ಬದುಕೆಂಬ ದೋಣಿ

ಬದುಕೆಂದರೆ ಕಾಮನಬಿಲ್ಲು, ಬದುಕೆಂದರೆ ಬಿರು ಬಿಸಿಲು, ಬದುಕೆಂದರೆ ಮರಳುಗಾಡು, ಬದುಕೆಂದರೆ ಮುಂಗಾರಿನ ಮಳೆ ಅಂತ ಬದುಕಿನ ಬಗ್ಗೆ ಒಬ್ಬೊಬ್ಬರು ಒಂದೊಂದು ಅನಿಸಿಕೆಯನ್ನು ವ್ಯಕ್ತಪಡಿಸುತ್ತಾರೆ. ಅವರವರ ಬದುಕಿನ ಆ ಸಂದರ್ಭಕ್ಕನುಸಾರವಾಗಿ, ಅಥವಾ ಅವರ ಬದುಕಿನ ಅನುಭವಗಳಿಂದಾಗಿ ವ್ಯಕ್ತಪಡಿಸುವ ಭಾವನೆ ಅದು. ಇವೆಲ್ಲ ಭಾವನೆ, ಅನುಭವಗಳ ಮಿಶ್ರಣವೇ ಬದುಕು ಅಂತ ನನ್ನ ಅನಿಸಿಕೆ.

ಕಷ್ಟ ಕೋಟಲೆಗಳು ಕಣ್ಣ ಮುಂದೆ ಬಂದು ನಿಂತಾಗ ಬದುಕು ಬರಡು ಮರುಭೂಮಿ ಅನ್ನಿಸುತ್ತದೆ, ನೋವುಗಳ ಬಿಸಿ ತಾಗಿದಾಗ ಬದುಕೊಂದು ಸುಡು ಬಿಸಿಲು ಅನ್ನಿಸುವುದು ಸಹಜವೇ ಸರಿ.ಅದೇ ಬದುಕಿನಲ್ಲಿ ಸುಖದ ಹೊಳೆ ಹರಿದಾಗ ಬದುಕೊಂದು ಸುಂದರ ಕಾಮನಬಿಲ್ಲು, ಮುಂಗಾರಿನ ತುಂತುರು ಮಳೆ ಅನ್ನಿಸುವುದು ಅಷ್ಟೇ ವಾಸ್ತವಿಕ.ಸುಖವೂ ಶಾಶ್ವತವಲ್ಲ, ದುಃಖವೂ ಶಾಶ್ವತವಲ್ಲ. ಎರಡು ಒಂದರ ಜೊತೆಗೊಂದು ಕಣ್ಣಾ ಮುಚ್ಚಾಲೆ ಆಡುತ್ತಿರುತ್ತವೆ. ಇವುಗಳನ್ನು ಋತು ಚಕ್ರಕ್ಕೆ ಹೋಲಿಸಿದರೆ, ಮಳೆಗಾಲದ ನಂತರ ಚಳಿಗಾಲ, ನಂತರ ಬೇಸಿಗೆ, ಅದಾದ ಮೇಲೆ ತಿರುಗಿ ಮಳೆಗಾಲ ಬರುವಂತೆಯೇ ಬದುಕಿನ ಮುಖಗಳೂ ಸಹ ಚಕ್ರದಹಾಗೆ ಸುತ್ತುತ್ತಲೇ ಇರುತ್ತವೆ.

ಕೆಲವೊಮ್ಮೆ ಸುಡು ಸುಡು ಬಿಸಿಲಿನ ನಡುವೆ ಸಣ್ಣ ಮಳೆ ಬಂದು ಹೋದಂತೆ, ಜೋರಾದ ಜದಿ ಮಳೆಯ ಮಧ್ಯೆ ಇಣುಕಿ ನೋಡುವ ಸೂರ್ಯ ಕಿರಣ ದಂತೆ ಕಷ್ಟಗಳ ನಡುವೆ ನವಿರಾದ ಸಂತಸ, ಸಾಂತ್ವನ, ನೋವಿನ ಬಿಸಿ ಗಾಯಕ್ಕೆ ತಣ್ಣನೆಯ ಮದ್ದು.ಅಥವಾ ಮೇಲೇರುತ್ತಿರುವವನ ಕಾಲು ಹಿಡಿದು ಎಳೆಯುವಂತೆ, ಸುಖವಾಗಿ ನಿದ್ರಿಸುತ್ತಿರುವವನ ಮೇಲೆ ತಣ್ಣೀರು ಎರಚಿದಂತೆ, ಸುಖದ ನಡುವೆ ಸ್ವಲ್ಪ ಕಿರಿ ಕಿರಿ, ಮೃದುವಾದ ದೇಹವನ್ನು ಚೇಳು ಬಂದು ಕೂಟುಕಿದಂತೆ ಸಣ್ಣನೆಯ ಯಾತನೆ ನಡೆಯುತ್ತಲೇ ಇರುತ್ತದೆ. ಇದರಿಂದ ಯಾರೂ ಮುಕ್ತರಲ್ಲ, ಯಾರಿಂದಲೂ ತಪ್ಪಿಸಲೂ ಆಗದು. ಬಂದದ್ದು ಬಂದಂತೆ ಅನುಭವಿಸುವುದೊಂದೇ ದಾರಿ.

ಸುಖ, ದುಃಖ, ನೋವು, ನಲಿವುಗಳನ್ನು ಒಂದೇ ತೆರನಾಗಿ ಸ್ವೀಕರಿಸಬೇಕು ಅನ್ನುವುದು ಸತ್ಯವಾದರೂ ನಮ್ಮಂಥ ಸಾಮಾನ್ಯ ಮನುಷ್ಯರಿಗೆ ಅದು ಅಸಾಧ್ಯವಾದಂತ ಮಾತು. ಎಲ್ಲವನ್ನು ಒಂದೇ ರೀತಿಯಾಗಿ ಸ್ವೀಕರಿಸುವ ಮನುಷ್ಯ ಮಹಾತ್ಮನಾಗುತ್ತಾನೆ, ಇನ್ನೊಂದು ಅರ್ಥದಲ್ಲಿ ಆಸೆ ಆಕಾಂಕ್ಷೆ, ನಾನು, ನನ್ನದು ಎನ್ನುವುದನ್ನೆಲ್ಲ ಬಿಟ್ಟ ಮಹಾತ್ಮರಿಂದ ಮಾತ್ರ ಇದು ಸಾಧ್ಯ ಅಂತ ಸಾಮಾನ್ಯ ಮನುಷ್ಯೆಯಾದ ನನಗೆ ಅನ್ನಿಸುತ್ತದೆ. ನನಗೆ ಜೀವನದಲ್ಲಿ ಬಹಳಷ್ಟು ಆಸೆಗಳಿವೆ, ಕಣ್ಣು ತುಂಬಾ ಕನಸುಗಳಿವೆ, ನಾನು ನನ್ನದು ಎಂಬ ಮಮಕಾರವಿದೆ ಹೀಗಿರುವಾಗ ನಾನು ಸುಖ ಬಂದಾಗ ಹಿಗ್ಗುತ್ತೇನೆ, ದುಃಖ ಬಂದಾಗ ಕುಗ್ಗುತ್ತೇನೆ. ಯಾವುದೇ ತರದ ಭಾವನೆಗಳನ್ನು ವ್ಯಕ್ತ ಪಡಿಸದೇ, ಸುಖ, ದುಃಖ ಎರಡು ಒಂದೇ ಎಂದು ಮನಸ್ಸು ಒಪ್ಪಿಕೊಳ್ಳುವುದಿಲ್ಲ. ನಿಮ್ಮೆಲ್ಲರ ಮನಸ್ಸು ಇದನ್ನೇ ಹೇಳುತ್ತದೆ ಅಂದುಕೊಳ್ಳುತ್ತೇನೆ.

ಆದ್ದರಿಂದ ನನಗೆ ಅನಿಸುವ ದಾರಿ ಅಂದರೆ ಸಂದರ್ಭಗಳು ಯಾವ ರೀತಿಯಾಗಿ ಬರುತ್ತವೆಯೋ ಅದರಂತೆಯೇ ಅದನ್ನು ಸ್ವೀಕರಿಸುವುದು. ಒಬ್ಬೊಬ್ಬ್ಬರ ಪಾಲಿಗೆ ಒಂದೊಂದು ಹೆಚ್ಚು, ಒಂದೊಂದು ಕಮ್ಮಿ. ಆದರೆ ಯಾರೂ ಇದರಿಂದ ಹೊರತಲ್ಲ ಎನ್ನುವುದನ್ನು ನೆನಪಿಸಿಕೊಳ್ಳುವುದು. ಸಂತಸ, ಸುಖ ಬಂದಾಗ ಸುಖವಾಗಿ ಅನುಭವಿಸುವುದು. ದುಃಖ, ಕಷ್ಟ ಬಂದರೆ ತಾಳಿಕೊಳ್ಳುವ, ಎದುರಿಸುವ ಶಕ್ತಿ, ತಾಳ್ಮೆ (ಇದು ನನ್ನಲ್ಲಿ ಸ್ವಲ್ಪ ಕಮ್ಮಿ ಅಂದುಕೊಳ್ಳುತ್ತೇನೆ, ನಾನು ರೂಢಿಸಿಕೊಳ್ಳುವುದು ಬಹಳಷ್ಟಿದೆ) ಬೆಳೆಸಿಕೊಳ್ಳುವುದು. ಮುಂದೆ ಅನುಭವಿಸಲಿರುವ ಸುಖಕ್ಕಾಗಿ ಕಾಯುವುದು ಅಷ್ಟೇ…..
ಇದು ನಾನು ನನ್ನ ಜೀವನದಿಂದ ಕಂಡುಕೊಂಡಿದ್ದು, ನಿಮ್ಮಲ್ಲಿ ಕೆಲವರದ್ದಾದರೂ ಇದೆ ರೀತಿಯ ಅನುಭವ ಅಭಿಪ್ರಾಯ ಇರಬಹುದಲ್ಲವೇ? ತಿಳಿಸಿ

ತಾಳಿಕೊಂಡು ಬಾಳು
ಬಾಳುವುದಕ್ಕಾಗಿ ತಾಳು

ಸುಖ ದುಃಖಗಳ ಸಂಕೇತವಾಗಿ 2 ಚಿತ್ರಗಳನ್ನು ಇಲ್ಲಿ ಹಾಕುತ್ತಿದ್ದೇನೆ.

dscn0976

dsc01094

ಇಷ್ಟ ಕಷ್ಟಗಳ ನಡುವಿನ ನನ್ನ ಜೀವನ

dscn10951ಅಡಿಗೆ ಮಾಡುವುದು ಇಷ್ಟ
ಪಾತ್ರೆ ತೊಳೆಯುವುದು ಕಷ್ಟ
ದೊಡ್ಡ ಮನೆ ಇಷ್ಟ
ಕ್ಲೀನ್ ಮಾಡುವುದು ಕಷ್ಟ
ಐಸ್ ಕ್ರಿಮ್ ಚಾಕ್ಲೇಟ್ ಇಷ್ಟ
ದಪ್ಪ ಆದರೆ ಕಷ್ಟ
ಶಾಪಿಂಗ್ ರೋಮಿಂಗ್ ಇಷ್ಟ
ಜೇಬು ಖಾಲಿಯಾದರೆ ಕಷ್ಟ
ಇಷ್ಟದಲ್ಲೊಂದು ಕಷ್ಟ
ಕಷ್ಟವಾದರೂ ಇಷ್ಟ
ಇದೇ ಜೀವನ ಅಲ್ಲವೇ

Published in: on ಏಪ್ರಿಲ್ 3, 2009 at 7:28 AM  Comments (8)  

ಮರೆಯಲಾಗದ ಘಟನೆ….

ಕಳ್ಳತನ, ಮೋಸ, ವಂಚನೆ ಇವೆಲ್ಲ ಜಗತ್ತಿನ ಯಾವ ಮೂಲೆಗೆ ಹೋದ್ರೂ ಇದೆ ಕಣ್ರೀ. ಮುಂದುವರಿದ ರಾಷ್ಟ್ರಗಳು, ಹಿಂದುಳಿದ ರಾಷ್ಟ್ರಗಳು ಅನ್ನುವ ಮಾತೇ ಇಲ್ಲ. ಇವುಗಳ ಸಂಖ್ಯೆ ಹೆಚ್ಚು ಕಮ್ಮಿ ಇರಬಹುದು ಅಷ್ಟೇ. ಒಂದೊಂದು ಕಡೆ ಹೆಚ್ಚು, ಒಂದೊಂದು ಕಡೆ ಕಮ್ಮಿ. ಬಡತನ, ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಸಿಗದಿರುವುದು…ಹೀಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ದೊಡ್ಡ ಪಟ್ಟಿಯೆ ಬೆಳೆಯುತ್ತದೆ.

ಈ ವಿಷಯ ಏಕೆ ಬಂತು ಅಂದ್ರೆ, ಸಿಂಗಾಪುರದಲ್ಲಿ ಮೋಸ ವಂಚನೆಗಳು ಬಹಳ ಕಮ್ಮಿ. ಟ್ಯಾಕ್ಸಿಯಲ್ಲಿ ಮೀಟರ್ ಮೋಸ, ಮನೆ ಹುಡುಕುವಾಗ ಮೋಸ, ಕಳ್ಳತನ, ಮನೆ ದರೋಡೆ ಇವೆಲ್ಲ ತುಂಬಾ ಅಂದ್ರೆ ತುಂಬಾನೆ ಕಮ್ಮಿ ಅಂತ ಎಲ್ಲರೂ ಹೇಳ್ತಾರೆ ಮತ್ತು ನನ್ನ ಗಮನಕ್ಕೂ ಬಂದಿದೆ. ಆದರೆ ಅಲ್ಲಿ ಇಲ್ಲಿ ಅಪರೂಪಕ್ಕೆ ನಡೆಯುವ ಒಂದು ಮೋಸಕ್ಕೆ ನಾವು ಬಲಿಯಾಗಿದ್ದೀವಿ ಅನ್ನುವುದು ಸತ್ಯ. ಅದನ್ನೇ ನಾನು ಇಲ್ಲಿ ಹೇಳುವುದಕ್ಕೆ ಹೊರಟಿರುವುದು.

ನಾನು ಇಲ್ಲಿ ಬರುವ ಹೊಸದರಲ್ಲಿ ನನ್ನವರು ಒಂದು ಮನೆಯನ್ನು ನೋಡಿ ಅವನು ತಾನೇ ಓನರ್ ಅನ್ನುವ ಕಾಗದ ಪಾತ್ರಗಳನ್ನು ತೋರಿಸಿದ ನಂತರ (ಆ ಮನೆಯಲ್ಲಿ ಆತನ ಜೊತೆ ಆತನ ಕುಟುಂಬವೂ ಇರುವುದನ್ನು ನೋಡಿಕೊಂಡು) ಡೆಪಾಸಿಟ್ ಹಣ ಅಡ್ವಾನ್ಸ್ ಆಗಿ ಕೊಟ್ಟು, ಅವನು ಕೊಟ್ಟ ಕಾಗದ ಪತ್ರದಲ್ಲಿ ಅಗ್ರೀಮೆಂಟ್ ಮಾಡಿಕೊಂಡು ಬಂದರು. ಅವನು ಕೀ ಕೊಡ್ತೀನಿ ನೀವು ಇಂಥ ದಿನ ಶಿಫ್ಟ್ ಆಗಬಹುದು ಅಂದು ಹೇಳಿದ ದಿನ ಆತನಿಗೆ ಕಾಲ್ ಮಾಡಿದ್ರೆ, ಮೊಬೈಲ್ ಸ್ವಿಚ್ ಆಫ್. ಅವನು ಎಲ್ಲೋ ಹೊರಗೆ ಹೋಗಿರಬಹುದು ನಾಳೆ ಹೋಗೋಣ ಅಂದುಕೊಂಡು ಸುಮ್ಮನಾದರು. ಮರುದಿನವೂ ಇದೆ ಹಾಡು. ಆಗ ಚಿಂತೆ ಪ್ರಾರಂಭವಾಯಿತು. (ಯಾರದಾದರೂ ಮನೆಗೆ ಹೋಗುವಾಗ ಅವರು ಆ ಸಮಯದಲ್ಲಿ ಇರುತ್ತಾರೋ ಇಲ್ಲವೋ ಎಂದು ವಿಚಾರಿಸಿಕೊಂಡು ಹೋಗುವುದಕ್ಕಾಗಿ ಕಾಲ್ ಮಾಡಿಕೊಂಡು ಹೋಗುವುದು) ಅದರ ಮಾರನೆಯ ದಿನ ಶನಿವಾರ ಏನಾದರೂ ಆಗಲಿ ಅಂದುಕೊಂಡು ಅವರ ಮನೆಗೆ ಹೋದರೆ ಅಲ್ಲಿ ಮನೆಗೆ ಬೀಗ ಹಾಕಿತ್ತು ಮತ್ತು ಅಲ್ಲಿ ಒಬ್ಬ ಮನುಷ್ಯ ಯಾರಿಗೋ ಕಾಯುತ್ತಿರುವವನ ಹಾಗೆ ನಿಂತಿದ್ದ. ಇವರು ಹೋಗಿ ಆ ಮನುಷ್ಯನನ್ನು ನೀನು ಈ ಮನೆಯವರ ಪರಿಚಯಸ್ತನೇ ಎಂದು ವಿಚಾರಿಸಿದಾಗ, ಅವನು ಹೇಳಿದ ಮಾತು ಕೇಳಿ ನನ್ನವರಿಗೆ ಶಾಕ್ ಹೊಡೆದಂತಾಗಿತ್ತು.

ವಿಷಯವೇನೆಂದರೆ ಓನರ್ ಅನ್ನಿಸಿದ ಮನುಷ್ಯ, ಆ ಇನ್ನೊಬ್ಬ ಕಾಯುತ್ತಿರುವ ಮನುಷ್ಯನಿಗೂ ಮನೆ ಕೊಡುತ್ತೇನೆ ಅಂತ ಹೇಳಿ ಹಣ ತೆಗೆದುಕೊಂಡಿದ್ದ. ( ಓನರ್ ಎಂದು ಹೇಳಿದ ಮನುಷ್ಯ ಚೀನೀ ಅಥವಾ ಮಲಾಯ್, ಇನ್ನೊಬ್ಬ ಮೋಸಹೋದ ಮನುಷ್ಯ ಶ್ರೀಲಂಕನ್ ) ಇದರಲ್ಲಿ ಮೋಸವಿದೆ ಅಂದುಕೊಂಡು ಇಬ್ಬರು ಸೇರಿಕೊಂಡು ಪೋಲಿಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟು, ಅವನು ಕೊಟ್ಟ ಅಗ್ರೀಮೆಂಟ್ ಡೀಟೇಲ್ಸ್ ಎಲ್ಲ ಕೊಟ್ಟು ಬಂದರು. ಆಗ ತಿಳಿದ ವಿಷಯವೆಂದರೆ ಆ ಮನುಷ್ಯ ಮನೆಯ ಓನರ್ ಅಲ್ಲ. ಆತ ತೋರಿಸಿದ, ಕೊಟ್ಟ, ಕಾಗದ ಪತ್ರಗಳೆಲ್ಲ ನಕಲಿ. ಅವನು ಮೋಸ ಮಾಡಲು ಪ್ಲಾನ್ ಮಾಡಿದ್ದ, ನಾವು ಆತನ ಮೋಸಕ್ಕೆ ಬಲಿಯಾಗಿದ್ದೆವು. ಆ ಸಂದರ್ಭದಲ್ಲಿ ನಾವು ಪಟ್ಟ ಪಾಡು………….ಮುಂಚೆ ಇರುವ ಜಾಗ ಖಾಲಿ ಮಾಡಬೇಕು, ಬೇರೊಂದು ಮನೆ ಬೇಗ ಹುಡುಕಬೇಕು, ಕಷ್ಟ ಪಟ್ಟು ದುಡಿದ ಹಣವನ್ನು ಕಳೆದುಕೊಂಡ ನೋವು, ಬೇರೊಂದು ಮನೆಗೆ ಹಣ ಒದಗಿಸಬೇಕು. ಎಲ್ಲ ಕಷ್ಟಗಳು ಒಂದೇ ಸರಿ ಬಂದು ತಲೆಯ ಮೇಲೆ ಕುಳಿತಿದ್ದವು. ಅಂತೂ ಬೇರೆ ಮನೆ ಸಿಗುವ ವರೆಗೆ ಸ್ವಲ್ಪ ದಿನ ಸ್ನೇಹಿತರೊಬ್ಬರ ಸಹಾಯದಿಂದ ಅವರ ಮನೆಯಲ್ಲಿ ಉಳಿದುಕೊಂಡು, ಅಲ್ಲಿಂದ ಈ ಮನೆಗೆ ಬಂದು ನಿಟ್ಟುಸಿರು ಬಿಟ್ಟೆವು.

8-10 ತಿಂಗಳುಗಳ ವರೆಗೂ ಆ ಮೋಸಗಾರನ ಸುಳಿವೇ ಇಲ್ಲ. ಪೋಲಿಸ್ ಸ್ಟೇಷನ್ ಗೆ ಕಾಲ್ ಮಾಡಿದರೆ, ಸಿಗಲಿಲ್ಲ ಅನ್ನುವ ಉತ್ತರ. 2 ತಿಂಗಳ ಮುಂಚೆ ಧಿಡೀರ್ ನೆ ಒಂದು ದಿನ ಪೋಲಿಸ್ ಸ್ಟೇಷನ್ ನಿಂದ ಕಾಲ್ ಬಂತು. ಆ ಮೋಸಗಾರ ಸಿಕ್ಕಿದ್ದಾನೆ. ಆತನ ಮೇಲೆ ಕೇಸ್ ಹಾಕಿದ್ದೇವೆ. ನಿಮ್ಮ ಹಾಗೆ ಇನ್ನೂ ಕೆಲವು ಜನಕ್ಕೆ ಆತ ಮೋಸ ಮಾಡಿದ್ದಾನೆ ಅಂತ. ಆಗ ಸ್ವಲ್ಪ ಸಮಾಧಾನ, ಕಳೆದುಕೊಂಡ ಹಣ ಸಿಗುವುದೆಂಬ ಆಸೆ ಚಿಗುರಿತು.

ನಂತರ 1-2 ಸರಿ ಕಾಲ್ ಮಾಡಿ ಕೇಳಿದಾಗ ಕೇಸ್ ನಡೆಯುತ್ತಿದೆ ಎಂಬ ಉತ್ತರ. ಈಗ ಒಂದು 8-10 ದಿನಗಳ ಮುಂಚೆ ಆತನ ಮೇಲೆ ಹಾಕಿದ ಕೇಸ್ ಮುಗಿಯಿತು, ಆತನನ್ನು ಜೈಲ್ ಗೆ ಹಾಕಿದ್ದಾರೆ, ಯಾರಿಗೂ ಕೊಡಲು ಆತನ ಬಳಿ ಹಣ ಇಲ್ಲ ಎನ್ನುವ ವಿಷಯ ತಿಳಿಯಿತು. ಇನ್ನೊಬ್ಬ ಮೋಸ ಹೋದ ಮನುಷ್ಯ (ಶ್ರೀಲಂಕನ್) ಸ್ಟೇಷನ್ ಗೆ ಹೋಗಿ ಆತನನ್ನು ಜೈಲ್ ಗೆ ಹಾಕಿರುವುದನ್ನು ಕನ್‌ಫರ್ಮ್ ಮಾಡಿಕೊಂಡು ಬಂದ.

ನಮ್ಮ ಹಣವಂತೂ ನಮಗೆ ತಿರುಗಿ ಬರಲಿಲ್ಲ, ಬರುವುದು ಇಲ್ಲ ಏಕೆಂದರೆ ಮೋಸಗಾರನ ಬಳಿ ಹಣ ಇಲ್ಲ. ಇನ್ನೂ ಎಷ್ಟೋ ಜನರಿಗೆ ಆತನಿಂದ ಆಗಬಹುದಾದ ಮೋಸವನ್ನು ತಪ್ಪಿಸಿದ ಪುಣ್ಯ ಮತ್ತು ಮೋಸಗಾರನಿಗೆ ಶಿಕ್ಷೆ ಕೊಡಿಸಿದ ಸಮಾಧಾನವಷ್ಟೇ ನಮ್ಮ ಪಾಲಿಗೆ.

ಆತನನ್ನು ಹಿಡಿದು ಬರೇ 2 ತಿಂಗಳಲ್ಲಿ ಕೋರ್ಟ್ ಕೇಸ್ ಮುಗಿಸಿ ಆತನನ್ನು ಜೈಲ್ ಗೆ ಕಳಿಸಿದ್ದು. ಒಮ್ಮೆಯೂ ಈ ನಡುವೆ ನಮ್ಮನ್ನು ಪೋಲೀಸ್ ಸ್ಟೇಷನ್ ಗೆ ಬಾ, ಅಥವಾ ಕೋರ್ಟ್ ಗೆ ಬಾ ಅಂತ ಕರೆಯದೇ ಇದ್ದಿದ್ದು, ಇವೆಲ್ಲ ನನಗೆ ಇಲ್ಲಿನ ಕಾನೂನಿನ ಪರಿಚಯ ಮಾಡಿ ಕೊಟ್ಟಿತ್ತು. ನಮ್ಮ ಉೂರಿನಲ್ಲಿ ಒಂದು ಸಣ್ಣ ಕಳ್ಳತನದ ಕೇಸ್ ವರ್ಷಗಟ್ಟಲೇ ನಡೆಸುವುದು, 50 ಸರಿ ಕಂಪ್ಲೇಂಟ್ ಕೊಟ್ಟವನನ್ನು ಅಲೆಸುವುದು, ನೋಡಿದ ನನಗೆ ಈ ಸಿಸ್ಟಂ ಇಷ್ಟವಾಗಿತ್ತು. ಇದೇ ಕಾರಣದಿಂದಲೋ ಏನೋ ಇಲ್ಲಿ ಕಳ್ಳತನ, ಮೋಸ ವಂಚನೆಗಳು ಕಡಿಮೆ. ತಪ್ಪಿತಸ್ತರಿಗೆ ಶಿಕ್ಷೆ ಅಗಲೆ ಬೇಕಲ್ಲವೇ? ಏನೇ ಅಂದುಕೊಂಡರೂ ನಮ್ಮ ಹಣಕ್ಕಂತು ಎಳ್ಳು ನೀರು ಬಿಟ್ಟಿದ್ದು ನಿಜ. ಇದು ಒಂದು ಮರೆಯಲಾಗದ ಘಟನೆ…….