ಗಜಮುಖ ಗಣಪಾ

ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು…

ಹಬ್ಬ ಬಂತು, ಹಬ್ಬ ಬಂತು ಅಂತ ಹಬ್ಬದ ತಯಾರಿ ಮಾಡಿ ಮುಗಿಸೋ ಹೊತ್ತಿಗೆ ಹಬ್ಬ ಮುಗಿದೆ ಹೋಯ್ತು ನೋಡಿ, ನೋಡ್ತಾ ನೋಡ್ತಾ ನಮ್ಮ ಗಣೇಶನ ಹಬ್ಬ ಮುಗಿದು 5 ದಿನ ಕಳೆದೆ ಹೋಯ್ತು. ನಮ್ಮ ಮನೆಯ ಹಬ್ಬದ ಸಮಾಚಾರವನ್ನು ಸ್ನೇಹಿತರಾದ ನಿಮ್ಮೆಲ್ಲರೊಂದಿಗೂ ಹಂಚಿಕೊಳ್ಳೋಣ, ತಮಗೆಲ್ಲರಿಗೂ ತಡವಾದರೂ ಪರವಾಗಿಲ್ಲ ಸಂದೇಶ ತಿಳಿಸೋಣ ಅಂತ ಬರೀತಾ ಇದೀನಿ. ನೀವೆಲ್ಲರೂ ಹಬ್ಬ ಚೆನ್ನಾಗೆ ಅಚರಿಸಿರ್ತೀರ. ನಾವು ಕೂಡ ಹಬ್ಬದ ಆನಂದ, ಮತ್ತು ಭಕ್ಷ್ಯ ಗಳನ್ನು ಸವಿಯೋದಕ್ಕೆ ಕೆಲವು ಸ್ನೇಹಿತರನ್ನು ಮನೆಗೆ ಕರೆದು, ಅವರೊಂದಿಗೆ ಜೊತೆಗೂಡಿ ಹಬ್ಬದ ಆಚರಣೆ ಮಾಡಿದ್ವಿ. ನಮ್ಮ ಮನೆಗೆ ಬಂದು ಹರಸಿ, ಸಂತಸವನ್ನು ನೀಡಿದ ವಿಘ್ನ ವಿನಾಶಕ ವಿನಾಯಕ, ತಮಗೆಲ್ಲರಿಗೂ ಕೂಡ ಒಳ್ಳೆಯದನ್ನು ಮಾಡಲಿ.

ಬನವಾಸಿಯ ಅರ್ಧ ಗಣಪತಿ
1

ಪ್ರಥಮಮ್ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್
ತ್ರತೀಯಂ ಕೃಷ್ಣಪಿಂಗಾಕ್ಷಂ ಗಜವಕ್ಟ್ರಮ್ ಚತುರ್ಥಕಮ್
ಲಂಬೋದರಮ್ ಪಂಚಾಮಮ್ ಚ ಶಷ್ಟಮ್ ವಿಕತಮೆವಚ
ಸಪ್ತಮಮ್ ವಿಘ್ನರಾಜೇಂದ್ರಮ್ ಧೂಮ್ರವರ್ಣಂ ತಥಾಶ್ಟಕಮ್
ನವಮಮ್ ಬಾಲಚಂದ್ರಮ್ ಚ ದಶಮಾಮ್ ತು ವಿನಾಯಕಮ್
ಏಕಾದಶಮ್ ಗಣಪತಿಮ್ ದ್ವಾದಶಮ್ ತು ಗಜಾನನಮ್
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಾಹ ಪಠೆನ್ನರಹ
ನ ಚ ವಿಘ್ನ ಭಯಂ ಹರಮ್ ತಸ್ಯ ಸಿದ್ಧಿ ಕರಮ್ ಪ್ರಭೊ

ನಮ್ಮ ಮನೆಯ ಗಣೇಶ ಚೌತಿ
Ganesh chaturthi

ಬದುಕಿನ ಮುಖಗಳು

ಬದುಕಿನ ಮುಖಗಳ ಪರಿಚಯವನ್ನು ಕೆಲವೊಮ್ಮೆ ನಮ್ಮ ಜೀವನದ ಸಣ್ಣ ಸಣ್ಣ ಘಟನೆಗಳು ಮಾಡಿ ಕೊಡುತ್ತವೆ. ಅಂಥದ್ದೇ ಒಂದು ಪುಟ್ಟ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ..

ಮೊನ್ನೆ ಮೊನ್ನೆ ನಾವು ಮನೆ ಚೇಂಜ್ ಮಾಡಿದಾಗ ಶಿಫ್ಟಿಂಗ್ ಕಷ್ಟಕ್ಕಿಂತ ನಮಗೆ ಎದುರಾಗಿದ್ದು ಉುಟದ ಚಿಂತೆ. ಮನೆಯ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿ, ಹೊಸ ಮನೆಗೆ ತಂದು ಬಿಚ್ಚಿ ಜೋಡಿಸುವ ತನಕ ನಾವು ಅಡುಗೆ ಮಾಡುವಂತಿಲ್ಲ. ಬೇಗ ಹೊಟೆಲ್ ಗೆ ಹೋಗಿ ಉುಟ ಮಾಡಿಕೊಂಡು ಬಂದುಬಿಡೋಣ ಅಂದ್ರೆ, ಮನೆಯಿಂದ ಅರ್ಧ ಗಂಟೆ ಪ್ರಯಾಣ ಮಾಡಿದ್ರೆ ಮಾತ್ರ ನಮ್ಮ ಸಸ್ಯಾಹಾರದ ಹೊಟೆಲ್ ಸಿಗುತ್ತೆ. ಹೋಗ್ಲಿ ಮನೆಗೆ ಪಾರ್ಸಲ್ ತರಿಸೋಣ ಅಂದ್ರೆ ಇಬ್ಬರಿಗೆ ತರಿಸುವ ಉುಟದ ಹಣಕ್ಕಿಂತ ಮನೆಗೆ ತಂದುಕೊಡುವ ಖರ್ಚೆ ಹೆಚ್ಚಾದಂತೆ ತೋರಿತು. ಮನೆಯ ಹತ್ತಿರ ಇರುವ food court ಎಂಬಲ್ಲಿ ಚೀನೀಯರ, ಮಲೈ ಜನರ ಮಾಂಸದ ಉುಟದ ಭಂಡಾರ. ಅಲ್ಲೇ ಇರುವ ಇನ್ನೊಂದು ಚಿಕ್ಕ ಇಂಡಿಯನ್ ಮುಸ್ಲಿಮ್ ಕ್ಯಾಂಟೀನ್ ನಲ್ಲಿ ಸಿಗುವುದು ಕೂಡ ಮಾಂಸದ ಉುಟವೇ…ಎಣ್ಣೆಯಲ್ಲಿ ಅದ್ದಿದನ್ತಹ ಪ್ಲೇನ್ ಪರಾಟ ಮತ್ತು ದಾಲ್ ಇದು ಮಾತ್ರ ಅಲ್ಲಿ ಸಿಗುವ ಮಾಂಸವಿಲ್ಲದ ಉುಟ.

ಮನೆ ಶಿಫ್ಟ್ ಮಾಡಿ ಜೋಡಿಸುವುದೋ ಅಥವಾ 3 ಹೊತ್ತು ಅರ್ಧ ಗಂಟೆ ಪ್ರಯಾಣ ಮಾಡಿ ಉುಟ ಮಾಡಿಕೊಂಡು ಮತ್ತೆ ಅರ್ಧ ಗಂಟೆ ಪ್ರಯಾಣ ಮಾಡಿ ಮನೆ ತಲುಪುವುದೋ ಅನ್ನುವ ಸಮಸ್ಯೆ. ಹೀಗೆ ಉುಟದ ಚಿಂತೆ ಮಾಡಿಕೊಂಡು ಕುಳಿತಾಗ ಅನೇಕ ಯೋಚನೆಗಳು, ನೆನಪುಗಳು ತಲೆಯಲ್ಲಿ ಸುಳಿದಾಡಿದವು.

ನಾವು ನಮ್ಮ ಉುರಲ್ಲಿದ್ದರೆ ಯಾರಾದರೂ ನೆಂಟರು, ಇಷ್ಟರು, ಸ್ನೇಹಿತರು ಮನೆಗೆ ಬಂದು ಉುಟ ಮಾಡಿಕೊಂಡು ಹೋಗಿ ಅಂತ ಕರೀತಾ ಇದ್ರು, ಇಲ್ಲ ಅಂದರು ಅಲ್ಲಿ ಸಸ್ಯಾಹಾರಿ ಹೋಟೆಲ್‍ಗಳಿಗಂತು ಬರವಿಲ್ಲ.. ಇಲ್ಲೂ ಕೂಡ ಯಾರಾದರೂ ನಮ್ಮ ಮನೆಗೆ ಬಂದು ಉುಟ ಮಾಡಿಕೊಂಡು ಹೋಗಿ ಅಂತ ಕರೆಯ ಬಾರದೇ ಅಂತ ಅನ್ನಿಸಿದ್ದು ಸುಳ್ಳಲ್ಲ. ನಾನು ಮೊದಲು ಉುರಲ್ಲಿದ್ದಾಗ ಎಷ್ಟೊಂದು ಜನರ ಮನೆಗೆ ಉುಟಕ್ಕೆ ಹೋಗುವುದನ್ನು ಬೇಕೆಂದೇ ತಪ್ಪಿಸಿಕೊಂಡಿದ್ದೆ. ಅಪ್ಪ, ಅಮ್ಮ ನೀವು ಹೋಗಿಬನ್ನಿ ನಾನು ಬರೋದಿಲ್ಲ, ಮನೆಯಲ್ಲೇ ಇರ್ತೇನೆ ಅಂತ ಬೇಕಷ್ಟು ಸರಿ ಅಂದಿದ್ದೆ. ಅಕ್ಕ ಪಕ್ಕದ ಮನೆಗಳಲ್ಲಿ ವಿಶೇಷವಿದ್ದಾಗ, ಮನೆಗೆ ಬಂದು ಕರೆದು ಹೋದರು ಸಹ ಯಾರು ಹೋಗ್ತಾರೆ ಅಂತ ಬಹಳಷ್ಟು ಸಲ ಮನೆಯಲ್ಲೇ ಉಳಿದಿದ್ದೆ. ಈಗ ಅವರೆಲ್ಲರ ನೆನಪು ಕಣ್ಣ ಮುಂದೆ ಬಂತು. ಉುರಲ್ಲಿ ಇದ್ದಾಗ, ಕರೆದಾಗ ಹೋಗಿಲ್ಲ. ಈಗ ಹೋಗಬಹುದಿತ್ತು ಆದರೆ ಯಾರು ಕರೆಯುತ್ತಿಲ್ಲ … ಇವೇ ಅಲ್ಲವೇ ಜೀವನದ ಚಿಕ್ಕ ಪುಟ್ಟ ಬದಲಾವಣೆಯ ಮುಖಗಳು?

ಆಮೇಲೆ ಬೇರೆ ದಾರಿಯಿಲ್ಲವಾದ್ದರಿಂದ ಒಂದು ಹೊತ್ತು ಪರಾಟ, ಇನ್ನೊಂದು ಹೊತ್ತು ಅರ್ಧ ಗಂಟೆ ಪ್ರಯಾಣ, ಇನ್ನೊಂದು ಹೊತ್ತು ಮನೆಯಲ್ಲಿ ಕಾರ್ನ್‌ಫ್ಲೇಕ್ಸ್ ತಿಂದು 2 ದಿನ ಕಳೆಯಿತು. ಮೂರನೆಯ ದಿನ ಮನೆಯಲ್ಲಿ ಅಡುಗೆ ಮಾಡಿದಾಗ, ಅದನ್ನು ಉುಟ ಮಾಡುವಾಗ ಏನೋ ಸಂಭ್ರಮ, ಯಾವುದೋ ಸಂತೋಷ…ಬಣ್ಣಿಸಲಾಗದು…….

ಒಳ್ಳೆಯತನ

ಒಂದು ಉೂರು, ಅಲ್ಲೊಂದು ಕುಡಿಯುವ ನೀರಿನ ಬಾವಿ, ಬಾವಿಯ ಬಳಿ ಒಂದು ಹುತ್ತ, ಹುತ್ತದಲ್ಲಿ ಒಂದು ಹಾವಿನ ವಾಸ. ಹಾವು ಆ ಉರಿನವರಿಗೆ ಯಾರಿಗೂ ಆ ಕಡೆಗೆ ಸುಳಿಯಾಲು ಬಿಡುತ್ತಿರಲಿಲ್ಲ. ಅಪ್ಪಿ ತಪ್ಪಿ ಬಂದರೆ ಕಚ್ಚುತ್ತಿತ್ತು. ಉೂರಿನವರು ಅದರ ಉಪದ್ರವ ತಡೆಯಲಾರದೇ ಬೇಸತ್ತಿದ್ದರು. ಅಷ್ಟರಲ್ಲಿ ಒಬ್ಬ ಸನ್ಯಾಸಿ ಆ ಉುರಿಗೆ ಆಗಮಿಸಿದ. ಆತನನ್ನು ನೋಡಲು ಹೋದ ಉೂರಿನ ಜನರು ಹಾವು ನೀಡುತ್ತಿರುವ ಕಷ್ಟವನ್ನು ಹೇಳಿಕೊಂಡರು. ಅದನ್ನು ಕೇಳಿದ ಸನ್ಯಾಸಿ, ಉರಿನ ಜನ ನಿಲ್ಲು ಎಂದರು ಕೇಳದೇ, ಬಾವಿಯ ಬಳಿ ಹೋದ. ಆತನನ್ನು ನೋಡಿದ ಹಾವು ಹೆದರಿಸುತ್ತಾ ಕಚ್ಚಲು ಬಂತು. ಸ್ವಲ್ಪವೂ ಧೃತಿಗೆಡದ ಸನ್ಯಾಸಿ ಆ ಹಾವನ್ನು ಎದುರಿಸಿ ನಿಂತು ಅದಕ್ಕೆ ” ಇಷ್ಟು ಜನಕ್ಕೆ ಕಷ್ಟ ನೀಡಿ ನೀನು ಏನು ಪಡೆಯುವೆ, ನೀನು ಕೆಟ್ಟದ್ದು ಮಾಡಿದರೆ ಅದರ ಫಲವು ಕೆಟ್ಟದ್ದೇ ಆಗುವುದು, ನೀನು ಇಲ್ಲಿ ಇರುವೆ ಎಂಬ ಕಾರಣಕ್ಕಾಗಿ ಜನರನ್ನು ಬಾವಿಯ ಕಡೆ ಬರದಂತೆ ತಡೆಯುವುದು ಸರಿಯಲ್ಲ. ಅವರ ಪಾಡಿಗೆ ಅವರು ಬರಲಿ, ನಿನ್ನ ಪಾಡಿಗೆ ನೀನು ಬದುಕು, ಕಚ್ಚಬೇಡ, ಹಿಂಸೆಯನ್ನು ಬಿಟ್ಟುಬಿಡು” ಎಂದು ಹೇಳಿದ. ಸನ್ಯಾಸಿಯ ಮಾತನ್ನು ಕೇಳಿದ ಹಾವು ಮನಃ ಪರಿವರ್ತನೆ ಹೊಂದಿ, ಆತ ನುಡಿದಂತೆ ಇರುವೆನೆಂದು ಮಾತು ಕೊಟ್ಟಿತು. ಸನ್ಯಾಸಿ ಬೇರೊಂದು ಉುರಿಗೆ ಹೊರಟು ಹೋದ.

ಇತ್ತ ಹಾವು ಸನ್ಯಾಸಿಗೆ ಕೊಟ್ಟ ಮಾತಿನಂತೆ ಹಿಂಸೆಯನ್ನು ಬಿಟ್ಟು ಬಿಟ್ಟಿತು. ಆಹಾರಕ್ಕಾಗಿಯೂ ಪ್ರಾಣಿಗಳ ಬೇಟೆಯಾಡುವುದನ್ನು ನಿಲ್ಲಿಸಿತು. ಅಲ್ಲಿ ಇಲ್ಲಿ ಬಿದ್ದಿರುವ, ಸಿಕ್ಕಿದ ಆಹಾರ ತಿನ್ನುತ್ತಿತ್ತು. ಜನರಿಗೆ ಕಚ್ಚುತ್ಟಿರಲಿಲ್ಲ, ಹೆದರಿಸುತ್ತಿರಲಿಲ್ಲ. ಸ್ವಲ್ಪ ದಿನ ಮೊದಲಿನ ಭಯದಲ್ಲೇ ಇದ್ದ ಜನ, ಸ್ವಲ್ಪ ದಿನಗಳ ನಂತರ ಏನೂ ಮಾಡದ ಹಾವಿಗೆ ಹೆದರುವುದನ್ನು ನಿಲ್ಲಿಸಿದರು. ಬಾವಿಗೆ ನೀರು ತರಲು ಹೋಗಲಾರಂಭಿಸಿದರು. ಮಕ್ಕಳು ಹಾವಿನ ಸಮೀಪದಲ್ಲೇ ಆಡಲಾರಂಭಿಸಿದರು. ದಷ್ಟ ಪುಷ್ಟವಾಗಿದ್ದ ಹಾವು, ಬೇಟೆಯಾಡುವುದನ್ನು ಬಿಟ್ಟು ಸರಿಯಾದ ಆಹಾರ ಸಿಗದೆ ಕೃಶವಾಯಿತು. ದಿನ ಕಳೆದಂತೆ ಮಕ್ಕಳು ಹಾವನ್ನು ಉಪಯೋಗಿಸಿಕೊಂಡು ಆಟವಾಡತೊಡಗಿದರು. ಹಾವು ದಾರಿಯಲ್ಲಿ ಮಲಗಿದ್ದರೆ ಎತ್ತಿ ಬದಿಗೆ ಬಿಸಾಡಿ ಮುಂದೆ ಹೋಗುತ್ತಿದ್ದರು ಜನ. ಹೀಗೆ ಒಂದು ದಿನ ಆ ಬಾವಿಯ ಹಗ್ಗ ತುಂಡಾಯಿತು. ನೀರು ಎಳೆಯಲು ಹಗ್ಗ ಗಿಡ್ದವಾದ ಕಾರಣ ಬದಿಯಲ್ಲೇ ಮಲಗಿದ್ದ ಹಾವನ್ನು ಹಗ್ಗದ ಜೊತೆ ಗಂಟು ಹಾಕಿ ನೀರೆಳೆಯಲು ಪ್ರಾರಂಭಿಸಿದರು. ಅದೇ ಸಮಯಕ್ಕೆ ಬೇರೆ ಉುರಿಗೆ ಹೋದ ಸನ್ಯಾಸಿ ಮರಳಿ ಆ ಉುರಿಗೆ ಬಂದು, ಹಾವನ್ನು ನೋಡಲು ಬಾವಿಯ ಸಮೀಪ ಹೋದ. ಹಾವಿನ ಸ್ಥಿತಿ ನೋಡಿ ಆತನಿಗೆ ಪಸ್ಚಾತ್ತಾಪವಾಯಿತು. ಜನರಿಂದ ಹಾವನ್ನು ಬಿಡಿಸಿ, ಇದೇನು ನಿನ್ನ ಪರಿಸ್ಥಿತಿ ಎಂದು ಕೇಳಿದ. ಹಾವು ಹೇಳಿತು ” ತಾವು ನನಗೆ ಹಿಂಸೆ ಮಾಡಬೇಡ ಎಂದಿರಿ, ನಾನು ಬೇಟೆಯಾಡುವುದನ್ನು ನಿಲ್ಲಿಸಿದೆ. ಆಹಾರ ಸರಿಯಾಗಿ ದೊರಕಲಿಲ್ಲ. ನಾನು ಏನೂ ಮಾಡದ ಕಾರಣ ಜನರಲ್ಲಿ ನನ್ನ ಮೇಲಿನ ಭಯ ಹೊರಟು ಹೋಯಿತು. ಅವರು ನನ್ನನ್ನು ಹೀಗೆ ಹಿಂಸಿಸುತ್ತಿದ್ದಾರೆ ಎಂದಿತು. ಅದನ್ನು ಕೇಳಿದ ಸನ್ಯಾಸಿ ” ನಾನು ನಿನಗೆ ಕಚ್ಚಬೇಡ ಎಂದೆನೆ ಹೊರತು ಬುಸ್ ಎನ್ನಬೇಡ ಎಂದೇನಾ? ನಿನ್ನ ರಕ್ಷಣೆಗಾಗಿ ನಿನಗೆ ಅವಶ್ಯಕವಾಗಿ ಬೇಕಾಗುವ ಆಹಾರವನ್ನು ತಿನ್ನ ಬೇಡ ಎಂದೇನಾ? ಕಚ್ಚಬೇಡ ಎಂದೆ ಇದರರ್ಥ ಹೆದರಿಸಬೇಡ ಎಂದಲ್ಲ. ಒಳ್ಳೆಯವನಾಗು ಆದರೆ ಅತಿಯಾಗಿ ಒಳ್ಳೆಯವನಾಗಬೇಡ. ಜಗತ್ತಿನಲ್ಲಿ ಬದುಕುವುದು ಅಸಾಧ್ಯವಾಗುತ್ತದೆ ” ಎಂದ. ಹಾವು ಆತನ ಮಾತಿನ ಅರ್ಥ ತಿಳಿದು ಅದರಂತೆಯೇ ತನ್ನ ಜೀವನ ಸಾಗಿಸಿತು.

ಈ ಕಥೆಯ ಸಾರಾಂಶ ಏನೆಂದರೆ ಒಳ್ಳೆಯತನ ಬೇಕು ಆದರೆ ಅತಿಯಾದ ಒಳ್ಳೆಯತನ ಬೇಡ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಈ ಮಾತು ಅಕ್ಷರಶಹ ನಿಜ ಎಂದು ಅನ್ನಿಸುತ್ತದೆ. ಹಿಂದೆ ತ್ರೇತಾಯುಗದ ರಾಮನ ಕಾಲದಲ್ಲಿ ಎಷ್ಟು ಒಳ್ಳೆಯತನ ಇದ್ದರು ನಡೆಯುತ್ತಿತ್ತು. ಆದರೆ ಈಗ ಹಾಗಲ್ಲ. ಎಷ್ಟು ಬೇಕೋ ಅಷ್ಟು ಒಳ್ಳೆಯತನ ಇದ್ದರೆ ಸಾಕು. ನಾವು ಅತಿಯಾಗಿ ಒಳ್ಳೆಯವರಾಗಿದ್ದರೆ ನಮ್ಮ ಸುತ್ತಲಿನವರು ಒಳ್ಳೆಯವರಿರುತ್ತಾರೆ ಎಂದೇನಿಲ್ಲವಲ್ಲ. ನಾವು ಬಹಳ ಒಳ್ಳೆಯವರಾಗಿದ್ದರೆ ಅದರಿಂದ ತಮ್ಮ ಉಪಯೋಗ ಪಡೆದುಕೊಳ್ಳಲು ಪ್ರತಿಯೊಬ್ಬರೂ ಕಾಯುತ್ತಿರುತ್ತಾರೆ. ಇದರಿಂದ ನಮ್ಮ ಜೀವನ ನಡೆಸುವುದು ದುಸ್ತರವಾಗುತ್ತದೆ. ಅತಿಯಾದ ಒಳ್ಳೆಯ ಗುಣ ಹೊಂದಿ ಇತರರಿಗೆ ಒಳ್ಳೆಯದನ್ನು ಮಾಡುತ್ತಲೇ ಜೀವನ ಸಾಗಿಸುತ್ತೇನೆ ಎನ್ನುವವರು ಸನ್ಯಾಸಿಯಾಗಿ ಜೀವನ ಸಾಗಿಸುವುದೇ ಸರಿ ಎನ್ನುವಂತಾಗಿಬಿಡುತ್ತದೆ.

ಇವಳ ಹಿಂದಿನ ಬರಹದಲ್ಲಷ್ಟೇ ಹೇಳಿದ್ದಳು ಇತರರಿಗೆ ಸಹಾಯ ಮಾಡಿ ಎಂದು, ಇಲ್ಲಿ ಹೀಗೆ ಹೇಳುತ್ತಿದ್ದಾಳೆ ಅಂತ ಗೊಂದಲಗೊಳ್ಳಬೇಡಿ. ನಾನಲ್ಲಿ ಹೇಳಿದ್ದು ನಿಮ್ಮ ಕೈಲಿರುವ ಹಣದಲ್ಲಿ ಸ್ವಲ್ಪ ಸಹಾಯ ಮಾಡಿ ಎಂದು. ಕೈಲಿರುವ ಎಲ್ಲ ಹಣವನ್ನು ನೀಡಿ ಎಂದು ಅಲ್ಲ. ಅದರರ್ಥ ಒಳ್ಳೆಯತನ ಬೇಕು (ಅತಿಯಾದ ಒಳ್ಳೆಯತನ ಬೇಡ) ಎಂದು. ಕಚ್ಚುವ ಹಾವಾಗಬೇಡಿ, ಅದರಂತೆಯೇ ಅತ್ಯಂತ ಸಾತ್ವಿಕವಾಗಿ ಕಷ್ಟ ಪಡುವ ಹಾವು ಆಗಬೇಡಿ. ಬುಸ್ ಎನ್ನುವ ಹಾವಾಗಿ. ಇಂದಿನ ಜಗತ್ತಿನಲ್ಲಿ ಹಾಗೆ ಬದುಕುವುದೇ ಸರಿ. ನಮ್ಮ ಅತಿಯಾದ ಒಳ್ಳೆಯತನ ಉಪಯೋಗಿಸಿಕೊಂಡು, ಜೊತೆಗೆ ಮೇಲಿಂದ ಒಂದು ಕಲ್ಲು ಎಂಬಂತೆ ನಮ್ಮನ್ನು ಕೆಳಗೆ ದೂಡುವ ಜನರಿಗೇನು ಕೊರತೆಯಿಲ್ಲ. ನಮ್ಮ ಒಳ್ಳೆಯತನದ ಭುಜವನ್ನೇ ಮೆಟ್ಟಿಲಾಗಿಸಿಕೊಂಡು ಮೇಲೆ ಹತ್ತಿದಮೇಲೆ ನಮ್ಮನ್ನು ಒದ್ದು ಹೋಗುವವರು ಇದ್ದಾರೆ. ನಾವು ಮಾತ್ರ ಇದ್ದಲ್ಲೇ ಇರುತ್ತೇವೆ. ಕಾರಣ ನಮ್ಮ ಅತಿಯಾದ ಒಳ್ಳೆಯತನ. ಆದ್ದರಿಂದ ಬದುಕಲು “ಕೆಟ್ತತನ ಬೇಡವೇ ಬೇಡ, ಒಳ್ಳೆಯತನ ಬೇಕು, ಅತಿಯಾದ ಒಳ್ಳೆಯತನ ಬೇಡ”
“Don’t ever be bad, be good, don’t be too good”

ಸಹಾಯ ಮಾಡಿ

ಎಲ್ಲ ಸ್ನೇಹಿತ, ಸ್ನೇಹಿತೆಯರಲ್ಲೂ ನನ್ನದೊಂದು ವಿನಂತಿ. ಇದೇನಪ್ಪ ಮೊನ್ನೆ ಮೊನ್ನೆ ಬ್ಲಾಗ್ ಬರೆಯೋಕೆ ಬಂದವಳು ಆಗಲೇ ಒಂದು ಬೇಡಿಕೆ ತಗೊಂಡು ಬಂದುಬಿಟ್ಟಿದ್ದಾಳೆ ಅಂದುಕೊಳ್ಳಬೇಡಿ. ನನ್ನ ಮನಸ್ಸಿಗೆ ತೋಚಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಬಸ್ ಸ್ಟಾಂಡಿನಲ್ಲಿ, ರೈಲ್ವೇ ಸ್ಟೇಷನ್ನಿನಲ್ಲಿ, ಇಂತಹ ಇನ್ನೂ ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರಿಗೆ, ಹೃದಯ ರೋಗಿಗಳಿಗೆ, ಕ್ಯಾನ್ಸರ್ ಪೀಡಿತರಿಗೆ, ಅನಾಥ ಮಕ್ಕಳಿಗೆ, ವೃಧ್ಧರಿಗೆ, ಇತ್ಯಾದಿ ಇತ್ಯಾದಿ ಸಮಸ್ಯೆಯಲ್ಲಿರುವವರಿಗೆ ಸಹಾಯ ಮಾಡಿ ಅಂತ ಕೆಲವರು ಹಣ ಕೇಳುತ್ತಿರುವುದನ್ನು ನೋಡಿರುತ್ತೀರಿ. ಕೆಲವೊಂದು ಸಂಸ್ಥೆಯವರು ಕೂಡ ಇಂತವರ ಸಹಾಯಕ್ಕಾಗಿ ದೇಣಿಗೆ ನೀಡಿ ಅಂತ ಕೇಳುತ್ತಿರುವುದನ್ನು ಕೂಡ ನೋಡಿರುತ್ತೀರಿ. ಅಥವಾ ಸ್ವತಹ ಅಂಗವಿಕಲರೆ ತಮ್ಮ ಹೊಟ್ಟೆಪಾಡಿಗಾಗಿ ಜನರ ಮುಂದೆ ಕೈ ಚಾಚುತ್ತಿರುವ ದೃಶ್ಯವೂ ಸಹ ನಿಮಗೆ ಹೊಸದಲ್ಲ. ಹೀಗೆ ಕೇಳುತ್ತಿರುವುದನ್ನು ನೋಡಿ ಬಹಳಷ್ಟು ಸಲ ” ಎಲ್ಲಿ ನೋಡಿದ್ರೂ ಹೀಗೆ ಹಣ ಕೇಳ್ತಾ ಇರ್ತಾರೆ, ಆ ಹಣ ತೊಗೊಂದು ಹೋಗಿ ಏನು ಮಾಡ್ತಾರೋ ಏನೋ, ನಾವೇಕೆ ನಮ್ಮ ಹಣವನ್ನು ಇವರಿಗೆ ಕೊಡಬೇಕು ” ಅಂತ ಅಂದುಕೊಳ್ತಾ ಇರ್ತೀವಿ. ದಯವಿಟ್ಟು ಹಾಗೆ ತಿಳ್ಕೊಬೇಡಿ. ಕಾರಣ ಹೇಳ್ತೀನಿ ಕೇಳಿ.

ಎಲ್ಲರೂ ಸುಳ್ಳು ಹೇಳಿಕೊಂಡು ಹಣ ಕೇಳುತ್ತಿರುವುದಿಲ್ಲ, ಆದರೆ ಅವರ ಮಧ್ಯೆ ಕುರಿಯ ಮಂದೆಯ ನಡುವೆ ತೊಳಗಳಂತೆ ಮೋಸಗಾರರು, ಸುಳ್ಳು ಹೇಳಿ ಹಣ ಕೇಳುವವರೂ ಕೂಡ ಖಂಡಿತ ಇದ್ದಾರೆ. ಆದ್ದರಿಂದ ಕೇಳುತ್ತಿರುವವರನ್ನು ಸರಿಯಾಗಿ ಗಮನಿಸಿ. ಅವರು ನಿಜವಾಗಿಯೂ ಕಷ್ಟದಲ್ಲಿರುವವರು ಅಥವಾ ನಿಜವಾಗಿಯೂ ಕಷ್ಟದಲ್ಲಿರುವವರಿಗಾಗೆ ಹಣ ಕೇಳುತ್ತಿರುವವರು ಅಂತ ನಿಮ್ಮ ಮನಸ್ಸು ಹೇಳುತ್ತಿದ್ದರೆ ಅಂತವರಿಗೆ ಸಹಾಯ ಮಾಡಿ. ಏಕೆಂದರೆ ಮೋಸಗಾರರಿಂದಾಗಿ ನಿಜವಾಗಲೂ ಕಷ್ಟದಲ್ಲಿರುವವರಿಗೆ ನೀಡುವ ಸಹಾಯ ನಿಂತುಹೋಗಬಾರದಲ್ಲ. ಹಣ ಕೇಳುತ್ತಿರುವವರನ್ನು ನೋಡಿ, ಅವರು ನಿಜ ಹೇಳುತ್ತಿದ್ದಾರೆ ಅನ್ನಿಸಿದರೆ ನಿಮ್ಮಲ್ಲಿರುವ ನೂರೋ ಇನೂರೋ ರೂಪಾಯಿಗಳಲ್ಲಿ ಒಂದು ರೂಪಾಯಿ ಕೊಡಿ ಸಾಕು. ಐಸ್ ಕ್ರೀಂ ತಿನ್ನುವುದಕ್ಕೋ, ಹೊಟೆಲ್ / ಸಿನಿಮಾ ಹೋಗುವುದಕ್ಕೋ, ದುಬಾರಿ ಬಟ್ಟೆ ಕೊಳ್ಳುವುದಕ್ಕೋ ಅಂತ ನೀವು ಖರ್ಚು ಮಾಡುವ ಹಣದಲ್ಲಿ ಒಂದೊಂದು ರೂಪಾಯಿ ಮಿಗಿಸಿ ಕೊಡಿ. ಅದರಲ್ಲಿ ಇನ್ಯಾರದೋ ಕಷ್ಟ ನೀಗುವುದಕ್ಕೆ ಸಹಾಯ ಮಾಡಿದಂತಾಗುತ್ತದೆ. ಹಸಿವಿನಲ್ಲಿರುವವರಿಗೆ ಆಹಾರ ನೀಡಿದಂತಾಗುತ್ತದೆ.

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂಸ್ಥೆಗಳಿಗೆ ಹೋಗಿ ದೇಣಿಗೆ ನೀಡುವುದು ಅಥವಾ ಕಷ್ಟದಲ್ಲಿರುವ ಒಬ್ಬೊಬ್ಬ ವ್ಯಕ್ತಿಗೆ ಸಂಪೂರ್ಣ ಸಹಾಯ ನೀಡಲು ಸಾಧ್ಯವಾಗದಿದ್ದರು, ಇದೊಂದು ಸಹಾಯ ಹಸ್ತ ನೀಡಲು ನಮ್ಮಿಂದ ಖಂಡಿತ ಸಾಧ್ಯ ಎನ್ನುವುದು ನನ್ನ ಭಾವನೆ. ಬಾಡುತ್ತಿರುವ ಗಿಡಕ್ಕೆ ನೀರೆರೆಯುವ, ಚಿಗುರಲು ಚಿಕ್ಕ ಸಹಾಯ ಮಾಡುವ ಈ ಕೆಲಸದಲ್ಲಿ ನೀವೆಲ್ಲರೂ ನನ್ನ ಜೊತೆಗಿದ್ದೀರಿ ಎಂದುಕೊಂಡಿದ್ದೇನೆ. ಏನಂತೀರಾ? ತಮ್ಮ ಅಭಿಪ್ರಾಯ ತಿಳಿಸಿ. ಸರಿ ಎಂದಾದರೆ ಇಂದಿನಿಂದಲೇ ಹೆಜ್ಜೆ ಇಡೋಣ ತಡ ಏಕೆ?

ನನ್ನ ಮನದ ಮತ್ತಷ್ಟು ಮಾತುಗಳು

ಹರುಕು ಬಟ್ಟೆ ಧರಿಸಿದವರೆಲ್ಲ ಬಿಕ್ಷುಕರಲ್ಲ, ಬಡವರೂ ಅಲ್ಲ
ಹಣವಂತರೂ ಧರಿಸುವರು ಹರುಕು ಬಟ್ಟೆ
ಹಣವಿಲ್ಲದೇ ಅಲ್ಲ ಫ್ಯಾಶನ್ಗಾಗಿ

ನಾನು ಹೃದಯದಿಂದ ಪ್ರೀತಿಸುತ್ತೇನೆ ಎಂದರೆ ನಂಬಿಬಿಡಬೇಡಿ
ಒಡೆದು, ಒಳಹೊಕ್ಕಿ ನೋಡಿದವರ್‍ಯಾರು ಅವರ ಹೃದಯದಲ್ಲಿ
ತೋರಿಸಲು ಅವರೇನು ಹಾರ್ಟ್ ಪೆಶೆಂಟ್ ಅಲ್ಲ
ನೋಡಲು ನೀವೇನೂ ಹಾರ್ಟ್ ಸ್ಪೆಶಲಿಸ್ಟ್ ಅಲ್ಲವಲ್ಲ

ಜೋರಾಗಿ ಹರಿಯುತ್ತಿರುವ ನೀರಿನಲ್ಲಿ ಬಿಟ್ಟ ಕಾಗದದ ದೋಣಿಯಂತೆ ನಮ್ಮ ಮನಸು
ಅತ್ತಿತ್ತ ಹೊಯ್ದಾಡುತ್ತಿರುವುದು, ಯಾವ ಭಾವನೆಗಳ ಅಳೆಯಲ್ಲಿ ಕೊಚ್ಚಿಕೊಂಡು ಹೋಗುವುದೋ
ಯಾವ ದುಃಖಕ್ಕೆ ಮುಳುಗುವುದೋ, ಯಾವ ಸಂತಸಕ್ಕೆ ತೇಲುವುದೋ ಬಲ್ಲವರಾರು

ಮನೆಯ ಕಸವನ್ನು ಗುಡಿಸಿ ಎಷ್ಟು ಚೊಕ್ಕವಾಗಿಟ್ಟುಕೊಂಡರೇನು ಪ್ರಯೋಜನ
ಮನದಲ್ಲಿ ಕಸದ ರಾಷಿಯೇ ತುಂಬಿರಲು

ದುಃಖ ಎಂಬುದು ಸಂತೋಷವನ್ನು ನುಂಗಿಹಾಕುತ್ತದೆ
ನಮ್ಮ ಮನಸ್ಸಿಗೆ ಶಾಂತತೆಯ ನೀರೆರೆದು, ತಾಳ್ಮೆಯ ಉುಟ ಉಣಿಸಿ
ಬಲಪಡಿಸಿ, ಭದ್ರಪಡಿಸಿ ದುಃಖವನ್ನು ಮೆಟ್ಟಿನಿಲ್ಲುವ ಶಕ್ತಿನೀಡಿ ಸಂತಸಕ್ಕೆ

ಮತ್ತಷ್ಟು ಚುಟುಕಗಳು

ಬಣ್ಣದ ಬಟ್ಟೆ

ಏಯ್ ಬಣ್ಣ ಬಣ್ಣದ ಚಿಟ್ಟೆ
ನಿನ್ನಂತೆಬಟ್ಟೆ ಧರಿಸಲು ಆಸೆ ಪಟ್ಟೇ
ಖರೀದಿಸಿ ಕಿಸೆ ಖಾಲಿಯಾದಾಗ ಕಣ್ಣು ಕಣ್ಣು ಬಿಟ್ಟೆ

ಫ್ಲರ್ಟ್

ಹೂವಿಂದ ಹುವಿಗೆ ಹಾರುವ ದುಂಬಿ
ಇಂದು ಒಂದೇ ಹೂವಿನ ಮೇಲೆ ಸುಮ್ಮನೇ ಕುಳಿತಿದೆ ಏಕೋ
ಫ್ಲರ್ಟ್ ಮಾಡಿ ಸಾಕಾಯಿತೇನೋ.

ಕಲೆ

ಕಲೆಗಳಿಲ್ಲದ ಚಂದ್ರಮನೆಂದರೆ
ಮೋಡವೆಯಿಲ್ಲದ ಹರೆಯದ ಹೆಣ್ಣಿನ ಮೊಗದಂತೆ

ಸಂಬಳ

ನೀ ಬರುವ ದಾರಿ ಕಾಯುತ್ತಾ ಬಾಗಿಲಲ್ಲೇ ನಿಂತಿದ್ದೇನೆ
ಶಾಪಿಂಗ್, ಸುತ್ತಾಟ ಯಾವುದು ಇಲ್ಲದೇ
ನಿನ್ನ ಬಗೆಗಿನ ಕಾಳಜಿಗಲ್ಲದೇ ಹೋದರು
ನಿನ್ನ ಸಂಬಳದ ಮೇಲಿನ ಪ್ರೀತಿಗಾಗಿ

ಜುಟ್ಟು

ನಿನ್ನ ಜುಟ್ಟು ನನ್ನ ಕಯ್ಯಲ್ಲಿ ಎಂದು ಯಾರಾದರೂ ಹೇಳಿದರೆ ಕೋಪಿಸಿಕೊಳ್ಳಬೇಡ
ತಿಂಗಳಿಗೊಮ್ಮೆ ನಿನ್ನ ಜುಟ್ಟು ಹಜಾಮನ ಕಯ್ಯಲ್ಲೇ ತಾನೇ

ಪ್ರೀತಿಯ ಆಳ

me6
ನಾನು ನಿನ್ನನ್ನು ಪ್ರೀತಿಸುತ್ತೇನೆ ರಬ್ಬರ್ ಬ್ಯಾಂಡಿನಷ್ಟು
ಆ ನೆಪದಲ್ಲಾದರೂ ದಿನವೂ ನೀನು ನನ್ನ ತಲೆಯೇರಿ ಕುಳಿತುಕೊಳ್ಳಬಹುದೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕಣ್ಣ ಕಾಡಿಗೆಯಷ್ಟು
ಸದಾ ನೀ ನನ್ನ ನೋಟದಲ್ಲಿ, ಕಣ್ರೆಪ್ಪೆಯಲ್ಲಿ ಹುಡುಗಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಮೂಗುತಿಯಷ್ಟು
ನನ್ನ ಉಸಿರಿಗೂ ನಿನ್ನ ಸ್ಪರ್ಶದ ಅನುಭವವಾಗಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕಿವಿ ಓಲೆಯಷ್ಟು
ನಿನ್ನ ಪಿಸು ದನಿ ನನ್ನ ಕಿವಿಯಲ್ಲಿ ಕೇಳುತ್ತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಲಿಪಸ್ಟಿಕ್ ನಷ್ಟು
ನನ್ನ ಅಧರದ ಮೇಲೆ ಕುಳಿತು ಮಧುವನ್ನು ಹೀರುತ್ತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕರಿಮಣಿಯಷ್ಟು
ಎಂದೆಂದೂ ನೀನು ನನ್ನ ಹೃದಯದ ಮೇಲೆ ಕುಳಿತು ಅದರ ಬಡಿತವಾಗಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನಾನು ಧರಿಸುವ ಬಟ್ಟೆಯಷ್ಟು
ಸದಾ ನಿನ್ನ ಸುಮಧುರ ಸ್ಪರ್ಶದ ಅನುಭವ ನನಗಾಗುತ್ತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕೈ ಬಳೆಯಷ್ಟು
ಸಂಗತಿಯಾಗಿ ನೀ ನನ್ನ ಕೈ ಹಿಡಿದು ಸಾಗು ಎಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕಾಲ್ಗೆಜ್ಜೆಯಷ್ಟು
ನಿನ್ನ ಹೆಜ್ಜೆಯೊಂದಿಗೆ ನನ್ನ ಹೆಜ್ಜೆ ಬೆರೆಸಿ ಮುನ್ನಡೆಸು ಎಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನೀ ಕೊಟ್ಟ ಕೈ, ಕಾಲು ಉಂಗುರಗಳಷ್ಟು
ಒಂದೊಂದು ಬೆರಳುಗಳಲ್ಲೂ ನಿನ್ನ ಚೈತನ್ಯ ಬೆರೆತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಹಣೆಯ ಬೊಟ್ಟಿನಷ್ಟು
ನೀ ಹಚ್ಚಿದ ಕುಂಕುಮ ಎಂದೆಂದೂ ನಾ ನಿನ್ನವಳೆಂದು ಸಾರಿ ಹೇಳಲೆಂದು

ಅರ್ಥವಾಯಿತೇ ಗೆಳೆಯ
ನನ್ನ ಪ್ರೀತಿಯ ಆಳ

(Dedicated to my sweet husband)

ಚುಟುಕಗಳು

ಎಲೆಯ ಮೇಲಿನ ನೀರು

ಆಗ ತಾನೇ ಬಂದು ನಿಂತಿತ್ತು ಮಳೆ
ಎಲೆಗಳಿಂದ ತೊಟ್ಟಿಕ್ಕುತ್ತಿತ್ತು ಒಂದೊಂದೇ ಹನಿ
ತನಗೆ ನೀರುಣಿಸಿ ತಂಪಾಗಿಸಿದ್ದಕ್ಕಾಗಿ ಬಂದ ಆನಂದ ಭಾಷ್ಪವೋ
ತನ್ನ ಅನುಮತಿ ಇಲ್ಲದೇ ತೋಯಿಸಿ ಚಳಿ ಹುಟ್ಟಿಸಿದ್ದಕ್ಕಾಗಿ ಬಂದ ಕಣ್ಣೀರೋ
ನಾನರಿಯದಾದೆ

ಸೋನೆ ಮಳೆ

ಸೋನೆ ಮಳೆ ಸಣ್ಣದಾಗಿ ಸುರಿಯುತ್ತಿದ್ದರು
ಅದರ ಆನಂದವನ್ನು ಅನುಭವಿಸಲು ನನ್ನಿಂದಾಗುತ್ತಿಲ್ಲ
ಸೋನೆ ಮಳೆಯಲ್ಲೇ ಮರೆಯಾದ ಇನಿಯನ ನೆನಪು
ಮನದಲ್ಲಿ ಇನ್ನೂ ಕಾಡುತ್ತಿದೆಯಲ್ಲ

ಹೊಸ ಚಪ್ಪಲ್

ಹೊಸದಾಗಿ ಕೊಂಡ ಚಪ್ಪಲ್ ಕಚ್ಚುತ್ತಿತ್ತು ಕಾಲು
ತನ್ನನ್ನು ಮೆಟ್ಟಿ, ಉರುತುಂಬಾ ಸುತ್ತಿ ಸವೆಸಿದ್ದಕ್ಕಾಗಿ ಕೋಪವೇನೋ

ಪ್ರೀತಿಯ ನಾಟಕ

ನೀನು ಸ್ವಲ್ಪ ದಿನ ಉರಲ್ಲಿಲ್ಲವಲ್ಲ ಎಂಬ ಬೇಸರಕ್ಕಿಂತ
ಮತ್ತೆ ತಿರುಗಿಬರುವೆಯಲ್ಲ ಎಂಬ ಬೇಜಾರೆ ಹೆಚ್ಚು
ತಿರುಗಿ ಬಂದರು ತೊಂದರೆಯಿಲ್ಲ ಮತ್ತೆ ಅದೇ ಪ್ರೀತಿಯ
ನಾಟಕವಾಡಬೇಕಲ್ಲ ಎಂಬ ಭಯ ಅದಕ್ಕೂ ಹೆಚ್ಚು

ಬಂಧಿ

ನಿನ್ನನ್ನು ಬಂಧಿಸಲೆಂದು ಹಣೆದ ಪ್ರೀತಿಯ ಬಲೆಯಲ್ಲಿ
ನಿನ್ನೊಂದಿಗೆ ನಾನು ಸಿಲುಕಿಕೊಂಡೆನಲ್ಲ
ಇದರಲ್ಲಿ ಬಂಧಿಸಿದವರಾರು ಬಂಧಿ ಯಾರು ಎಂದೇ ತಿಳಿಯದಾಯಿತಲ್ಲ

ಮಂಚ

ಮಲಗುವ ಮಂಚ ಕರ ಕರ ಎಂದು ಸದ್ದು ಮಾಡುತ್ತಿತ್ತು
ನನ್ನುನ್ನು ಹೊರಲಾರದ ಕಷ್ಟಕ್ಕೋ, ತಿಗಣೆಗಳ ಕಾಟ ಕ್ಕೊ
ತನ್ನ ಅಸಮಾಧಾನವನ್ನು ಈ ರೀತಿ ವ್ಯಕ್ತಪಡಿಸುತ್ತಿತ್ತು

ಮಗು

ಮನೆಯಲ್ಲಿರುವವರು ನಾವಿಬ್ಬರೇ
ಆದರೆ ನಮಗಿಬ್ಬರಿಗೂ ಒಂದೊಂದು ಮಗುವಿದೆ
ನನಗೆ ನನ್ನ ಮಗುವಿನ ಮೇಲೆ ಅತ್ಯಂತ ಪ್ರೀತಿ
ನನ್ನವರಿಗೆ ಅವರ ಮಗುವಿನ ಮೇಲೆ ಅಪಾರ ಮಮತೆ

ತನ್ನ ಮರಿ ಹೊನ್ನ ಮರಿ ಎಂಬಂತೆ
ನನ್ನ ಮಗುವೆ ನನಗೆ ಎಲ್ಲರಿಗಿಂತ ಆಕರ್ಷಕ
ನನ್ನವರಿಗೆ ಅವರ ಮಗುವೆ ಬಲು ಸುಂದರ
ಒಟ್ಟಾರೆ ಎರಡು ಮಕ್ಕಳು ಚೆನ್ನವೇ

ನನ್ನ ಮಗು ತುಸು ದೊಡ್ಡದು
ಶಾಂತ ಸ್ವಭಾವ, ಹಠ, ತೀಟೆ ಬಹಳ ಕಮ್ಮಿ
ಅದು ಬೇಕು ಇದು ಬೇಕು ಎಂಬ ಹಠವಿಲ್ಲ
ಇಸೆಕ್ರೀಂ, ಚಾಕ್ಲೇಟ್ ಬೇಕೆಂದು ಎಂದೂ ಕಾಡಿಲ್ಲ

ನನ್ನವರ ಮಗುವೊ ತುಸು ಚಿಕ್ಕದು
ಶುದ್ದ ತಲೆ ಹರಟೆ, ಆಟ, ತೀಟೆ ಎಲ್ಲ ಜಾಸ್ತಿ
ಬೇರೆ ವಸ್ತುಗಳು ಬೇಕೆಂಬ ರಗಳೆ ಇಲ್ಲದೇ ಇದ್ರು
ಇಸೆಕ್ರೀಂಗಾಗಿ ಯಾವಾಗ್ಲೂ ಕಾಟ

ನನ್ನ ಮಗು ಬಹು ಬೇಗ ದುಃಖ ಪಡುವುದಿಲ್ಲ
ಅತಿಯಾದ ಸಂತೋಷವನ್ನು ವ್ಯಕ್ತಪಡಿಸುವುದಿಲ್ಲ
ಅಸಮಾಧಾನ, ಸಿಟ್ಟು, ಎಲ್ಲ ಬಹಳ ಕಮ್ಮಿ
ಸುಖ ದುಃಖ ಸಮೆಕ್ರತ್ವ ಎಂಬಂತೆ ಎಲ್ಲವೂ ಸಮಾನ ಅದಕ್ಕೆ

ನನ್ನವರ ಮಗುವಿಗೆ ಸ್ವಲ್ಪ ಬೇಜಾರಾದರೂ ದುಃಖ ಉಕ್ಕಿ ಬರುತ್ತದೆ
ಸಂತೋಷವಾದರೆ ಕುಣಿದು ಕುಪ್ಪಳಿಸುತ್ತದೆ
ಸಿಟ್ಟು ಬಂದರೆ ಅಸಮಾಧಾನವಾದರೆ ಗುಮ್ಮನೇ ಕುಳಿತಿರುತ್ತದೆ
ಎಲ್ಲ ಭಾವನೆಗಳನ್ನು ಬೇರೆ ಬೇರೆ ತರದಲ್ಲಿ ಅನುಭವಿಸುವ ಸ್ವಭಾವ ಅದಕ್ಕೆ

ನನ್ನ ಮಗು ಘಟನೆ ಕಹಿ ಇರಲಿ ಸಿಹಿ ಘಟನೆ ಇರಲಿ
ಎಲ್ಲವನ್ನು ಬೇಗ ಮರೆತುಬಿಡುತ್ತದೆ
ಯಾರ ಬಗೆಗೂ ಸಿಟ್ಟು ದ್ವೇಷ ಇಲ್ಲ
ಆದದ್ದು ಆಯಿತು ಎಂದು ಎಲ್ಲವನ್ನು ಮರೆತು ಬಿಡುವುದು ಈ ಮಗುವಿನ ಮನಸ್ಸು

ನನ್ನವರ ಮಗುವಿಗೆ ನೆನಪಿನ ಶಕ್ತಿ ಹೆಚ್ಚು
ಬಹಳ ಕಹಿ ಅಥವಾ ಬಹಳ ಸಿಹಿ ಘಟನೆಗಳನ್ನು ಬೇಗ ಮರೆಯುವುದಿಲ್ಲ
ದ್ವೇಷ ಸಾಧಿಸುವ ಸ್ವಭಾವ ಇಲ್ಲದೇ ಹೋದರು
ನೋವಿನ ಬರೆ, ಸಂತೋಷದ ಗೆರೆಗಳನ್ನು ಬೇಗ ಮರೆಯದು ಈ ಮಗುವಿನ ಹೃದಯ

ನನ್ನ ಮಗು ಮನೆಯಲ್ಲಿದ್ದರು ಅದರ ಪಾಡಿಗೆ ಅದು
ತನ್ನ ಲೋಕದಲ್ಲಿ, ತನ್ನ ಕೆಲಸದಲ್ಲಿ ಮುಳುಗಿರುತ್ತದೆ
ಅದನ್ನು ಸುಧಾರಿಸುವ ಕಷ್ಟ ಇಲ್ಲ, ಬುಧ್ಧಿ ಹೇಳುವ ಗೋಜ಼ಿಲ್ಲಾ
ತೀಟೆ ಮಾಡದೇ ಸುಮ್ಮನೇ ಕೂತಿರು ಎಂದು ಹೆದರಿಸುವ ಕೆಲಸವಿಲ್ಲ

ನಮ್ಮವರ ಮಗು ಅವರು ಮನಯಲ್ಲಿದ್ದರೆ ತೀಟೆ ಮಾಡುತ್ತಲೇ ಇರುತ್ತದೆ
ಅದರ ಕೆಲಸಗಳ ಮಧ್ಯ ನಮ್ಮವರಿಗೊಂದಿಷ್ಟು ಕಾಟ ಕೊಡುತ್ತಾ ಇರುತ್ತದೆ
ತರಲೆ ಮಕ್ಕಳಿಗಿರುವ ಎಲ್ಲ ಗುಣಗಳು, ಅಭ್ಯಾಸಗಳು ಇದಕ್ಕಿವೆ
ಕೆಲವೊಮ್ಮೆ ಸುಮ್ಮನೇ ಕೂರಿಸಲು ಗದರಿಸುವ, ಮುದ್ದಿನಿಂದ ಹೇಳುವ ಅವಶ್ಯಕತೆ ಇದೆ

ಹಬ್ಬ ಹರಿದಿನಗಳು, ಜನುಮದಿನಗಳಂತಹ ಸಂದರ್ಭಗಳಲ್ಲಿ
ತುಂಬಾ ಸಂಭ್ರಮ, ಸಡಗರ ವ್ಯಕ್ತಪಡಿಸುವುದು ನನ್ನವರ ಮಗು
ನನ್ನವರ ಮಗುವಿನ ಸಂತಸವನ್ನು ನೋಡಿ ಖುಷಿ ಪಡುವುದು ನನ್ನ ಮಗು
ನನ್ನ ಮಗು ಸನ್ಯಾಸಿಯಾಗಬೇಕಿತ್ತು ಎಂದು ಒಮ್ಮೊಮ್ಮೆ ನನ್ನ ತಮಾಷೆ

ಮಗು ಮಗು ಎಂದು ಹೇಳಿ ಮಗು ಯಾರೆಂದು ಹೇಳಬೇಕಲ್ಲ
ಮನೆಯಲ್ಲಿರುವ ಇಬ್ಬರಲ್ಲಿ ನನಗೆ ನನ್ನವರು ಮಗು
ನನ್ನವರಿಗೆ ನಾನೇ ಮಗು
ಈಗ ಹೇಳಿ ನಿಮಗ್ಯಾವ ಮಗು ಇಷ್ಟ ಎಂದು.

baby-2

ಹೌಸ್ ವೈಫ್

ಚಿತ್ರಕಲೆ, ಸಂಗೀತ ಮುಂತಾದ ವಿಧ ವಿಧವಾದ ಕಲೆಗಳಂತೆಯೇ ಚೆನ್ನಾಗಿ, ರುಚಿಕಟ್ಟಾದ ಅಡುಗೆ ಮಾಡುವುದೂ ಒಂದು ಕಲೆ. ಜಗತ್ತಿನಲ್ಲಿ ಬಹಳಷ್ಟು ಜನ ಅಡುಗೆ ಮಾಡುತ್ತಾರೆ. ಆದರೆ ಎಲ್ಲರೂ ರುಚಿ ರುಚಿಯಾಗೇ ಮಾಡುತ್ತಾರೆ ಅಂತ ಏನಿಲ್ಲವಲ್ಲ. ರುಚಿಯಾಗಿ ಅಡುಗೆ ಮಾಡುವುದಕ್ಕೂ ತಾಳ್ಮೆ, ಪರಿಶ್ರಮ, ಶ್ರದ್ಧೆ, ಅನುಭವ ಎಲ್ಲ ಬೇಕು. ಅಡುಗೆ ಮಾಡುವುದು ಎಲ್ಲರೂ ಸ್ವಲ್ಪ ಮಟ್ಟಿಗಾದರೂ ಕಲಿಯುವಂತಹ ಒಂದು ಕಲೆ.

ಹೌಸ್ ವೈಫ್ ಅಂದ ತಕ್ಷಣ “ಓ ನೀನು ಕೆಲಸಕ್ಕೆ ಹೋಗ್ತಾ ಇಲ್ವಾ?” ಅಂತ ಮುಗೆಳೆಯುವವರೂ ಇದ್ದಾರೆ. ಹೌಸ್ ವೈಫ್ ಅಂದರೆ ಬರೇ ಮನೆಯಲ್ಲಿ ಅಡುಗೆ ಮಾಡಿಕೊಂಡು ಕುಳಿತಿರುವವರು ಅನ್ನುವ ಭಾವನೆ. ಕೆಲವರು ತಾವು ಮನೆಯಲ್ಲಿರುವವರು, ಹೊರಗೆ ಹೋಗಿ ಕೆಲಸ ಮಾಡೋರಲ್ಲ ಅಂತ ಹೇಳೋಕೆ ಹಿಂಜರಿತಾರೆ. ಅವರ ಬಗ್ಗೆನೆ ಅವರಿಗೆ ಕೀಳರಿಮೆ. ನಾನೇನು ಮಾಡುತ್ತಿಲ್ಲ, ಗಂಡನ ಹತ್ತಿರ ಹಣ ತೆಗೆದುಕೊಳ್ಳಬೇಕಲ್ಲ ಎಂಬ ಭಾವನೆ.

ಇಡೀ ದಿನ ಮನೆಯಲ್ಲಿದ್ದು, 3 ಹೊತ್ತು ರುಚಿಯಾದ ಅಡುಗೆ ಮಾಡಿ, ಗಂಡನ (ಮಕ್ಕಳಿದ್ದರೆ ಮಕ್ಕಳ) ಅವಶ್ಯಕತೆಗಳನ್ನು ನೋಡಿಕೊಂಡು, ಮನೆಯ ಸ್ವಚ್ಛತೆ ಮತ್ತು ಇತರ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುವುದು ಯಾವುದಕ್ಕೆ ಕಮ್ಮಿ ಹೇಳಿ? ನಾನು ಸಹ ಕೆಲವೊಮ್ಮೆ ಹೀಗೆ ಯೋಚಿಸುತ್ತಿದ್ದೆ. ನಾನು ಹೊರಗೆ ಹೋಗಿ ಹಣ ಸಂಪಾದಿಸಿಕೊಂಡು ಬಂದರೆ ಮಾತ್ರ ಗೌರವ,ಇಲ್ಲವಾದರೆ ನಾನು ಏನು ಮಾಡುತ್ತಿಲ್ಲ, ನನ್ನವರ ಮೇಲೆ ಹೊರೆಯಾಗಿದ್ದೇನೆ ಅಂತೆಲ್ಲಾ ಯೋಚಿಸುತ್ತಿದ್ದೆ. ಆದರೆ ನನ್ನ ಈ ಯೋಚನೆಯನ್ನು ತಿಳಿದ ನನ್ನವರು ಹೇಳಿದ ಮಾತು ಇದು. ” ಮನೆಯಲ್ಲಿದ್ದು ನನ್ನ ಅವಶ್ಯಕತೆಗಳನ್ನೆಲ್ಲ ನೋಡಿಕೊಂಡು, ಮನೆಯ ಆಗು ಹೋಗುಗಳನ್ನು ನೋಡಿಕೊಂಡು ನನಗೆ ಹೊರಗೆ ದುಡಿಯುವ ಶಕ್ತಿ ಕೊಡುವವಳು ನೀನು. ನೀನು ನನ್ನ ಮೇಲೆ ಹೊರೆಯಾಗಿಲ್ಲ. ನಿನ್ನ ಪ್ರೋತ್ಸಾಹ ಇದ್ದಾರೆ ಮಾತ್ರ ನಾನು ಏನನ್ನಾದರೂ ಮಾಡಲು ಸಾಧ್ಯ. ನೀನು ಮನೆಯಲ್ಲಿ ದುಡಿಯುತ್ತೀಯ, ನಾನು ಹೊರಗೆ ಅಷ್ಟೇ. ನಾನು ದುಡಿಯುವುದರಲ್ಲಿ ನಿನಗೂ ನನ್ನಷ್ಟೇ ಹಕ್ಕಿದೆ” ಅಂತ ತಿಳಿಸಿ ಹೇಳಿದರು. ನನಗೂ ಅದು ನಿಜ ಅನ್ನಿಸಿತು. ಆಗಿನಿಂದ ನಾನು ನನ್ನ ವಿಚಾರಧಾರೆಯನ್ನು ಬದಲಾಯಿಸಿಕೊಂಡಿದ್ದೇನೆ. ನನ್ನ ಹಾಗೆ ಯೋಚಿಸುವವರು ಬಹಳಷ್ಟು ಜನ ಇದ್ದಾರೆ. ನೀವು ಕೂಡ ನಿಮ್ಮ ವಿಚಾರಧಾರೆಯನ್ನು ಬದಲಾಯಿಸಿಕೊಳ್ಳಿ. ಹೊರಗೆ ದುಡಿಯುವ ಮನಸ್ಸಿದ್ದರೆ, ಅನುಕೂಲವಿದ್ದರೆ ಹೊರಗೆ ಹೋಗಿ ಕೆಲಸ ಮಾಡಬಹುದು. ಇಲ್ಲವಾದರೆ ಮನೆಯ ಆಗು ಹೋಗುಗಳನ್ನು ಚೆನ್ನಾಗಿ ನಿಭಾಯಿಸಿ (ಸಂತೋಷದಿಂದ) ನಿಮ್ಮನ್ನು ನೀವು ಕೀಳಾಗಿ ಕಾಣಬೇಡಿ.

ನಾನು ಸಹ ವರ್ಷದ ಹಿಂದಷ್ಟೇ ಹೊಸದಾಗಿ ಗೃಹಿಣಿಯ ಪಟ್ಟವನ್ನು ಹೊಂದಿದವಾಳಾದ್ದರಿಂದ ಅಡಿಗೆಯಲ್ಲಿ ಅಷ್ಟೊಂದು ನುರಿತವಳಲ್ಲ. ಆದರೂ ನಾನು ಕಲಿತಂತಹ ಕೆಲವು ಅಡಿಗೆಗಳನ್ನು ಇಲ್ಲಿ ಹಾಕಿದ್ದ್ಡೇನೆ. ಒಮ್ಮೆ ಭೇಟಿ ಕೊಟ್ಟು ನೋಡಿ ತಮ್ಮ ಅಭಿಪ್ರಾಯ ತಿಳಿಸಿ.

ranjanah.blogspot.com

pic-12
pic-22