಉತ್ತರ. ಪೇಪರಿನಲ್ಲಿ ಬರೆದು ತೋರಿಸುವ ಮಾತುಕತೆ ಸ್ವಲ್ಪ ಹೊತ್ತು ಮುಂದುವರಿಯಿತು. ನಂತರ ಈಗ ಬಂದೆ ನೀವು ಮಾತಾಡುತ್ತೀರಿ ಎಂದು ಅತಿಥಿ ಮತ್ತು ಆಕೆಯ ಪತಿಯನ್ನು ಮಾತನಾಡಲು ಬಿಟ್ಟು ಎದ್ದು ಹೋದಳು. 10 ನಿಮಿಷವಾದರೂ ಬರದಿದ್ದಾಗ ಹೋಗಿ ಮಲಗಿಕೊಂಡರಾ ಎಂದು ಅತಿಥಿ ಆಕೆಯ ಪತಿಯನ್ನು ಕೇಳಿದಾಗ, ಟೀ ತರೋಕೆ ಹೋಗಿರಬಹುದು,ಒಳಗೆ ಕೆಲಸದವಳು ಇದ್ದಾಳೆ ಎಂಬ ಉತ್ತರ ಆಕೆಯ ಪತಿಯಿಂದ. ಹೀಗಂದ ಸ್ವಲ್ಪ ಹೊತ್ತಿನಲ್ಲಿ ಕೆಲಸದವಳ ಜೊತೆ ಹೊರಗೆ ಬಂದ ಆಕೆಯ ಕೈಯಲ್ಲಿ ಒಂದು ಟೀ ಕಪ್, ಕೆಲಸದವಳ ಕೈಯಲ್ಲಿ ಒಂದು ಪ್ಲೇಟ್ ಪುರಿ ಭಾಜಿ, ಒಂದು ಸ್ವೀಟ್. ಬೇಡ ಎಂದರು ಒತ್ತಾಯಮಾಡಿ ಅತಿಥಿಗೆ ಅದೆಲ್ಲವನ್ನೂ ಕೊಟ್ಟಳು. ಅಷ್ಟು ಹೊತ್ತಿನವರೆಗೂ ಈಕೆ ಎದ್ದು ಗಟ್ಟಿಯಾಗಿ ಓಡಾಡುತ್ತಾಳೋ ಇಲ್ಲವೋ ಎಂದು ಆಕೆಯ ಕುಶಲೋಪರಿ ವಿಚಾರಿಸಿಕೊಂಡು ಹೋಗಲು ಬಂದ ಅತಿಥಿ ಯೋಚಿಸುತ್ತಿದ್ದರೆ, ಆಕೆಯ ಈ ಅತಿಥಿ ಸತ್ಕಾರ ನೋಡಿ ಮಾತೇ ಹೊರಡುತ್ತಿರಲಿಲ್ಲ. ಅಂದು ಅವರ ಮನೆಗೆ ಹೋದ ಅತಿಥಿ ಬೇರೆ ಯಾರು ಅಲ್ಲ, ಅದು ನಾನೇ. ಮನೆಗೆ ಅತಿಥಿಗಳು ಏಕಾದರೂ ಬರುತ್ತಾರೋ ಎಂದು ಯೋಚಿಸುವ ಈ ಕಾಲದಲ್ಲಿ ಇಂತಹ ಸ್ಥಿತಿಯಲ್ಲೂ ಅತಿಥಿ ಸತ್ಕಾರ ಮಾಡುವ ಗೃಹಿಣಿಯನ್ನು ನೋಡಿ ಹೃದಯ ಭಾರವಾಯಿತು. ಆಕೆ ಕುಳಿತಲ್ಲಿಂದಲೇ ಕೆಲಸದವಲಿಗೆ ಒಂದು ಕಪ್ ಚಹಾ ಮಾಡಿಕೊಂಡು ಬಾ ಎಂದು ತಿಳಿಸಿದ್ದರು ಆಗುತ್ತಿತ್ತು. ಆದರೆ ತಾನೇ ಎದ್ದು ಹೋಗಿ ಮಾಡಿಕೊಂಡು ( ಮಾಡಿಸಿಕೊಂಡು) ಬಂದ ಆಕೆಗೆ ಮನಸ್ಸು ಹ್ಯಾಟ್ಸ್ ಆಫ್ ಎಂದಿತು.

ಇವೆರಡು ನನ್ನ ಕಣ್ಮುಂದೆ ನಡೆದ ಘಟನೆಗಳು. ಪ್ರಪಂಚದಲ್ಲಿ ಎಲ್ಲ ರೀತಿಯ ಜನರೂ ಇರುತ್ತಾರೆ. ಎಸ್ಟೋ ಸರಿ ನಮಗೆ ಇಂತಹ ಜನರ ಮನಸ್ಸಿನ ಜನರ ಭೇಟಿಯಾಗುತ್ತದೆ. ಎಲ್ಲರಿಗೂ ಇಂತಹ ಬೇರೆ ಬೇರೆ ಅನುಭವವಾಗಿರಬಹುದು. ಕೆಲವರಿಗೆ ಅದು ಜ್ಞಾಪಕವಿರುತ್ತದೆ, ಇನ್ನೂ ಕೆಲವರಿಗೆ ಮರೆತು ಹೋಗುತ್ತದೆ. ಈ ಇಬ್ಬರು ಉನ್ನತ ಮನಸ್ಸಿನ ಜನರ ಭೇಟಿಯ ನೆನಪು ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಆ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣವೆಂದು ಅನ್ನಿಸಿತು………..ಬರೆದಿದ್ದೇನೆ……………

Published in: on ಏಪ್ರಿಲ್ 14, 2009 at 8:36 AM  Comments (10)