ಬದುಕೆಂದರೆ ಕಾಮನಬಿಲ್ಲು, ಬದುಕೆಂದರೆ ಬಿರು ಬಿಸಿಲು, ಬದುಕೆಂದರೆ ಮರಳುಗಾಡು, ಬದುಕೆಂದರೆ ಮುಂಗಾರಿನ ಮಳೆ ಅಂತ ಬದುಕಿನ ಬಗ್ಗೆ ಒಬ್ಬೊಬ್ಬರು ಒಂದೊಂದು ಅನಿಸಿಕೆಯನ್ನು ವ್ಯಕ್ತಪಡಿಸುತ್ತಾರೆ. ಅವರವರ ಬದುಕಿನ ಆ ಸಂದರ್ಭಕ್ಕನುಸಾರವಾಗಿ, ಅಥವಾ ಅವರ ಬದುಕಿನ ಅನುಭವಗಳಿಂದಾಗಿ ವ್ಯಕ್ತಪಡಿಸುವ ಭಾವನೆ ಅದು. ಇವೆಲ್ಲ ಭಾವನೆ, ಅನುಭವಗಳ ಮಿಶ್ರಣವೇ ಬದುಕು ಅಂತ ನನ್ನ ಅನಿಸಿಕೆ.
ಕಷ್ಟ ಕೋಟಲೆಗಳು ಕಣ್ಣ ಮುಂದೆ ಬಂದು ನಿಂತಾಗ ಬದುಕು ಬರಡು ಮರುಭೂಮಿ ಅನ್ನಿಸುತ್ತದೆ, ನೋವುಗಳ ಬಿಸಿ ತಾಗಿದಾಗ ಬದುಕೊಂದು ಸುಡು ಬಿಸಿಲು ಅನ್ನಿಸುವುದು ಸಹಜವೇ ಸರಿ.ಅದೇ ಬದುಕಿನಲ್ಲಿ ಸುಖದ ಹೊಳೆ ಹರಿದಾಗ ಬದುಕೊಂದು ಸುಂದರ ಕಾಮನಬಿಲ್ಲು, ಮುಂಗಾರಿನ ತುಂತುರು ಮಳೆ ಅನ್ನಿಸುವುದು ಅಷ್ಟೇ ವಾಸ್ತವಿಕ.ಸುಖವೂ ಶಾಶ್ವತವಲ್ಲ, ದುಃಖವೂ ಶಾಶ್ವತವಲ್ಲ. ಎರಡು ಒಂದರ ಜೊತೆಗೊಂದು ಕಣ್ಣಾ ಮುಚ್ಚಾಲೆ ಆಡುತ್ತಿರುತ್ತವೆ. ಇವುಗಳನ್ನು ಋತು ಚಕ್ರಕ್ಕೆ ಹೋಲಿಸಿದರೆ, ಮಳೆಗಾಲದ ನಂತರ ಚಳಿಗಾಲ, ನಂತರ ಬೇಸಿಗೆ, ಅದಾದ ಮೇಲೆ ತಿರುಗಿ ಮಳೆಗಾಲ ಬರುವಂತೆಯೇ ಬದುಕಿನ ಮುಖಗಳೂ ಸಹ ಚಕ್ರದಹಾಗೆ ಸುತ್ತುತ್ತಲೇ ಇರುತ್ತವೆ.
ಕೆಲವೊಮ್ಮೆ ಸುಡು ಸುಡು ಬಿಸಿಲಿನ ನಡುವೆ ಸಣ್ಣ ಮಳೆ ಬಂದು ಹೋದಂತೆ, ಜೋರಾದ ಜದಿ ಮಳೆಯ ಮಧ್ಯೆ ಇಣುಕಿ ನೋಡುವ ಸೂರ್ಯ ಕಿರಣ ದಂತೆ ಕಷ್ಟಗಳ ನಡುವೆ ನವಿರಾದ ಸಂತಸ, ಸಾಂತ್ವನ, ನೋವಿನ ಬಿಸಿ ಗಾಯಕ್ಕೆ ತಣ್ಣನೆಯ ಮದ್ದು.ಅಥವಾ ಮೇಲೇರುತ್ತಿರುವವನ ಕಾಲು ಹಿಡಿದು ಎಳೆಯುವಂತೆ, ಸುಖವಾಗಿ ನಿದ್ರಿಸುತ್ತಿರುವವನ ಮೇಲೆ ತಣ್ಣೀರು ಎರಚಿದಂತೆ, ಸುಖದ ನಡುವೆ ಸ್ವಲ್ಪ ಕಿರಿ ಕಿರಿ, ಮೃದುವಾದ ದೇಹವನ್ನು ಚೇಳು ಬಂದು ಕೂಟುಕಿದಂತೆ ಸಣ್ಣನೆಯ ಯಾತನೆ ನಡೆಯುತ್ತಲೇ ಇರುತ್ತದೆ. ಇದರಿಂದ ಯಾರೂ ಮುಕ್ತರಲ್ಲ, ಯಾರಿಂದಲೂ ತಪ್ಪಿಸಲೂ ಆಗದು. ಬಂದದ್ದು ಬಂದಂತೆ ಅನುಭವಿಸುವುದೊಂದೇ ದಾರಿ.
ಸುಖ, ದುಃಖ, ನೋವು, ನಲಿವುಗಳನ್ನು ಒಂದೇ ತೆರನಾಗಿ ಸ್ವೀಕರಿಸಬೇಕು ಅನ್ನುವುದು ಸತ್ಯವಾದರೂ ನಮ್ಮಂಥ ಸಾಮಾನ್ಯ ಮನುಷ್ಯರಿಗೆ ಅದು ಅಸಾಧ್ಯವಾದಂತ ಮಾತು. ಎಲ್ಲವನ್ನು ಒಂದೇ ರೀತಿಯಾಗಿ ಸ್ವೀಕರಿಸುವ ಮನುಷ್ಯ ಮಹಾತ್ಮನಾಗುತ್ತಾನೆ, ಇನ್ನೊಂದು ಅರ್ಥದಲ್ಲಿ ಆಸೆ ಆಕಾಂಕ್ಷೆ, ನಾನು, ನನ್ನದು ಎನ್ನುವುದನ್ನೆಲ್ಲ ಬಿಟ್ಟ ಮಹಾತ್ಮರಿಂದ ಮಾತ್ರ ಇದು ಸಾಧ್ಯ ಅಂತ ಸಾಮಾನ್ಯ ಮನುಷ್ಯೆಯಾದ ನನಗೆ ಅನ್ನಿಸುತ್ತದೆ. ನನಗೆ ಜೀವನದಲ್ಲಿ ಬಹಳಷ್ಟು ಆಸೆಗಳಿವೆ, ಕಣ್ಣು ತುಂಬಾ ಕನಸುಗಳಿವೆ, ನಾನು ನನ್ನದು ಎಂಬ ಮಮಕಾರವಿದೆ ಹೀಗಿರುವಾಗ ನಾನು ಸುಖ ಬಂದಾಗ ಹಿಗ್ಗುತ್ತೇನೆ, ದುಃಖ ಬಂದಾಗ ಕುಗ್ಗುತ್ತೇನೆ. ಯಾವುದೇ ತರದ ಭಾವನೆಗಳನ್ನು ವ್ಯಕ್ತ ಪಡಿಸದೇ, ಸುಖ, ದುಃಖ ಎರಡು ಒಂದೇ ಎಂದು ಮನಸ್ಸು ಒಪ್ಪಿಕೊಳ್ಳುವುದಿಲ್ಲ. ನಿಮ್ಮೆಲ್ಲರ ಮನಸ್ಸು ಇದನ್ನೇ ಹೇಳುತ್ತದೆ ಅಂದುಕೊಳ್ಳುತ್ತೇನೆ.
ಆದ್ದರಿಂದ ನನಗೆ ಅನಿಸುವ ದಾರಿ ಅಂದರೆ ಸಂದರ್ಭಗಳು ಯಾವ ರೀತಿಯಾಗಿ ಬರುತ್ತವೆಯೋ ಅದರಂತೆಯೇ ಅದನ್ನು ಸ್ವೀಕರಿಸುವುದು. ಒಬ್ಬೊಬ್ಬ್ಬರ ಪಾಲಿಗೆ ಒಂದೊಂದು ಹೆಚ್ಚು, ಒಂದೊಂದು ಕಮ್ಮಿ. ಆದರೆ ಯಾರೂ ಇದರಿಂದ ಹೊರತಲ್ಲ ಎನ್ನುವುದನ್ನು ನೆನಪಿಸಿಕೊಳ್ಳುವುದು. ಸಂತಸ, ಸುಖ ಬಂದಾಗ ಸುಖವಾಗಿ ಅನುಭವಿಸುವುದು. ದುಃಖ, ಕಷ್ಟ ಬಂದರೆ ತಾಳಿಕೊಳ್ಳುವ, ಎದುರಿಸುವ ಶಕ್ತಿ, ತಾಳ್ಮೆ (ಇದು ನನ್ನಲ್ಲಿ ಸ್ವಲ್ಪ ಕಮ್ಮಿ ಅಂದುಕೊಳ್ಳುತ್ತೇನೆ, ನಾನು ರೂಢಿಸಿಕೊಳ್ಳುವುದು ಬಹಳಷ್ಟಿದೆ) ಬೆಳೆಸಿಕೊಳ್ಳುವುದು. ಮುಂದೆ ಅನುಭವಿಸಲಿರುವ ಸುಖಕ್ಕಾಗಿ ಕಾಯುವುದು ಅಷ್ಟೇ…..
ಇದು ನಾನು ನನ್ನ ಜೀವನದಿಂದ ಕಂಡುಕೊಂಡಿದ್ದು, ನಿಮ್ಮಲ್ಲಿ ಕೆಲವರದ್ದಾದರೂ ಇದೆ ರೀತಿಯ ಅನುಭವ ಅಭಿಪ್ರಾಯ ಇರಬಹುದಲ್ಲವೇ? ತಿಳಿಸಿ
ತಾಳಿಕೊಂಡು ಬಾಳು
ಬಾಳುವುದಕ್ಕಾಗಿ ತಾಳು
ಸುಖ ದುಃಖಗಳ ಸಂಕೇತವಾಗಿ 2 ಚಿತ್ರಗಳನ್ನು ಇಲ್ಲಿ ಹಾಕುತ್ತಿದ್ದೇನೆ.
ನಿಮ್ಮದೊಂದು ಉತ್ತರ